ದುಬೈನಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿರುವ ನೀಲೇಶ್: ರವಿ ಹೆಗಡೆ

KannadaprabhaNewsNetwork |  
Published : Sep 01, 2025, 01:03 AM IST
ಕ್ಯಾಪ್ಶನ್ | Kannada Prabha

ಸಾರಾಂಶ

ಇಷ್ಟು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಇವತ್ತು ಪ್ರಪಂಚದ ಅತಿ ವೇಗವಾಗಿ ಬೆಳೆಯುತ್ತಿರುವ, ದೊಡ್ಡ ಆರ್ಥಿಕ ಶಕ್ತಿಯಾದ ದುಬೈನಲ್ಲಿ ಉದ್ಯಮ ಸಾಮ್ರಾಜ್ಯ ಸ್ಥಾಪಿಸಿರುವ ನೀಲೇಶ್ ಅವರನ್ನು ಕೊಟ್ಟಿರುವಂತಹ ಈ ಹಳ್ಳಿಗೆ ಧನ್ಯವಾದ ಎಂದರು.

ಕನ್ನಡಪ್ರಭ ವಾರ್ತೆ ತುಮಕೂರು

ದುಬೈನಲ್ಲಿ ಅಷ್ಟು ದೊಡ್ಡ ಉದ್ಯಮ ಸಮೂಹ ಕಟ್ಟಿ ಬೆಳೆಸಿದರೂ ಪರ್ವ ಗ್ರೂಪ್‌ನ ಸಂಸ್ಥಾಪಕ ನೀಲೇಶ್ ಅವರಿಗೆ ಒಂದಿಷ್ಟು ಅಹಂಕಾರವಿಲ್ಲ ಎಂದು ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕರಾದ ರವಿ ಹೆಗಡೆ ಪ್ರಶಂಸಿಸಿದರು.

ಅವರು ಪರ್ವ ಗ್ರೂಪ್ ಸಂಸ್ಥಾಪಕ ನೀಲೇಶ್ ಅವರು ತಮ್ಮ ಸ್ವಗ್ರಾಮ ಕೊರಟಗೆರೆ ತಾಲೂಕು ಹನುಮಂತಯ್ಯನ ಪಾಳ್ಯದಲ್ಲಿ ನಿರ್ಮಿಸಿರುವ ದೊಡ್ಡಮ್ಮ ದೇವಿ ಸ್ಥಿರಬಿಂಬ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಷ್ಟು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಇವತ್ತು ಪ್ರಪಂಚದ ಅತಿ ವೇಗವಾಗಿ ಬೆಳೆಯುತ್ತಿರುವ, ದೊಡ್ಡ ಆರ್ಥಿಕ ಶಕ್ತಿಯಾದ ದುಬೈನಲ್ಲಿ ಉದ್ಯಮ ಸಾಮ್ರಾಜ್ಯ ಸ್ಥಾಪಿಸಿರುವ ನೀಲೇಶ್ ಅವರನ್ನು ಕೊಟ್ಟಿರುವಂತಹ ಈ ಹಳ್ಳಿಗೆ ಧನ್ಯವಾದ ಎಂದರು.ಅವರು ಹಳ್ಳಿಯಲ್ಲಿ ಇದ್ದಿದ್ದರೆ ನನಗೆ ನೀಲೇಶ್ ಪರಿಚಯವೇ ಆಗುತ್ತಿರಲಿಲ್ಲ. ಅವರು ನನಗೆ ಪರಿಚಯ ಆಗಿದ್ದು ದುಬೈನಲ್ಲಿ. ದುಬೈನಲ್ಲಿ ಕನ್ನಡಿಗರೊಬ್ಬರು ಉದ್ಯಮ ಕಟ್ಟಿ ಬೆಳೆಸಿದ್ದಾರೆ ಎನ್ನುವ ವಿಷಯ ತಿಳಿದು ಪರಿಚಯವಾಯಿತು. ಅಷ್ಟು ದೊಡ್ಡ ಉದ್ಯಮ ಸಮೂಹ ಕಟ್ಟಿದರೂ ಅದರ ಒಂದಿಷ್ಟು ಅಹಂಕಾರ ಅವರಲ್ಲಿ ಬರಲಿಲ್ಲ ಅನ್ನುವುದು ದೊಡ್ಡ ವಿಷಯ ಎಂದರು.

ಸಾಮಾನ್ಯವಾಗಿ ಯಾವುದಾದರೂ ಒಂದು ಊರಲ್ಲಿ ಅಂಗಡಿ ನಡೆಸುವ ಒಬ್ಬರು ಕಾರು ತೆಗೆದುಕೊಂಡರೆ ಸಾಕು ಅವರಿಗೆ ಅಹಂಕಾರ ಬಂದಿರುತ್ತದೆ. ಆದರೆ, ನೀಲೇಶ್ ಅವರಿಗೆ ಒಂದಿಷ್ಟು ಅಹಂಕಾರವಿಲ್ಲ. ನಾನು ಇವತ್ತು ಈ ಗ್ರಾಮಕ್ಕೆ ಬಂದಿದ್ದರೆ ದೇವರು ಕರೆದುಕಂಡು ಬಂದಿಲ್ಲ. ನೀಲೇಶ್ ಅವರ ಪ್ರೀತಿ ನನ್ನನ್ನು ಇಲ್ಲಿ ಕರೆ ತಂದಿತು. ನೀಲೇಶ್ ಅವರು ಭೇಟಿಯಾದಗಲೆಲ್ಲಾ ಉದ್ಯಮ, ಬಿಲ್ಡಿಂಗ್, ದುಡ್ಡು, ಸ್ಟಾಕ್, ಅಂತಾರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಚರ್ಚಿಸಿದರೂ ಅಷ್ಟೇ ಆತ್ಮೀಯವಾಗಿ ಹಳ್ಳಿಯ ಜನರ ಬಗ್ಗೆ ಮಾತನಾಡುತ್ತಾರೆ. ಹಳ್ಳಿಯ ಬಗ್ಗೆ ಏನಾದರೂ ಮಾತನಾಡಬೇಕು ಅಂತಾ ಅಭಿಲಾಷೆ ಅವರಲ್ಲಿ ಸದಾ ಇರುತ್ತದೆ. ಈಗ ದೇವಸ್ಥಾನ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದರು.

ಶ್ರೀರಂಗಪಟ್ಟಣದ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ನಮಗೆ ದೇವರಿಗೆ ಕೊಡುವ ಶಕ್ತಿ ಇಲ್ಲ. ಏಕೆಂದರೆ ನಮಗೆಲ್ಲಾ ಕೊಟ್ಟಿರುವುದು ದೇವರೇ ಆಗಿದ್ದು, ನಾವು ದೇವರಿಗೆ ವಸ್ತು ರೂಪದಲ್ಲಿ ಏನನ್ನು ಕೊಡಲಾಗದು. ಆದರೆ ನಾವು ದೇವರಿಗೆ ನಿರ್ಮಲ ಭಕ್ತಿಯನ್ನು ಕೊಡಬಹುದು ಎಂದರು.

ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ, ನಮ್ಮ ದೇಶ ಸಂಸ್ಕೃತಿ ಮತ್ತು ಸಂಮೃದ್ಧಿಯ ಪ್ರತೀಕ. ನಾವು ಈ ಪುಣ್ಯಭೂಮಿಯಲ್ಲಿ ಇರುವುದೇ ನಮ್ಮಪುಣ್ಯ. ಪ್ರತಿಯೊಬ್ಬರೂ ಸನ್ನಡೆಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಬೆಳ್ಳಾವಿಯ ಕಾರದ ಮಠದ ಪೀಠಾಧ್ಯಕ್ಷ ಕಾರದ ವೀರ ಬಸವ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿಯೇ ಹನುಮಂತನಯ್ಯನ ಪಾಳ್ಯ ಒಂದು ಅದೃಷ್ಟದ ಗ್ರಾಮ. ಇಲ್ಲಿ ನಿರ್ಮಾಣವಾದಂತಹ ಶಕ್ತಿದೇವತೆ ಕಾವಲಮ್ಮ ದೇವಾಲಯ ನೂರಾರು ಸ್ವಾಮೀಜಿಗಳ ಸಾನ್ನಿಧ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ತಿಪಟೂರಿನ ಷಡಾಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ದೊಡ್ಡಮ್ಮ ದೇವಿ ದೇವಸ್ಥಾನವು ಧಾರ್ಮಿಕ ಕೇಂದ್ರವಾಗಿದ್ದು, ಜನರ ನಂಬಿಕೆ- ಭಕ್ತಿ,ಸಂಸ್ಕೃತಿ- ಸಂಪ್ರದಾಯಗಳನ್ನು ಬಲಪಡಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದರು.

ಧಾರ್ಮಿಕ ಮುಖಂಡ ಎಚ್.ಪಿ, ನೀಲೇಶ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಕಲ್ಲುಗಳಿಗೆ ದೇವರ ರೂಪವನ್ನು ಕೊಟ್ಟಿದ್ದೇವೆ. ಈಗ ಇದು ಶಕ್ತಿಪೀಠವಾಗಿದೆ. ದೇವಾಲಯದಲ್ಲಿ ಇರುವಂತಹ ಪ್ರತಿಯೊಂದು ವಸ್ತುವೂ ಒಂದೊಂದರ ಪ್ರತೀಕವಾಗಿದ್ದು, ಗ್ರಾಮಸ್ಥರೆಲ್ಲರೂ ಧಾರ್ಮಿಕ ಸಂಸ್ಕೃತಿಯಲ್ಲಿ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತೆ ಭಾವನಾ ಬೆಳಗೆರೆ, ಪರ್ವ ಗ್ರೂಪ್‌ನ ಸಹ ಸಂಸ್ಥಾಪಕ ಶಶಿಧರ ನಾಗರಾಜಪ್ಪ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ಮಾಜಿ ಖನಿಜ ನಿಮಗದ ಅಧ್ಯಕ್ಷ ಲಿಂಗಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷ ರಾಜಣ್ಣ, ಉದ್ಯಮಿಗಳಾದ ಭಾಸ್ಕರ್, ಸ್ಮಿತ, ಪ್ರಭು, ಸಿದ್ದೇಶ್, ಮೋನಿಕಾ ಮಂದಣ್ಣ, ಓಂಕಾರ್, ಗ್ರಾಮದ ಹಿರಿಯ ಮುಖಂಡ ಹನುಮಂತರಾಯಪ್ಪ, ಶಿಕ್ಷಕ ಹರೀಶ್, ನರಸಿಂಹರಾಜು ಸೇರಿದಂತೆ ಗ್ರಾಮಸ್ಥರು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

ಕಳೆದ ಮೂರು ದಿವಸಗಳಿಂದ ಹೋಮ, ಪೂಜೆ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದಿತ್ತು. ಭಾನುವಾರ ಪ್ರಾತಃಕಾಲದಲ್ಲಿ ನೇತ್ರೋಲನ, ಪ್ರಾಣ ಪ್ರತಿಷ್ಠಾಪನೆ, ಕಲಶಪೂಜೆ, ಮಹಾಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಚಂಡಿಕಾ ಹೋಮ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಹಲವು ಧಾರ್ಮಿಕ ಕಾರ್ಯೇಕ್ರಮಗಳು ಅತ್ಯಂತ ವ್ಯವಸ್ಥಿತವಾಗಿ ನೆರವೇರಿದವು.

ಬೆಳಗ್ಗೆಯಿಂದ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನದ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿಯೊಂದಿಗೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.

- - -

-10000_309.JPG:

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹನುಮಂತಯ್ಯನಪಾಳ್ಯದಲ್ಲಿ ಭಾನುವಾರ ನಡೆದ ದೊಡ್ಡಮ್ಮ ದೇವಿ ಸ್ಥಿರಬಿಂಬ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವದಲ್ಲಿ ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಶ್ರೀರಂಗಪಟ್ಟಣದ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ. ಹನುಮಂತನಾಥ ಸ್ವಾಮೀಜಿ, ನೀಲೇಶ್ ಮತ್ತಿತರರು ಇದ್ದಾರೆ. -444_848.JPG: ಕಾರ್ಯಕ್ರಮದಲ್ಲಿ ನೀಲೇಶ್ ದಂಪತಿಯನ್ನು ಗೌರವಿಸಲಾಯಿತು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ