ಅಜ್ಜಯ್ಯನ ಮುಂದೆ ಬಂದು ಪ್ರಮಾಣ ಮಾಡಲಿ : ಮತ್ತೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು

KannadaprabhaNewsNetwork |  
Published : Aug 06, 2024, 12:39 AM ISTUpdated : Aug 06, 2024, 12:58 PM IST
DKS HDK

ಸಾರಾಂಶ

ಸದಾಶಿವನಗರದಲ್ಲಿ ವಿಧವೆಯರ ನಿವೇಶನವನ್ನು ಗನ್ನಿಟ್ಟು ಹೆದರಿಸಿ ರಿಜಿಸ್ಟರ್ ಮಾಡಿಸಿಕೊಂಡ ಅವರು, ಚಾಮುಂಡೇಶ್ವರಿ ಅಥವಾ ನೊಣವಿನಕೆರೆ ಅಜ್ಜಯ್ಯನ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಮತ್ತೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

  ಚನ್ನಪಟ್ಟಣ  : ಕಂಡಕಂಡವರ ಆಸ್ತಿಗಳನ್ನು ಸರಣಿ ಕಬ್ಜಾ ಮಾಡುತ್ತಿರುವ ವ್ಯಕ್ತಿಯೊಬ್ಬ ನನ್ನ ಆಸ್ತಿ, ನನ್ನ ತಂದೆಯವರ ಆಸ್ತಿಯ ಬಗ್ಗೆ ಮಾತನಾಡ್ತಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ವಿಧವೆಯರ ನಿವೇಶನವನ್ನು ಗನ್ನಿಟ್ಟು ಹೆದರಿಸಿ ರಿಜಿಸ್ಟರ್ ಮಾಡಿಸಿಕೊಂಡ ಅವರು, ಚಾಮುಂಡೇಶ್ವರಿ ಅಥವಾ ನೊಣವಿನಕೆರೆ ಅಜ್ಜಯ್ಯನ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಮತ್ತೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು. 

ಮೈಸೂರು ಚಲೋ ಪಾದಯಾತ್ರೆಯ 3ನೇ ದಿನ ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಎಚ್ಡಿಕೆ, ಸದಾಶಿವನಗರದಲ್ಲಿ ಐವರು ವಿಧವಾ ತಾಯಂದಿರ ಬಳಿ ನಿವೇಶನಗಳ ಸೇಲ್ ಅಗ್ರಿಮೆಂಟ್ ಮಾಡಿಕೊಂಡು, ಆ ನಿವೇಶನಕ್ಕೆ ಸಂಪೂರ್ಣ ಹಣ ಕೊಟ್ಟಿಲ್ಲ. ಕಾಂಗ್ರೆಸ್ ನಾಯಕ ಅಲ್ಲಂ ವೀರಭದ್ರಪ್ಪ ಅವರು ಒಂದು ನಿವೇಶನ ಖರೀದಿಸುವುದಾಗಿ ಅಡ್ವಾನ್ಸ್ ಕೊಡುತ್ತಾರೆ. ಆದರೆ, ಅವರು ಪೂರ್ಣ ಮೊತ್ತ ಕೊಡುವುದಿಲ್ಲ. ಆಮೇಲೆ ಈ ವ್ಯಕ್ತಿ ಮಧ್ಯ ಪ್ರವೇಶ ಮಾಡುತ್ತಾರೆ. ಈ ವ್ಯಕ್ತಿ ಮಂತ್ರಿಯಾದ ಮೇಲೆ ರಾತ್ರೋರಾತ್ರಿ ಅವರನ್ನು ಕರೆಸಿ ಹೆದರಿಸಿ, ಬೆದರಿಸಿ ಸೇಲ್ ಅಗ್ರಿಮೆಂಟಿಗೆ ರುಜು ಹಾಕಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿ ದೇವೇಗೌಡರ ಬಗ್ಗೆ ಮಾತನಾಡುತ್ತಾರೆಂದು ಗುಡುಗಿದರು.

 ಗನ್ನಿಟ್ಟು ವಿಧವಾ ತಾಯಂದಿರ ನಿವೇಶನಗಳನ್ನು ರಿಜಿಸ್ಟರ್ ಮಾಡಿಸಿಕೊಂಡು, ಕಂಡೋರ ಆಸ್ತಿ ಕಬ್ಜ ಮಾಡುವ ನೀವು, ನನ್ನ ಬಗ್ಗೆ ಮಾತಾಡ್ತಿದ್ದೀರಿ. ಬನ್ನಿ ಪ್ರಮಾಣ ಮಾಡೋಣ. ಅಜ್ಜಯ್ಯನ ಮುಂದೆ ಆಗಲಿ, ತಾಯಿ ಚಾಮುಂಡೇಶ್ವರಿ ಮುಂದೆ ಆಗಲಿ ಪ್ರಮಾಣ ಮಾಡೋಣ. ನೀವೇ ವಿಧಾನಸೌಧಕ್ಕೆ ಬನ್ನಿ ಎಂದು ಕರೆದಿದ್ದರಲ್ಲ. ಅಲ್ಲಿಗೂ ಬರಲು ನಾನು ತಯಾರಿದ್ದೇನೆ. ಬನ್ನಿ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದರು.

ಈಗ ಚನ್ನಪಟ್ಟಣಕ್ಕೆ ಬಂದು ಏನೋ ಉದ್ದಾರ ಮಾಡುತ್ತೇವೆಂದು ಅಣ್ಣ ತಮ್ಮ ಹೇಳ್ತಿದ್ದಾರೆ. ನೂರಾರು ವರ್ಷ ಬಾಳಿ ಬದುಕಿರುವ ಮನೆಗಳಿಗೆ ಈಗ ಬಂದು ಹಕ್ಕುಪತ್ರ ಕೊಡುತ್ತಾರಂತೆ. ಹಾಗಾದರೆ, ರಾಜ್ಯದಲ್ಲಿ ನಿಮ್ಮ ಸರ್ಕಾರ ಬಂದು ಒಂದೂವರೆ ವರ್ಷ ಆಯಿತಲ್ಲವೇ. ಇಷ್ಟು ದಿನ ಏನು ಮಾಡ್ತಿದ್ರಪ್ಪ? ಎಂದು ಪ್ರಶ್ನಿಸಿದರು.ಚನ್ನಪಟ್ಟಣ ಉದ್ಧಾರ ಮಾಡಿರೋದು ಇಲ್ಲಿನ ಜನರಿಗೆ ಚೆನ್ನಾಗಿಯೇ ಗೊತ್ತಿದೆ. ಇಲ್ಲಿನ ಮತ್ತಿಕೆರೆ ಬಳಿ ಕಲ್ಲು ಗೋದಾಮಿದೆ. ಅಲ್ಲಿ ಹೋಗಿ ನೋಡಿ, ಎಷ್ಟು ಕಲ್ಲುಗಳನ್ನು ತಂದು ಗುಡ್ಡೆ ಹಾಕ್ತಿದ್ದೀರಿ? ಎಲ್ಲೆಲ್ಲಿಗೆ ಕಳಿಸುತ್ತಿದ್ದೀರಿ? ನನಗೆ ಗೊತ್ತಿಲ್ಲದ ವಿಷಯವೇ ಎಂದ ಕೇಂದ್ರ ಸಚಿವರು ಬಹಿರಂಗ ಸಭೆಯಲ್ಲಿ ಆ ಕಲ್ಲು ಗೋದಾಮುಗಳ ಪೋಟೊಗಳನ್ನು ತೋರಿಸಿ, ಇದಕ್ಕೆ ಉತ್ತರ ಕೊಡಪ್ಪಾ..? ಎಂದು ಕೇಳಿದರು. 

ದಲಿತ ಕುಟಂಬ ಹಾಳು ಮಾಡಿದ್ದೀರಿ: ಕನಕಪುರದ ಎಷ್ಟು ದಲಿತ ಕುಟುಂಬಗಳ ಹಾಳು ಮಾಡಿದ್ದೀರಿ ನೀವು. ಆ ಜನ ಕಣ್ಣೀರು ಹಾಕಿದ್ದನ್ನು ನಾನು ನೋಡಿದ್ದೇನೆ. ಕುಮಾರಸ್ವಾಮಿ ರೈತನ ಮಗ ಅಲ್ಲ ಎಂದಿದ್ದೀರಿ, ಫ್ಯಾಂಟ್ ತೆಗೆದು ಪಂಚೆ ಹಾಕಿದ್ರೆ ರೈತ ಅಲ್ಲ ಎಂದಿದ್ದೀರಿ, ಬನ್ನಿ, ಬಿಡದಿಗೆ ಬಂದು ನೋಡಿ, ೨೦ ಟನ್ ಕೊಬ್ಬರಿ ಬೆಳೆದಿದ್ದೇನೆ. ತೆಂಗು, ಬಾಳೆ, ಅಡಕೆಯಲ್ಲಿ 50 ಲಕ್ಷ ರೈತನಾಗಿ ಸಂಪಾದಿಸಿದ್ದೇನೆ. 

ನಿಮ್ಮಿಂದ ಇದು ಸಾಧ್ಯವೇ? ಎಂದು ಪ್ರಶ್ನಿಸಿದರು.ಚನ್ನಪಟ್ಟಣಕ್ಕೆ ದೇವೇಗೌಡರ ಕಾಲದಲ್ಲಿ ಇಗ್ಗಲೂರು ಜಲಾಶಯ ಕಟ್ಟಲು ಹೋದರು. ಕೆಲವರು ಆಗಲ್ಲ ಎಂದರು. ಆದರೆ, ದೇವೇಗೌಡರು ಪಟ್ಟು ಹಿಡಿದು ಆ ಯೋಜನೆ ಕಾರ್ಯಗತ ಮಾಡಿದರು. ಇವತ್ತು ಈ ನೆಲಕ್ಕೆ ಆ ಜಲಾಶಯ ಜೀವನಾಡಿ ಆಗಿದೆ. ಚನ್ನಪಟ್ಟಣದಲ್ಲಿ ಕೆರೆಗಳನ್ನು ತುಂಬಿಸುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗಿಲ್ಲ. ನಾನು, ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ದಾಗ ಕೆರೆಗಳನ್ನು ತುಂಬಿಸಲಾಯಿತು. ಯೋಗೇಶ್ವರ್ ಮಂತ್ರಿಯಾಗಿ ಆ ಕೆಲಸ ಮಾಡಿದರು. ಕಾಂಗ್ರೆಸ್ ಏನೂ ಮಾಡಿಲ್ಲ ಎಂದರು.

ಬೆಲೆ ಏರಿಕೆ:ರಾಜ್ಯದಲ್ಲಿ ನಿಮ್ಮ ಆಡಳಿತ, ನಿರ್ವಹಣೆ ಕೆಟ್ಟದಾಗಿದೆ. ಗ್ಯಾರಂಟಿಗಳಿಂದ ಯಾರಿಗೆ ಲಾಭವಾಗಿದೆ ಅದರಿಂದ, ಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ? ರೈತ ಟಿಸಿ ದರ ಎಷ್ಟಾಗಿದೆ? ಸರಣಿ ಹಗರಣಗಳ ರೀತಿಯಲ್ಲಿ ಸರಣಿ ಬೆಲೆ ಏರಿಕೆ ಮಾಡಿದ್ದೀರಿ. ರೈತರಿಗೆ ಆದಾಯ ಇಲ್ಲ. ರೈತರಿಗೆ ಏನು ಕೊಟ್ಟಿದ್ದೀರಿ? ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದೀರಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ದಲಿತರ ಬಗ್ಗೆ ಇವರು ಚರ್ಚೆ ಮಾಡ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದರೋಡೆ ಮಾಡಿದ್ದಾರೆ. ಹಣ ದೋಚಿರೋ ಸಿದ್ದರಾಮಯ್ಯ, ಡಿಕೆಶಿ ಇಲ್ಲಿ ಬಂದು ದಲಿತರ ಬಗ್ಗೆ ಚರ್ಚೆ ಮಾಡ್ತೀರಾ ಎಂದು ವಾಗ್ದಾಳಿ ನಡೆಸಿದರು.

ಗಿಫ್ಟ್ ಕೂಪನ್ ಹಂಚಿ 136 ಸೀಟು ಗೆದ್ದರು: ನಾವು ೧೩೬ ಸೀಟು ಗೆದ್ದು ಅಧಿಕಾರಕ್ಕೆ ಬಂದಿದೇವೆ ಎಂದು ಕಾಂಗ್ರೆಸ್ ನಾಯಕರು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಲುಲು ಮಾಲ್ ಕೂಪನ್ ಹಂಚಿ ರಾಜಕಾರಣ ಮಾಡಿದೆ. ಅದನ್ನು ತೆಗೆದುಕೊಂಡು ಹೋಗಿ ಲುಲು ಮಾಲ್ ನಲ್ಲಿ ಕೊಟ್ಟರೆ ಅದರಲ್ಲಿ ದುಡ್ಡೇ ಇಲ್ಲ. ಜನರಿಗೆ ಕಾಂಗ್ರೆಸ್ ನವರು ಮೋಸ ಮಾಡಿದ್ದೀರೆಂದರು. 

ನಮ್ಮಿಂದಲೇ ಬೆಳೆದವರು ಒಬ್ಬರು ನಮ್ಮ ಪಕ್ಷದಲ್ಲೇ ಇದ್ದು, ನಮ್ಮಿಂದಲೇ ಬೆಳೆದು ದೊಡ್ಡವರಾಗಿ, ಈಗ ನಮ್ಮ ಬಗ್ಗೆಯೇ ಲಘುವಾಗಿ ಮಾತನಾಡ್ತಾರೆಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಎಚ್‌ಡಿಕೆ ಟಾಂಗ್ ನೀಡಿದರು. ಒಂದ್ ಕಾಲದಲ್ಲಿ ಏನು ಗತಿ ಇಲ್ಲದೆ, ನಮ್ಮ ಪಕ್ಷದಲ್ಲಿದ್ದು ಬಲಿತ, ಮಜ್ಜಿಗೆ ಕಳ್ಳ ಚನ್ನಪಟ್ಟಣಕ್ಕೆ ಬಂದು ಭಾಷಣ ಬೇರೆ ಮಾಡ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ನನ್ನ ಪ್ಯಾಂಟ್ ಒಳಗೆ ಖಾಕಿ ಚಡ್ಡಿ ಇದೆ ಎಂದ ಜಮೀರ್, ನನ್ನ ಜತೆ ಇದ್ದಾಗ ಅವರ ತಾಯಿ ಹೆಸರಲ್ಲಿ ಯಾವ ರೀತಿ ಪ್ರಮಾಣ ಮಾಡಿದ್ದಾರೆಂಬುದು ಗೊತ್ತಿದೆ. ಮಕ್ಕಾದಲ್ಲಿರುವ ದೇವರೇ ಅವರನ್ನು ನೋಡಿಕೊಳ್ಳಲಿ. ಇವರು ನನ್ನ ಆಸ್ತಿ ಬಗ್ಗೆ ಮಾತನಾಡ್ತಾರೆ. ಆದರೆ ಇವರ ಆಸ್ತಿ ಎಷ್ಟು ಅನ್ನುವುದು ಗೊತ್ತಾ? ಎಂದು ಕೇಳಿದ ಅವರು, ಈ ವ್ಯಕ್ತಿಯ ಆಸ್ತಿ ಎರಡು ಸಾವಿರ ಪಟ್ಟು ಹೆಚ್ಚಾಗಿದೆ. ಕೇಂದ್ರ ತನಿಖಾ ಸಂಸ್ಥೆ ಅವರಿಗೆ ನೋಟಿಸ್ ಕೊಟ್ಟಂತೆ ನನಗೆ ಯಾರೂ ನೋಟಿಸ್ ಕೊಟ್ಟಿಲ್ಲ ಎಂದು ಟಾಂಗ್ ಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ