ರಾಮನಗರ: ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಿಖಿಲ್ ಕುಮಾರಸ್ವಾಮಿ ಕುಟುಂಬ 113.4 ಕೋಟಿ ರು. ಮೌಲ್ಯದ ಚರಾಸ್ತಿ - ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ನಿಖಿಲ್ ಅವರ ಚರಾಸ್ತಿ ಮೌಲ್ಯ 29.34 ಕೋಟಿ ರು. ಸ್ಥಿರಾಸ್ತಿ ಮೌಲ್ಯ 78.14 ಕೋಟಿ ರು. ಸೇರಿ ಒಟ್ಟು 107.48 ಕೋಟಿ ರು. ಹಾಗೂ ಪತ್ನಿ ರೇವತಿ ಬಳಿ 43.43 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ಮತ್ತು 5.49 ಕೋಟಿ ರು. ಮೌಲ್ಯದ ಚರಾಸ್ತಿ ಸೇರಿ ಒಟ್ಟು 5.92 ಕೋಟಿ ರು.ಮೌಲ್ಯದ ಆಸ್ತಿ ಇದೆ. ನಿಖಿಲ್ ಮತ್ತು ರೇವತಿ ಕುಟುಂಬದ ಒಟ್ಟು ಚರಾಸ್ತಿ - ಸ್ಥಿರಾಸ್ತಿ ಮೌಲ್ಯ 113.4 ಕೋಟಿ ರು.ಗಳಾಗಿದೆ.
2021-22ರಲ್ಲಿ ನಿಖಿಲ್ ವಾರ್ಷಿಕ 4.27 ಕೋಟಿ ರು. ಆದಾಯ ಘೋಷಿಸಿದ್ದರೆ, 2022-23ನೇ ಸಾಲಿನಲ್ಲಿ 2.38 ಕೋಟಿ ರು., ಈಗ ಸಲ್ಲಿಸಿರುವ ಆಸ್ತಿ ವಿವರಣೆಯಲ್ಲಿ 2023-24ನೇ ಸಾಲಿಗೆ 1.69 ಕೋಟಿ ರು.ಗಳಿವೆ ಎಂದು ಹೇಳಿಕೊಂಡಿದ್ದಾರೆ. ನಿಖಿಲ್ ಅವರ ಬಳಿ ಸದ್ಯ ನಗದು 27,760 ರು. ಇದ್ದರೆ, ಪತ್ನಿ ಬಳಿ 3.53 ಲಕ್ಷ ರು.ಇದೆ. ನಿಖಿಲ್ ಮಾಲೀಕತ್ವದ ಚನ್ನಾಂಬಿಕ ಫಿಲಂಸ್ ನಲ್ಲಿ 4.38 ಲಕ್ಷ ರು.ಇದೆ. ವಿವಿಧ ಬ್ಯಾಂಕುಗಳಲ್ಲಿ ವೈಯಕ್ತಿಕ 24.23 ಕೋಟಿ ರು. ಇದೆ. ಎನ್.ಕೆ. ಎಂಟರ್ಟೈನ್ಮೆಂಟ್ಸ್ ಹೆಸರಿನ ಖಾತೆಯಲ್ಲಿ 20.48 ಲಕ್ಷ ರು. ಇದೆ. ಚನ್ನಾಂಬಿಕ ಫಿಲಿಮ್ಸ್ ಹೆಸರಿನ ಖಾತೆಗಳಲ್ಲಿ 5. 92 ಲಕ್ಷ ರು.ಇದೆ.ಕಸ್ತೂರಿ ಮೀಡಿಯಾ ಪ್ರೈ.ಲಿ ಇವರ ಹೂಡಿಕೆ 76 ಲಕ್ಷ ರು. ಹಾರಿಜಾನ್ ರಿಯಾಲಿಟಿ ಸಂಸ್ಥೆಯಲ್ಲಿ 60 ಲಕ್ಷ ರು., ನಾರ್ಥ ಆರ್ಕ್ ಸಂಸ್ಥೆಯಲ್ಲಿ 30 ಲಕ್ಷ ರು. ಹೂಡಿಕೆ ಮಾಡಿದ್ದಾರೆ. ನಿಖಿಲ್ ಅವರ ಬಳಿ 39.84 ಲಕ್ಷ ರು. ಮೌಲ್ಯದ ಇನ್ನೋವಾ ಹೈಕ್ರಾಸ್ ಕಾರಿದೆ. ಇವರ ಮಾಲೀಕತ್ವದ ಎನ್.ಕೆ.ಎಂಟರ್ಟೈನ್ಮೆಂಟ್ ಸಂಸ್ಥೆಯಿಂದ ಖರೀದಿಸಿರುವ ರೇಂಜ್ ರೋವರ್ ಕಾರು, ವ್ಯಾನಿಟಿ ವ್ಯಾನ್ (ಜಿಮ್), ಇನ್ನೋವ ಕ್ರಿಸ್ಟ ಕಾರು, ವ್ಯಾನಿಟಿ ವ್ಯಾನ್ (ಕ್ಯಾರವಾನ್) ವಾಹನಗಳಿವೆ.
ಸ್ಥಿರಾಸ್ತಿ ವಿವರ:
ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿ ಅವರಿಗೆ 4.65 ಕೋಟಿ ಮತ್ತು ತಂದೆ ಕುಮಾರಸ್ವಾಮಿ ಅವರಿಗೆ 9.18 ಲಕ್ಷ ರು. ಸಾಲ ಬಾಕಿ ಕೊಡಬೇಕಿದೆ. ನಿಖಿಲ್ ಅವರು ಬ್ಯಾಂಕುಗಳು ಸೇರಿದಂತೆ ಒಟ್ಟು 70.44 ಕೋಟಿ ರು. ಸಾಲ ಕೊಡಬೇಕಾಗಿದೆ. ತಮಿಳುನಾಡಿನ ಸೇಲಂನಲ್ಲಿರುವ ಪೆರಿಯಾರ್ ವಿವಿಯಲ್ಲಿ ನಿಖಿಲ್ ರವರು ಬಿಬಿಎ ಪದವಿ ಪಡೆದಿದ್ದಾರೆ.