ಅಶ್ವಿನ ಅಮ್ಮಣಗಿ
ಕನ್ನಡಪ್ರಭ ವಾರ್ತೆ ನಿಪ್ಪಾಣಿಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸರಿಯಾಗಿ 100 ವರ್ಷಗಳ ಹಿಂದೆ 1925ರ ಏಪ್ರಿಲ್ 10, 11 ನಿಪ್ಪಾಣಿಗೆ ಭೇಟಿ ನೀಡಿದ್ದರು. ಬಹಿಷ್ಕೃತ ಹಿತಕಾರಿಣಿ ಸಭೆಯ ಎರಡು ದಿನದ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಮತ್ತು ವಸತಿ ಶಾಲೆಯ ಅಗತ್ಯದ ಬಗ್ಗೆ ಮಾತನಾಡಿದ್ದರು. ಆ ಐತಿಹಾಸಿಕ ಭೀಮ ಹೆಜ್ಜೆಗೆ ಶತಮಾನದ ಸಂಭ್ರಮದ ಹಿನ್ನೆಲೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪ್ರಯತ್ನದ ಫಲವಾಗಿ ಇಂದು ನಗರದಲ್ಲಿ ಅತ್ಯಂತ ಭವ್ಯ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಸಚಿವರಾದ ಚಿರಾಗ್ ಪಾಸ್ವಾನ್ ಆಗಮಿಸಲಿದ್ದಾರೆ.
ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕಿ ಜೊಲ್ಲೆ :ನಿಪ್ಪಾಣಿಗೆ ಭೇಟಿ ನೀಡಿ ಏ.11ಕ್ಕೆ 100 ವರ್ಷ ತುಂಬಿದೆ. ಅದು ಅಂತಿಂಥ ಭೇಟಿಯಲ್ಲ, ಬದಲಿಗೆ ಅಂದಿನ ಮುಂಬೈ-ಕರ್ನಾಟಕ ಭಾಗದಲ್ಲಿ ದಲಿತರ ಸಬಲೀಕರಣಕ್ಕೆ ನಾಂದಿ ಹಾಡಿ, ಅದನ್ನು ಗಮನಾರ್ಹವಾಗಿ ಸಾಧಿಸಲು ನಾಂದಿ ಹಾಡಿದಂತಹ ಭೇಟಿ. ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಆಚರಿಸಿದಂತೆ ರಾಜ್ಯ ಸರ್ಕಾರ ಬಾಬಾಸಾಹೇಬರ್ ನಿಪ್ಪಾಣಿ ಭೇಟಿಯ ಶತಮಾನೋತ್ಸವವನ್ನೂ ಆಚರಿಸಬೇಕೆಂದು ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಆದರೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ದೊರಕದ ಹಿನ್ನೆಲೆಯಲ್ಲಿ ಶಶಿಕಲಾ ಜೊಲ್ಲೆ ಅವರು ತಾವೇ ಮುಂದಾಳತ್ವ ವಹಿಸಿ ಈ ಒಂದು ಬೃಹತ್ ಸಮಾರಂಭಕ್ಕೆ ಮುಂದಾದರು. ಇದರ ಬೆನ್ನಲ್ಲೇ ಕೇಂದ್ರದ ಹಾಗೂ ರಾಜ್ಯದ ವರಿಷ್ಠರಿಂದಲೂ ದೊರೆತ ಸೂಚನೆ ಮೇರೆಗೆ ಹೆಚ್ಚಿನ ಪ್ರೋತ್ಸಾಹದೊಂದಿಗೆ ಕಾರ್ಯಕ್ರಮವನ್ನು ಇನ್ನು ದೊಡ್ಡಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.ಭವ್ಯ ಸ್ಮಾರಕ ನಿರ್ಮಾಣ:ಡಾ.ಬಾಬಾಸಾಹೇಬ ಅವರ ಭವ್ಯ ಸ್ಮಾರಕ ನಿರ್ಮಾಣ ಮಾಡಲು ಸಮೀಪದ ಗವಾನಿ ಗ್ರಾಮದ ಹತ್ತಿರ 10 ಎಕರೆ ಸ್ಥಳವನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಈ ಸ್ಥಳದಲ್ಲಿ ಡಾ.ಅಂಬೇಡ್ಕರ್ ಅಶ್ವಾರೂಢ ಪ್ರತಿಮೆಯ ಜೊತೆಗೆ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ವಿಪಶ್ಯನಾ ಕೇಂದ್ರ, ಕ್ರಾಂತಿಸ್ತಂಭ, ಬೌದ್ಧ ಸ್ತೂಪ ಹಾಗೂ ಅತೀ ಎತ್ತರದ ಧ್ವಜ ಹಾರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮತ್ತು ಈ ಸ್ಥಳವನ್ನು ಒಂದು ಧಾರ್ಮಿಕ ಕೇಂದ್ರವಾಗಿ ಮಾಡಲು ಶಾಸಕಿ ಶಶಿಕಲಾ ಜೊಲ್ಲೆ ಕಾರ್ಯಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.ನಗರದ ಮುನ್ಸಿಪಾಲ್ ಹೈಸ್ಕೂಲ್ ಮೈದಾನದಲ್ಲಿ ಏ.15ರ ಸಂಜೆ 4 ಗಂಟೆಗೆ ಈ ಭವ್ಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರೂ ಈ ಸಮಾರಂಭಕ್ಕೆ ಉಪಸ್ಥಿತರಿರಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಆಹ್ವಾನಿಸಿದ್ದಾರೆ.
ಸ್ವತಂತ್ರ ಪಾರ್ಕಿಂಗ್ ವ್ಯವಸ್ಥೆ:ಕಾರ್ಯಕ್ರಮಕ್ಕೆ ಅಂದಾಜು 35,000 ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗಾಗಿ ನಗರದ ಕುರಬೆಟ್ಟಿ ಪೆಟ್ರೋಲ್ ಪಂಪ್ ಹಿಂದೆ, ಮಾನೆ ಪ್ಲಾಟ್ ಹಾಗೂ ಇದಗಾ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಊಟದ ವ್ಯವಸ್ಥೆ:ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ವ್ಯವಸ್ಥಿತ ಊಟದ ವ್ಯವಸ್ಥೆ ಮಾಡಲಾಗಿದ್ದು, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಗಣ್ಯರ ಸಾಕ್ಷಿ:ಇಂದು ನಡೆಯುವ ಈ ಕಾರ್ಯಕ್ರಮಕ್ಕೆ ಕೇಂದ್ರದ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವರಾದ ಚಿರಾಗ್ ಪಾಸ್ವಾನ್, ರಾಜ್ಯದ ವಿಧಾನಸಭೆ ವಿರೋಧಪಕ್ಷ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಚಲುವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಮಾಜಿ ಸಂಸದರು ಹಾಗೂ ಶಾಸಕರು ಸೇರಿದಂತೆ ಹಲವು ಗಣ್ಯಮಾನ್ಯರು ಉಪಸ್ಥಿತ ಇರಲಿದ್ದಾರೆ.----------
ಕೋಟ್...ಡಾ.ಅಂಬೇಡ್ಕರ್ ಏ.11ಕ್ಕೆ ನಿಪ್ಪಾಣಿ ನಗರಕ್ಕೆ ಆಗಮಿಸಿ 100 ವರ್ಷ ಪೂರ್ಣಗಳಾಗಿವೆ. ಇದು ನಮ್ಮೆಲ್ಲ ನಿಪ್ಪಾಣಿ ನಿವಾಸಿಗರಿಗೆ ಒಂದು ಅಭಿಮಾನದ ದಿನ. ಈ ಸುಸಂದರ್ಭವನ್ನು ಭಾರತೀಯ ಜನತಾ ಪಾರ್ಟಿ ವತಿಯಿಂದ ನಿಪ್ಪಾಣಿ ನಗರದಲ್ಲಿ ಇಡೀ ರಾಷ್ಟ್ರವೇ ನೋಡುವಂತಹ ಭವ್ಯ ಮತ್ತು ಅದ್ಭುತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತನ್ನಂತ ಒಬ್ಬ ಸಾಮಾನ್ಯ ಮಹಿಳೆ ಶಾಸಕಿ ಹಾಗೂ ಸಚಿವೆಯಾಗಿ ವಿಧಾನಸಭೆಯವರೆಗೂ ಹೋಗುವ ಹಾಗೆ ಆಗಿದ್ದು ಕೇವಲ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ಇದು ಸಾಧ್ಯವಾಗಿದೆ.
- ಶಶಿಕಲಾ ಜೊಲ್ಲೆ, ಶಾಸಕರು, ನಿಪ್ಪಾಣಿ.ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಒಬ್ಬ ಮಹಾನ ವ್ಯಕ್ತಿ, ನಿಪ್ಪಾಣಿ ನಗರಕ್ಕೆ ಅವರು ಆಗಮಿಸಿದ್ದು, ಇಲ್ಲಿ ನೆಲೆಸಿದ್ದು ಇಲ್ಲಿಯ ಜನರಿಗೆ ಮಾರ್ಗದರ್ಶನ ಮಾಡಿದ್ದು ನಿಜವಾಗಿಯೂ ಅದು ನಮ್ಮೆಲ್ಲರಿಗೆ ಅಭಿಮಾನದ ವಿಷಯ. ಅವರ ಈ ನೆನಪಿಗಾಗಿ ಗವಾನಿ ಗ್ರಾಮದ ಹತ್ತಿರ ಒಂದು ಸುಂದರ ತೀರ್ಥಕ್ಷೇತ್ರವನ್ನು ಶೀಘ್ರದಲ್ಲಿಯೇ ಮಾಡಲಾಗುವುದು.
-ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದರು, ಚಿಕ್ಕೋಡಿ ಲೋಕಸಭಾ ಕ್ಷೇತ್ರ.