ಮಾನವ ಸರಪ‍ಳಿಗೆ ತೊಂಭತ್ತೈದು ಸಾವಿರ ಜನ ಸಾಥ್‌

KannadaprabhaNewsNetwork |  
Published : Sep 16, 2024, 01:59 AM IST
15ಡಿಡಬ್ಲೂಡಿ2ಕರ್ನಾಟಕ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ನಗಾರಿ ಬಾರಿಸುವ ಮೂಲಕ ಪ್ರಜಾಪ್ರಭುತ್ವ ದಿನಾಚರಣೆಗೆ ಸಚಿವ ಸಂತೋಷ ಲಾಡ್‌ ಚಾಲನೆ ನೀಡಿದರು.  | Kannada Prabha

ಸಾರಾಂಶ

ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಧಾರವಾಡದಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ಶಾಲಾ-ಕಾಲೇಜು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಬರೋಬ್ಬರಿ ತೊಂಭತ್ತೈದು ಸಾವಿರ ಜನ ಭಾಗಿಯಾಗುವ ಮೂಲಕ ಇತಿಹಾಸ ದಾಖಲಾಯಿತು.

ಧಾರವಾಡ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮೊಟ್ಟ ಮೊದಲ ಬಾರಿಗೆ ಭಾನುವಾರ ರಾಜ್ಯ ಸರ್ಕಾರ ಆಯೋಜಸಿದ್ದ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಧಾರವಾಡದಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ಶಾಲಾ-ಕಾಲೇಜು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಬರೋಬ್ಬರಿ ತೊಂಭತ್ತೈದು ಸಾವಿರ ಜನ ಭಾಗಿಯಾಗುವ ಮೂಲಕ ಇತಿಹಾಸ ದಾಖಲಾಯಿತು.

ಇಡೀ ರಾಜ್ಯದಲ್ಲಿ ಅತಿ ಹೆಚ್ಚು ನೋಂದಣಿ ಮಾಡಿದ್ದ ಧಾರವಾಡ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದ್ದರಿಂದ ಇಲ್ಲಿಯ ಕರ್ನಾಟಕ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಭ್ರಮಿಸಲಾಯಿತು. ತಾಲೂಕಿನ ತೇಗೂರದಿಂದ ಮಾವಿನಕೊಪ್ಪ ಗ್ರಾಮದ ವರೆಗೆ ಅಂದಾಜು 55 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಲಾಗಿತ್ತು.

ಪ್ರತಿ ಮೀಟರ್‌ಗೆ ಒಬ್ಬರಂತೆ ಸುಮಾರು 60 ಸಾವಿರ ಜನ ಹಾಗೂ ರಾಷ್ಟ್ರೀಯ ಹೆದ್ದಾರಿ, ನಗರ ಪ್ರದೇಶದಲ್ಲಿ ಡಬಲ್ ಲೈನ್ ಮಾಡಲಾಗಿತ್ತು. ಮಾನವ ಸರಪಳಿ ಹಾಗೂ ಕರ್ನಾಟಕ ಕಾಲೇಜು ಮೈದಾನ ಸೇರಿದಂತೆ ಇಂದಿನ ಕಾರ್ಯಕ್ರಮದಲ್ಲಿ 95 ಸಾವಿರಕ್ಕೂ ಹೆಚ್ಚು ಜನ ಪ್ರತ್ಯಕ್ಷವಾಗಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಘ-ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಮಾನವ ಸರಪಳಿ ನಿರ್ಮಿಸುವ ಮೂಲಕ ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವದ ಮಹತ್ವ ಸಾರುವ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಿದರು.

ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ನಗಾರಿ ಬಾರಿಸುವ ಮೂಲಕ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಿದ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಎಲ್ಲರಿಗೂ ಸ್ವಾತಂತ್ರ‍್ಯ, ಸಮಾನತೆ ಹಾಗೂ ಭ್ರಾತೃತ್ವ ದೊರೆಯುವಂತೆ ಮಾಡಿದ್ದಾರೆ. ಪ್ರತಿಯೊಬ್ಬರೂ ದೇಶದ ಏಕತೆಯನ್ನು ಕಾಪಾಡಿಕೊಂಡು ಹೋಗಬೇಕು. ಪ್ರಜಾಪ್ರಭುತ್ವ ಸ್ವಾತಂತ್ರ‍್ಯ, ಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಅತ್ಯುನ್ನತ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಶಕ್ತಿಯುತ ಮತ್ತು ಕ್ರಿಯಾತ್ಮಕ ಶಕ್ತಿಯಾಗಿದೆ. ಭಾರತ ದೇಶ ಅತ್ಯಂತ ಭವ್ಯ, ಶಕ್ತಿಶಾಲಿ ಮತ್ತು ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ದೇಶವಾಗಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, 2007ರಲ್ಲಿ ಜರುಗಿದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೆ. 15ರ ದಿನವನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವೆಂದು ಘೋಷಣೆ ಮಾಡಲಾಗಿದೆ. ವಿಶ್ವಾದ್ಯಂತ ಪ್ರಜಾಪ್ರಭುತ್ವದ ಮೌಲ್ಯಗಳು, ಆದರ್ಶಗಳು, ತತ್ವಗಳು ಮತ್ತು ಅದರ ಅನ್ವಯಿಕತೆಯನ್ನು ಒಳಗೊಂಡ ಬೃಹತ್ ನಿರ್ಣಯ ಹೊರಡಿಸಿದ ಈ ದಿನ ಐತಿಹಾಸಿಕ ದಿನವಾಗಿದೆ. ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಮತ್ತು ಸಾರ್ವತ್ರಿಕ ಮೌಲ್ಯವಾಗಿದೆ. ಪ್ರಜಾಪ್ರಭುತ್ವ ರಕ್ಷಿಸುವುದು, ಅದರ ಮೌಲ್ಯಗಳನ್ನು ಉತ್ತೇಜಿಸುವುದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಉದ್ದೇಶ ಎಂದರು.

ಅಚ್ಚುಕಟ್ಟು ವ್ಯವಸ್ಥೆ

ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಇಸ್ಕಾನ್ ಸಂಸ್ಥೆ ಮತ್ತು ಸಿದ್ಧಾರೂಢ ಮಠ ಟ್ರಸ್ಟ್‌ನಿಂದ ಅಲ್ಪೋಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಮಹಾನಗರ ಪಾಲಿಕೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಶುದ್ಧ ಕುಡಿಯುವ ನೀರಿನ ಕ್ಯಾನ್‌ಗಳನ್ನು ಒದಗಿಸಲಾಗಿತ್ತು. ಜನರ ಸುರಕ್ಷತೆಯ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮೆರಗು ತಂದ ಕಲಾತಂಡಗಳು

ಇಲ್ಲಿಯ ಜುಬ್ಲಿ ವೃತ್ತದಿಂದ ಕರ್ನಾಟಕ ಕಲಾ ಕಾಲೇಜು ಮೈದಾನದ ವರೆಗೆ ನಡೆದ ಮೆರವಣಿಗೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ತಾಯಿ ಭುವನೇಶ್ವರಿ, ಕನಕದಾಸರು, ಭಗತ್ ಸಿಂಗ್ ಸೇರಿದಂತೆ ವಿವಿಧ ಮಹಾನ್ ಪುರುಷರ ವೇಷಭೂಷಣಗಳಲ್ಲಿ ಕಾಣಿಸಿಕೊಂಡು ಮೆರವಣಿಗೆಗೆ ಮೆರಗು ತಂದರು. ದೇಶದ 30 ರಾಜ್ಯಗಳಲ್ಲಿನ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ವಿದ್ಯಾರ್ಥಿಗಳು ಮಿಂಚಿದ್ದರು. ಅಲ್ಲದೇ ಡೊಳ್ಳು ಕುಣಿತ, ಜಗ್ಗಲಗಿ, ಜಾಂಜ್ ಮೇಳ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಮಹಿಳೆಯರ ಕುಂಭ ಮೆರವಣಿಗೆ ಮತ್ತಷ್ಟು ಮೆರಗು ತಂದಿತು.

ಸಸಿ ನೆಟ್ಟರು

ಈ ದಿನದ ನೆನಪಿಗಾಗಿ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದಿಂದ 4180 ವಿವಿಧ ಬಗೆಯ ಸಸಿಗಳನ್ನು ನೆಡುವ ಕಾರ್ಯಕ್ರಮ ಜರುಗಿಸಲಾಯಿತು. ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಾಂಕೇತಿಕವಾಗಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿದರು. ಕೋಟೂರಿನಿಂದ ದುಬ್ಬನಮರಡಿ ಮತ್ತು ಬೋಗುರ ಕ್ರಾಸ್‌ನಿಂದ ಹಳೆ ತೇಗೂರ, ಶಿಂಗನಹಳ್ಳಿ ಕ್ರಾಸ್‌ನಿಂದ ಆದಿಚುಂಚನಗಿರಿ ಮಠ, ಹೊಸಟ್ಟಿಯಿಂದ ಹೊಸಟ್ಟಿ ಕ್ರಾಸ್‌ವರೆಗೆ ರಸ್ತೆಯ ಬದಿಗಳಲ್ಲಿ ಮತ್ತು ಸಲಕಿನಕೊಪ್ಪ, ಬಾಡ ಗ್ರಾಮಗಳಲ್ಲಿನ ಸರ್ಕಾರಿ ಗೋಮಾಳ ಜಮೀನಗಳಲ್ಲಿ ಸಸಿಗಳನ್ನು ನೆಡಲಾಯಿತು.

ಜಿಲ್ಲೆಯ ವಿವಿಧ ಶಾಲೆ-ಕಾಲೇಜು, ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಮತ್ತು ಸಿಬ್ಬಂದಿ ಕರೆತರಲು ತಮ್ಮ ಸಂಸ್ಥೆಗಳ ಮಿನಿ ಮತ್ತು ದೊಡ್ಡ ಬಸ್‌ಗಳು ಅಂದಾಜು 226 ಬಸ್‌ಗಳನ್ನು ಬಳಸಲಾಯಿತು. ಸಾರಿಗೆ ಸಂಸ್ಥೆಯಿಂದ 110 ಬಸ್‌ಗಳನ್ನು, 20 ಬೇಂದ್ರೆ ಸಾರಿಗೆ ಬಸ್‌ಗಳನ್ನು, ಟಾಟಾ ಮಾರ್ಕೋಪೋಲೊ ಕಂಪನಿಯಿಂದ 10 ಬಸ್‌ಗಳು, ವಿವಿಧ ಕಾರ್ಖಾನೆಗಳ ಐದು ಬಸ್‌ಗಳು ಮತ್ತು ವಿವಿಧ ತಾಲೂಕುಗಳಿಂದ ನೌಕರರನ್ನು, ಸಾರ್ವಜನಿಕರನ್ನು ಕರೆದುಕೊಂಡು 20 ಮಿನಿ ಬಸ್‌ಗಳು ಬಂದಿದ್ದವು.

ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಡಾ. ಬಾಬು ಜಗಜೀವನ್ ರಾಂ ಅವರ ಭಾವಚಿತ್ರಗಳಿಗೆ ಗಣ್ಯರು ಪುಷ್ಪ ನಮನ ಅರ್ಪಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸಂವಿಧಾನ ಪೀಠಿಕೆ ಬೋಧಿಸಿದರು.

ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ, ಶಾಸಕ ಎನ್.ಎಚ್. ಕೋನರೆಡ್ಡಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಮಾಜಿ ಸಂಸದರಾದ ಐ.ಜಿ. ಸನದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ಬೃಹತ್ ಭಾರತ ನಕ್ಷೆ ನಿರ್ಮಾಣ

ಕರ್ನಾಟಕ ಕಲಾ ಕಾಲೇಜು ಮೈದಾನದಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಬೃಹತ್ ಮಾನವ ಸರಪಳಿ ಮೂಲಕ ಭಾರತ ನಕ್ಷೆಯನ್ನು ರಚಿಸಿದರು. ಭಾರತದ ನಕ್ಷೆಯಲ್ಲಿ ಕರ್ನಾಟಕ ರಾಜ್ಯದ ಚಿತ್ರಣವನ್ನು ಸಹ ಮೂಡಿಸಿದರು. ಅಲ್ಲದೇ ಮೈದಾನದಲ್ಲಿ 1 ಕಿ.ಮೀ. ಉದ್ದದ ಕರ್ನಾಟಕ ಸಂಕೇತವಾಗಿ ಹಳದಿ ಮತ್ತು ಕೆಂಪು ಬಣ್ಣದ ಬೃಹತ್ ಬಾವುಟವನ್ನು ಪ್ರದರ್ಶನ ಮಾಡಲಾಯಿತು. ಮೈದಾನದ ತುಂಬ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಕ್ಯಾಪ್‌ಗಳನ್ನು ಧರಿಸಿ, ಏಕತೆ ಸಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ