ನಿಖಿಲ್ ಟೈಂಪಾಸ್ ರಾಜಕಾರಣಿ: ಶಾಸಕ ಪಿ.ರವಿಕುಮಾರ್ ವ್ಯಂಗ್ಯ

KannadaprabhaNewsNetwork | Published : Jul 3, 2025 11:47 PM
೩ಕೆಎಂಎನ್‌ಡಿ-೧ಮಂಡ್ಯ ತಾಲೂಕಿನ ಚಿಕ್ಕಮಂಡ್ಯದಿಂದ ಬಿಳಿದೇಗಲು ಗ್ರಾಮದವರೆಗಿನ ಸುಮಾರು ೨೬ ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಚಾಲನೆ ನೀಡಿದರು. | Kannada Prabha

ಸಾರಾಂಶ

ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕಾಮಗಾರಿ ನೆಪವೊಡ್ಡಿ ನೀರು ನಿಲ್ಲಿಸುವುದು ಸರಿಯಲ್ಲ. ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಹೈ-ಪವರ್ ಮೀಟಿಂಗ್ ಮಾಡುವುದಾಗಿ ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ನಾಲೆಗೆ ನೀರು ಹರಿಸುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಿಖಿಲ್ ಕುಮಾರಸ್ವಾಮಿ ಟೈಂಪಾಸ್ ಗಿರಾಕಿ. ಟೂರ್ ಮಾಡೋಕೇಂತ ಜಿಲ್ಲೆಗೆ ಬಂದಿದ್ದೀಯಾ, ಏಳು ದಿನ ಟೂರ್ ಹೊಡ್ಕೊಂಡು ಹೋಗು ಎಂದು ಲಾಟರಿ ಶಾಸಕ ಎಂದು ಜರಿದಿದ್ದ ನಿಖಿಲ್‌ಗೆ ಶಾಸಕ ಪಿ.ರವಿಕುಮಾರ್ ಏಕವಚನದಲ್ಲಿ ಕುಟುಕಿದರು.

ಲಾಟರಿ ಬಗ್ಗೆ ಏನು ಗೊತ್ತು ನಿಮಗೆ?

ಜಿಲ್ಲೆಗೆ ನಿಖಿಲ್ ಏನು ಕೆಲಸ ಮಾಡಿದ್ದಾನೆಂಬುದನ್ನು ಮೊದಲು ಹೇಳಲಿ. ನಾವು ದಿನಾ ಎದ್ದು ಜನರ ಪರ ಕೆಲಸ ಮಾಡುತ್ತಿದ್ದೇವೆ. ಸುಮ್ಮನೆ ಅರಚೋದು, ಕಿರಿಚೋದು, ಕೂಗಾಡೋದ್ರಿಂದ ಮಂಡ್ಯ ಅಭಿವೃದ್ಧಿ ಆಗೋಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಚಾಟಿ ಬೀಸಿದರು.

ನಿಖಿಲ್ ಅವರ ದೊಡ್ಡಪ್ಪ ೧೫೦೦ ಓಟ್‌ನಲ್ಲಿ ಗೆದ್ದಿದ್ದು. ನನಗೆ ೬೨ ಸಾವಿರ ಜನ ಓಟ್ ಹಾಕಿ ಗೆಲ್ಲಿಸಿದ್ದಾರೆ. ನನ್ನನ್ನು ಲಾಟರಿ ಶಾಸಕ ಎಂದು ಹೇಳಿ ಕ್ಷೇತ್ರದ ಜನರಿಗೆ ನೀವು ಅವಮಾನ ಮಾಡಿದ್ದೀರಾ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಓಟಿಗೆ ಬೆಲೆ ಇದೆ. ಈ ರೀತಿ ಲಘುವಾಗಿ ಮಾತನಾಡಬಾರದು ಎಂದು ಹೇಳಿದರು.

ಮಂಡ್ಯವನ್ನು ನಿಮ್ಮ ಕುಟುಂಬಕ್ಕೆ ಗುತ್ತಿಗೆ ಕೊಟ್ಟಿಲ್ಲ. ನೀವೂ ಕೆಲಸ ಮಾಡಿ ಸ್ವಾಗತಿಸುತ್ತೇವೆ. ಕೆಲಸ ಮಾಡುವವರನ್ನು ಸಹಿಸದೆ ಸುಮ್ಮನೆ ಟೀಕೆ ಮಾಡಿ ಮತದಾರರಿಗೆ ಅವಮಾನ ಮಾಡಬೇಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಗೆದ್ದಿದ್ದು ಕೇವಲ ೨ ಸಾವಿರ ಮತಗಳ ಅಂತರದಿಂದ. ಒಂದು ಮತದ ಅಂತರದಿಂದ ಗೆದ್ದವರೂ ಇದ್ದಾರೆ. ಅವರ ದೊಡ್ಡಪ್ಪ ಎಚ್.ಡಿ.ರೇವಣ್ಣ ಗೆದ್ದಿದ್ದು ನನಗಿಂತ ಕಡಿಮೆ ಮತಗಳ ಅಂತರದಲ್ಲಿ. ದೊಡ್ಡಪ್ಪ ಲಾಟರಿಯಿಂದ ಗೆದ್ದಿದ್ದೀರಿ ಅಂತ ಹೇಳಲಿ ಎಂದು ಕುಟುಕಿದರು.

ಮಂಡ್ಯಕ್ಕೆ ಬಂದಿದ್ದಿರಾ ಪಕ್ಷ ಸಂಘಟನೆ ಮಾಡಿ. ಟೀಕೆ ಆರೋಗ್ಯಕರವಾಗಿರಲಿ. ನೀವು ಮಂಡ್ಯಕ್ಕೆ ಏನು ಕೊಟ್ಟಿದ್ದೀರಿ ಹೇಳಿ? ನನ್ನ ಸಹೋದರ. ಮಾತನಾಡಬಾರದು ಅನ್ಕೊಂಡೇ ಕಿವಿಮಾತು ಹೇಳುತ್ತಿದ್ದೇನೆ. ಮತ್ತೊಮ್ಮೆ ವಿಧಾನಸಭೆಗೆ ಬನ್ನಿ ಎಂದು ಆಹ್ವಾನಿಸಿದರು.

ನಾಲೆಗಳಿಗೆ ತಕ್ಷಣವೇ ನೀರು ಹರಿಸಿ:

ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕಾಮಗಾರಿ ನೆಪವೊಡ್ಡಿ ನೀರು ನಿಲ್ಲಿಸುವುದು ಸರಿಯಲ್ಲ. ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಹೈ-ಪವರ್ ಮೀಟಿಂಗ್ ಮಾಡುವುದಾಗಿ ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ನಾಲೆಗೆ ನೀರು ಹರಿಸುವುದಾಗಿ ಭರವಸೆ ನೀಡಿದರು.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಚಿಕ್ಕಮಂಡ್ಯದಿಂದ ಬಿಳಿದೇಗಲು ಗ್ರಾಮದವರೆಗಿನ ಸುಮಾರು ೨೬ ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗುರುವಾರ ಚಾಲನೆ ನೀಡಿದರು.

ಮಂಡ್ಯದ ಗೋಪಾಲಪುರ, ಎಚ್.ಕೋಡಿಹಳ್ಳಿ ಹಾಗೂ ಬಿಳಿದೇಗಲು ಗ್ರಾಮದಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಹಲವು ವರ್ಷಗಳಿಂದ ಚಿಕ್ಕಮಂಡ್ಯ- ಬಿಳಿದೇಗಲು ಮಾರ್ಗದ ರಸ್ತೆ ಗುಂಡಿಬಿದ್ದಿತ್ತು. ಸುಮಾರು ೧೦ ಕೋಟಿ ರು. ವೆಚ್ಚದಲ್ಲಿ ಆಯ್ದ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿತ್ತು ಎಂದರು.

ಇದೀಗ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡಲಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಹೊಸ ರೂಪ ಕೊಡಲು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಮತಷ್ಟು ಅಭಿವೃದ್ಧಿಗೆ ಜನರು ಸಹಕರಿಸುವಂತೆ ಮನವಿ ಮಾಡಿದರು.

PREV