ನಾಳೆಯಿಂದ ನೀನಾಸಂ-ಧಾತ್ರಿ ನಾಟಕೋತ್ಸವ

KannadaprabhaNewsNetwork |  
Published : Dec 22, 2023, 01:30 AM IST
ಬಳ್ಳಾರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಅವರು ನೀನಾಸಂ ನಾಟಕೋತ್ಸವ ಕುರಿತು ಮಾಹಿತಿ ನೀಡಿದರು. | Kannada Prabha

ಸಾರಾಂಶ

ರಂಗತೋರಣ ಸಾಂಸ್ಕೃತಿಕ ಸಂಘಟನೆ ಬಳ್ಳಾರಿಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ರಂಗತೋರಣ ಕಲಾಮಂದಿರದಲ್ಲಿ ಡಿ. 23ರಿಂದ ಮೂರುದಿನಗಳ ನೀನಾಸಂ-ಧಾತ್ರಿ ನಾಟಕೋತ್ಸವ ಹಮ್ಮಿಕೊಂಡಿದೆ.‌ ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಆವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ರಂಗತೋರಣದ ಕಲಾಮಂದಿರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕಗಳ ಪ್ರದರ್ಶನ ನಡೆಯಲಿದೆ.

ಬಳ್ಳಾರಿ: ರಂಗತೋರಣ ಸಾಂಸ್ಕೃತಿಕ ಸಂಘಟನೆ ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ರಂಗತೋರಣ ಕಲಾಮಂದಿರದಲ್ಲಿ ಡಿ. 23ರಿಂದ ಮೂರುದಿನಗಳ ನೀನಾಸಂ-ಧಾತ್ರಿ ನಾಟಕೋತ್ಸವ ಹಮ್ಮಿಕೊಂಡಿದೆ.‌

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ನಾಟಕೋತ್ಸವ ಕುರಿತು ಮಾಹಿತಿ ನೀಡಿದ ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಅವರು, ''''ನಾಟಕ ಕೇವಲ ಮನರಂಜನೆಗಲ್ಲ, ಮನೋವಿಕಾಸಕ್ಕೆ'''' ಎಂದು ಸದಾ ಪ್ರತಿಪಾದಿಸುವ ರಂಗತೋರಣ ಸಂಸ್ಥೆ ಈ ಬಾರಿ ನೀನಾಸಂ ಹಾಗೂ ಧಾತ್ರಿ ರಂಗ ಸಂಸ್ಥೆಗಳ ಜತೆಗೂಡಿ 3 ನಾಟಕಗಳ ಉತ್ಸವವನ್ನು ಆಯೋಜಿಸಿದೆ ಎಂದು ಹೇಳಿದರು.

ರಂಗತೋರಣದ ಕಲಾಮಂದಿರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕಗಳ ಪ್ರದರ್ಶನ ನಡೆಯಲಿದೆ. ಡಿ. 23ರಂದು ಧಾತ್ರಿ ನಾಟಕ-''''ಸೋರುತಿಹುದು ಸಂಬಂಧ'''' ಪ್ರದರ್ಶನಗೊಳ್ಳಲಿದೆ.

ಆಧುನಿಕತೆಯ ಬರದಲ್ಲಿ, ಹೆಣ್ಣು, ಹೊನ್ನು, ಮಣ್ಣಿನ ವ್ಯಾಮೋಹಗಳಿಗೆ ಒಳಗಾಗುವ ಮನುಷ್ಯ, ತನ್ನೊಳಗಿನ ಮನುಷ್ಯತ್ವವನ್ನು ಮರೆತು, ಸಂಬಂಧಗಳಿಗೆ ಸ್ಪಂದಿಸದೆ, ತನ್ನ ಯಾಂತ್ರಿಕ ಬದುಕನ್ನು ಮುಂದುವರಿಸುತ್ತಿದ್ದಾನೆ. ಇಂತಹ ಮನುಷ್ಯ ಸಂಬಂಧಗಳ ಕೊರತೆ ಮತ್ತು ನಿರೀಕ್ಷೆಗಳಿಗೆ ಹಿಡಿದ ಕೈಗನ್ನಡಿ ಈ ನಾಟಕವಾಗಿದೆ. ಮನುಷ್ಯ ಎನ್ನುವ ವಿಶೇಷ ಬುದ್ಧಿಜೀವಿ ತನ್ನ ಬದುಕನ್ನು ಬದುಕಬೇಕಿರುವುದು ಭಾವನಾತ್ಮಕವಾಗಿಯೇ ಹೊರತು, ಯಾಂತ್ರಿಕವಾಗಿ ಅಲ್ಲ ಎಂಬ ವಿಷಯದ ಮೇಲೆ ಈ ನಾಟಕವು ಬೆಳಕು ಚೆಲ್ಲುತ್ತದೆ.

ಡಿ. 24ರಂದು ನೀನಾಸಮ್ ನಾಟಕ - ''''ಹುಲಿಯ ನೆರಳು'''' ಪ್ರದರ್ಶನಗೊಳ್ಳಲಿದ್ದು, ಹುಲಿ ಬೇಟೆಯೊಂದಿಗೆ ಪ್ರಾರಂಭವಾಗುವ ಈ ನಾಟಕ ಕಣ್ಣಿಗೆ ಅಡ್ಡವಾಗಿರುವ ತೋರಿಕೆಯ ಪರದೆಯನ್ನು ಸರಿಸಿ ಸತ್ಯವನ್ನು ಕಾಣುವುದು ಎಂದರೇನು ಎಂಬ ಪ್ರಶ್ನೆಯನ್ನು ನಮ್ಮೆದುರಿಗಿಡುತ್ತದೆ.

ಡಿ. 25ರಂದು ನೀನಾಸಮ್ ನಾಟಕ - ''''ಆ ಲಯ ಈ ಲಯ'''' ಪ್ರದರ್ಶನಗೊಳ್ಳಲಿದ್ದು, ಆಫ್ರಿಕಾದ ವಿದ್ಯಾರ್ಥಿ ಸಮೂಹವೊಂದು ಜನಾಂಗೀಯ ಹಿಂಸೆಗೆ ಪ್ರತಿಕ್ರಿಯಿಸಿದ ಬಗೆಯನ್ನು ಈ ನಾಟಕ ಬಿಚ್ಚಿಡುತ್ತದೆ ಎಂದು‌ ತಿಳಿಸಿದರು.

ಪಾಲಿಕೆ ಸದಸ್ಯ ಮಲ್ಲನಗೌಡ ನಾಟಕೋತ್ಸವಕ್ಕೆ ಚಾಲನೆ ನೀಡುವರು. ವಾಜಪೇಯಿ ಬಡಾವಣೆಯ ಮುಖಂಡ ಭೀಮೇಶ ಸ್ವಾಮಿ ಹಾಗೂ ಎಂಜಿನಿಯರ್ ಸಂಜೀವ್ ಪ್ರಸಾದ್ ಭಾಗವಹಿಸುವರು.

ಎರಡನೇ ದಿನದ ನಾಟಕ ಮುನ್ನದ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಕೆ.ಎ. ವೇಮಣ್ಣ, ಪತ್ರಕರ್ತ ಶಶಿಧರ ಮೇಟಿ ಹಾಗೂ ಸ್ಥಳೀಯ ಮುಖಂಡ ಹೊನ್ನನಗೌಡ ಪಾಲ್ಗೊಳ್ಳುವರು.

ಸಮಾರೋಪ ಸಮಾರಂಭದಲ್ಲಿ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದ ರಾಶಿ ಕೆ. ಪಂಪನಗೌಡ, ವಿಸ್ಡಂ ಲ್ಯಾಂಡ್ ಶಾಲೆಯ ಮುಖ್ಯಸ್ಥ ಎಸ್.ವೈ. ಕಟ್ಟೇಗೌಡ ಹಾಗೂ ವಿ. ರಾಮಚಂದ್ರ ಭಾಗವಹಿಸುವರು ಎಂದು ಪ್ರಭುದೇವ ಕಪ್ಪಗಲ್ಲು ತಿಳಿಸಿದರು.

ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಪಂಪನಗೌಡ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ