ಅಗ್ನಿ ಶಾಮಕ ಸಿಬ್ಬಂದಿಗೆ ಒಗ್ಗೂಡಿ ಗೌರವ ಸಮರ್ಪಣೆ ಮಾಡಬೇಕು: ಶಾಸಕ ಎಚ್.ಟಿ.ಮಂಜು

KannadaprabhaNewsNetwork |  
Published : Apr 15, 2025, 12:45 AM IST
14ಕೆಎಂಎನ್ ಡಿ23 | Kannada Prabha

ಸಾರಾಂಶ

ಹುತಾತ್ಮರ ದಿನದ ಜೊತೆಗೆ ಇಲಾಖೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಅಗ್ನಿ ಶಾಮಕ ಸಪ್ತಾಹ ಆಚರಿಸುವ ಮೂಲಕ ಏಪ್ರಿಲ್ 14 ರಿಂದ 20ರ ವರೆಗೆ ಏಳು ದಿನಗಳ ಕಾಲ ಅಗ್ನಿ ಅವಘಡಗಳ ಸುರಕ್ಷತೆಯ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಗ್ನಿ ದುರಂತಗಳಲ್ಲಿ ಜೀವದ ಹಂಗು ತೊರೆದು ಅಮೂಲ್ಯ ಜೀವಗಳ ಸಂರಕ್ಷಣೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಅಗ್ನಿ ಶಾಮಕ ಸಿಬ್ಬಂದಿಗೆ ಎಲ್ಲರೂ ಒಗ್ಗೂಡಿ ಗೌರವ ಸಮರ್ಪಣೆ ಮಾಡಬೇಕಿದೆ ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ಪಟ್ಟಣದ ಅಗ್ನಿ ಶಾಮಕ ಠಾಣೆಯ ಆವರಣದಲ್ಲಿ ಇಲಾಖೆಯಿಂದ ಆಯೋಜಿಸಿದ್ದ ಅಗ್ನಿ ಶಾಮಕ ಸಪ್ತಾಹ, ಅಂಬೇಡ್ಕರ್ ಜಯಂತಿ ಮತ್ತು ಹುತಾತ್ಮರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂಬೈ ಮಹಾನಗರದ ಘಟಿಸಿದ ಅಗ್ನಿ ದುರಂತ ಕಾರ್ಯಾಚರಣೆ ವೇಳೆ ಮೃತರಾದ 66 ಜನ ಅಗ್ನಿ ಶಾಮಕ ಸಿಬ್ಬಂದಿಗೆ ಗೌರವಾರ್ಥ ಇಲಾಖೆ ಹುತಾತ್ಮರ ದಿನವನ್ನು ಆಚರಿಸುವ ಮೂಲಕ ಹುತಾತ್ಮರ ಸ್ಮರಣೆ ಮಾಡುತ್ತಿದೆ ಎಂದರು.

ಇಂತಹ ಪವಿತ್ರ ಕಾರ್ಯದಲ್ಲಿ ಭಾಗವಹಿಸುತ್ತಿರುವುದು ಪುಣ್ಯದ ಕೆಲಸ. ರಾಜ್ಯದ ಯಾವುದೇ ಮೂಲೆಯಲ್ಲಿ ಅಗ್ನಿ ದುರಂತಗಳು, ಜಲ ದುರಂತಗಳು, ಕಟ್ಟಡ ದುರಂತಗಳು ಸಂಭವಿಸಿದರೆ ಅಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಸೇವೆ ದೊಡ್ಡದಾಗಿದೆ. ಹುತಾತ್ಮರ ದಿನದ ಜೊತೆಗೆ ಇಲಾಖೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಅಗ್ನಿ ಶಾಮಕ ಸಪ್ತಾಹ ಆಚರಿಸುವ ಮೂಲಕ ಏಪ್ರಿಲ್ 14 ರಿಂದ 20ರ ವರೆಗೆ ಏಳು ದಿನಗಳ ಕಾಲ ಅಗ್ನಿ ಅವಘಡಗಳ ಸುರಕ್ಷತೆಯ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ತಾಲೂಕಿನ ಅಗ್ನಿಶಾಮಕ ಇಲಾಖೆಯಲ್ಲಿ ಹಲವು ಸೌಲಭ್ಯಗಳ ಕೊರತೆ ಇದೆ. ಇದರ ಪರಿಹಾರಕ್ಕಾಗಿ ಈಗಾಗಲೇ ಇಲಾಖಾ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದೇನೆ. ತಾಲೂಕು ಸಂತೇಬಾಚಹಳ್ಳಿ ಗ್ರಾಮಕ್ಕೆ ಮತ್ತೊಂದು ಅಗ್ನಿ ಶಾಮಕ ಠಾಣೆ ಮಂಜೂರಾಗಿದೆ. ಇದಕ್ಕೆ ಗ್ರಾಮ ವ್ಯಾಪ್ತಿಯಲ್ಲಿ ಸೂಕ್ತ ಜಾಗದ ಕೊರತೆಯಿತ್ತು. ತಾಲೂಕು ಆಡಳಿತದೊಂದಿಗೆ ಚರ್ಚಿಸಿ ಸೂಕ್ತ ಜಾಗವನ್ನು ಗುರುತಿಸಿದ್ದು ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದರು.

ಇದೇ ವೇಳೆ ಇಲಾಖೆ ಗೌರವ ವಂದನೆ ಸ್ವೀಕರಿಸಿದ ಶಾಸಕ ಎಚ್.ಟಿ.ಮಂಜು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹುತಾತ್ಮರ ಸ್ಮಾರಕಕ್ಕೆ ಗೌರವ ಸಮರ್ಪಣೆ ಮಾಡಿದರು.

ತಾಲೂಕು ಅಗ್ನಿ ಶಾಮಕ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಆಕಸ್ಮಿಕ ಬೆಂಕಿಯ ಬಗ್ಗೆ ನಾಗರಿಕ ತಿಳಿವಳಿಕೆ ನೀಡಿ ತುರ್ತು ಸೇವೆಗೆ ದೂ-101, 112, 080-22971500, 22071550, 229716600ಗೆ ಕರೆ ಮಾಡುವಂತೆ ಮನವಿ ಮಾಡಿದರು. ಅಗ್ನಿ ಸುರಕ್ಷತಾ ಕ್ರಮಗಳ 18 ಅಂಶಗಳ ಮಾಹಿತಿ ಕರಪತ್ರವನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಸದಸ್ಯ ಗಿರೀಶ್, ದಿಶಾ ಕಮಿಟಿ ಸದಸ್ಯ ನರಸನಾಯಕ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಮತ್ತು ಇಲಾಖೆಯ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ