ಕಾರವಾರ: ಜಿಲ್ಲೆಯ ಗೋವಾ ಗಡಿ ಪ್ರದೇಶದ ಮೂಲಕ ರಾಜ್ಯಕ್ಕೆ ಮಾದಕ ವಸ್ತುಗಳ ಸಾಗಾಟ ನಡೆಯುವ ಬಗ್ಗೆ ಮತ್ತು ಅನಧಿಕೃತವಾಗಿ ಮದ್ಯ ಸಾಗಾಟವಾಗುವ ಬಗ್ಗೆ ಪರಿಶೀಲಿಸಿ, ಅತ್ಯಂತ ಕಟ್ಟಿನಿಟ್ಟಿನ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ ನೀಡಿದರು.
ರಾಜ್ಯ ಸರ್ಕಾರವು ರಾಜ್ಯದಲ್ಲಿ ಮಾದಕ ವಸ್ತುಗಳ ನಿರ್ಮೂಲನೆ ಕುರಿತು ಯುದ್ದ ಸಾರಿದ್ದು, ಗಡಿಯ ಮೂಲಕ ರಾಜ್ಯದೊಳಗೆ ಮಾದಕ ವಸ್ತುಗಳ ಸರಬರಾಜು ನಡೆಯದಂತೆ ಪೊಲೀಸ್ ಇಲಾಖೆ ಹೆಚ್ಚು ಜಾಗೃತವಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ನಿರಂತರವಾಗಿ ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡೂ ವರೆ ವರ್ಷದಲ್ಲಿ ರಸ್ತೆ ಅಪಘಾತಗಳಿಂದ 589 ಜನ ಮರಣಹೊಂದಿದ್ದು, 3899 ಮಂದಿ ಗಾಯಾಳುಗಳಾಗಿದ್ದಾರೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ಹೆದ್ದಾರಿಯಲ್ಲಿನ ಬ್ಲಾಕ್ ಸ್ಟಾಟ್ ಗಳಲ್ಲಿ ಅಗತ್ಯ ದುರಸ್ತಿಗಳನ್ನು ಮತ್ತು ಅಗತ್ಯವಿರುವಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಮತ್ತು ಹೆದ್ದಾರಿ ಪ್ರಾದಿಕಾರದ ಮೂಲಕ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅವರು ಸೂಚಿಸಿದರು.ಸೈಬರ್ ಕ್ರೈಮ್ ಅಪರಾಧಗಳ ಬಗ್ಗೆ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳು ಕಡಿಮೆ ಇದ್ದು, ಸೈಬರ್ ಅಪರಾಧಗಳ ವ್ಯಾಪ್ತಿಯನ್ನು ಅಧಿಕಾರಿಗಳು ಸರಿಯಗಿ ಅರ್ಥ ಮಾಡಿಕೊಂಡು ಪ್ರಕರಣಗಳನ್ನು ದಾಖಲಿಸುವಂತೆ ಮತ್ತು ಯಾವುದೇ ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ವಿಳಂಬ ಮಾಡದಂತೆ ಹಾಗೂ ಎಲ್ಲ ಠಾಣೆಗಳಲ್ಲಿ ಸೈಬರ್ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದರು.
ಅನಧಿಕೃತ ಹೋ ಸ್ಟೇಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲ ಹೋಂ ಸ್ಟೇ ಗಳಲ್ಲಿ ಮದ್ಯ ಸರಬರಾಜು ಮಾಡಲು ಸೂಕ್ತ ಅನುಮತಿ ಪಡೆದಿರುವ ಬಗ್ಗೆ ಪರಿಶೀಲಿಸಿ, ಜಿಲ್ಲೆಯಲ್ಲಿರುವ ವಿದೇಶಿ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರಲ್ಲಿರುವ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿ. ಹೋಂ ಸ್ಟೇ , ರೆಸಾರ್ಟ್ಗಳಲ್ಲಿ ನಡೆಯುವ ಪಾರ್ಟಿಗಳಲ್ಲಿ ಮಾದಕ ವಸ್ತು ಬಳಕೆಯಾಗುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದರು.
ಶಿರೂರು ಗುಡ್ಡ ಕುಸಿತ ಮತ್ತು ಕಾಳಿ ನದಿ ಸೇತುವೆ ಕುಸಿತ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ , ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳುವ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ರಾಜ್ಯದ ಎಲ್ಲ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.