ನಿರಾಣಿ ಕನಸು ಎಂದಿಗೂ ನನಸಾಗುವುದಿಲ್ಲ: ಸಿ.ಡಿ.ಗಂಗಾಧರ್

KannadaprabhaNewsNetwork |  
Published : Nov 28, 2026, 12:30 AM IST
೨೭ಕೆಎಂಎನ್‌ಡಿ-೪ಮಂಡ್ಯದ ಮೈಷುಗರ್ ಕಾರ್ಖಾನೆ ಅತಿಥಿಗೃಹದಲ್ಲಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರೈತರಿಗೆ ವಂಚನೆ ಮಾಡುವ ಇಂತಹ ಉದ್ಯಮಿಗಳ ಅಗತ್ಯ ಮಂಡ್ಯ ಜಿಲ್ಲೆಗೆ ಇಲ್ಲ. ಕಾರ್ಖಾನೆಯ ಯಶಸ್ವಿ ಕಾರ್ಯನಿರ್ವಹಣೆ ಹಾಗೂ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುತ್ತಿರುವುದನ್ನು ಸಹಿಸದೆ ನಿರಾಣಿ ಹಾಗೂ ಕೆಲವು ಪಟ್ಟಭದ್ರರು ಅಪಪ್ರಚಾರ ಮಾಡುತ್ತಿದ್ದಾರೆ. ರೈತರಿಗೆ ನಿಜವಾಗಿಯೂ ನ್ಯಾಯ ಒದಗಿಸುವ ಉದ್ದೇಶವಿದ್ದರೆ ಕೆ.ಆರ್.ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ ರೈತರ ಹಿತ ಕಾಪಾಡಬೇಕಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಮೂಲಕ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಕನಸು ಎಂದಿಗೂ ಈಡೇರುವುದಿಲ್ಲ ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ನೇರವಾಗಿ ಹೇಳಿದರು.

ಕಾರ್ಖಾನೆ ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ. ರೈತರ ವಿಶ್ವಾಸವನ್ನು ಉಳಿಸಿಕೊಂಡಿದೆ. ಮುಂದೆಯೂ ಉಳಿಸಿಕೊಳ್ಳಲಿದೆ. ಕಬ್ಬು ಬೆಳೆಗಾರರಿಗೆ ಸರ್ಕಾರ ನಿಗದಿ ಮಾಡಿರುವ ₹೫೦ ನೀಡಲು ಆಗದೆ ನ್ಯಾಯಾಲಯಕ್ಕೆ ಹೋಗಿರುವ ನಿರಾಣಿ ಅವರಿಗೆ ಮೈಷುಗರ್ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಕಳೆದ ಎರಡು ವರ್ಷಗಳಿಂದ ಮೈಷುಗರ್ ಸರ್ಕಾರದ ಅನುದಾನ ಪಡೆಯದೆ ಸ್ವಸಾಮರ್ಥ್ಯದ ಮೇಲೆ ಮುನ್ನಡೆಯುತ್ತಿದೆ. ನೂತನ ಬಾಯ್ಲಿಂಗ್ ಹೌಸ್ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ. ಕಾರ್ಖಾನೆಯ ಯಶಸ್ವಿ ಕಾರ್ಯಾಚರಣೆಯನ್ನು ಸಹಿಸಲಾಗದೆ ಮೈಷುಗರ್‌ನ್ನು ಖಾಸಗೀಕರಣ ಮಾಡುವಂತೆ ಹೇಳುತ್ತಿದ್ದಾರೆ. ಕಾರ್ಖಾನೆಯ ಯಶಸ್ಸು ಕೆಲವರಿಗೆ ಆತಂಕ ಉಂಟುಮಾಡಿದ್ದು, ಕಾರ್ಖಾನೆಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ರೈತರನ್ನು ವಂಚಿಸುವವರ ಅಗತ್ಯವಿಲ್ಲ:

ರೈತರಿಗೆ ವಂಚನೆ ಮಾಡುವ ಇಂತಹ ಉದ್ಯಮಿಗಳ ಅಗತ್ಯ ಮಂಡ್ಯ ಜಿಲ್ಲೆಗೆ ಇಲ್ಲ. ಕಾರ್ಖಾನೆಯ ಯಶಸ್ವಿ ಕಾರ್ಯನಿರ್ವಹಣೆ ಹಾಗೂ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುತ್ತಿರುವುದನ್ನು ಸಹಿಸದೆ ನಿರಾಣಿ ಹಾಗೂ ಕೆಲವು ಪಟ್ಟಭದ್ರರು ಅಪಪ್ರಚಾರ ಮಾಡುತ್ತಿದ್ದಾರೆ. ರೈತರಿಗೆ ನಿಜವಾಗಿಯೂ ನ್ಯಾಯ ಒದಗಿಸುವ ಉದ್ದೇಶವಿದ್ದರೆ ಕೆ.ಆರ್.ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ ರೈತರ ಹಿತ ಕಾಪಾಡಬೇಕಿತ್ತು. ಮೂರು ವರ್ಷಗಳಿಂದ ಕಾರ್ಖಾನೆಯನ್ನು ತೆಗೆದುಕೊಂಡಿದ್ದರೂ ಕಾರ್ಯಾರಂಭ ಮಾಡಿಸದೆ ಈಗ ಮೈಷುಗರ್ ಸಕ್ಕರೆ ಕಾರ್ಖಾನೆಯ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾರ್ಮಿಕರಿಗೆ ಹಾಗೂ ರೈತರಿಗೆ ನೀಡಬೇಕಾದ ಹಣದ ವಿಚಾರದಲ್ಲಿ ಸರ್ಕಾರದ ಸೂಚನೆಯಂತೆ ₹೫೦ ನೀಡಲಾಗಿದೆ. ಸರ್ಕಾರದಿಂದ ಬಂದ ಹಣವನ್ನು ರೈತರಿಗೆ ಪಾವತಿಸಿದ್ದು, ಕಾರ್ಖಾನೆಯ ವತಿಯಿಂದ ನೀಡಬೇಕಾದ ಹಣವನ್ನೂ ನೀಡುತ್ತಿದ್ದೇವೆ. ಇನ್ನು ₹೧೨ ಲಕ್ಷ ಮಾತ್ರ ಬಾಕಿ ಇದ್ದು, ಡಿಸೆಂಬರ್ ಒಳಗೆ ಎಲ್ಲ ರೈತರಿಗೂ ಪಾವತಿಸಲಾಗುವುದು. ರೈತರಿಗೆ ವಂಚನೆ ಮಾಡುವ ಇಂತಹ ಉದ್ಯಮಿಗಳಿಂದ ಮಂಡ್ಯ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ ಎಂದರು.

ಮೈಷುಗರ್ ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ:

ಮೈಷುಗರ್ ಕಾರ್ಖಾನೆಯ ಸಾವಿರಾರು ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯ ಬಗ್ಗೆ ಮಾತನಾಡುವವರು ಮೊದಲು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಮಂಡ್ಯ ಜಿಲ್ಲೆಗೆ ಖಾಸಗಿ ಸಕ್ಕರೆ ಕಾರ್ಖಾನೆಗಳ ಅಗತ್ಯವಿಲ್ಲ. ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಮುಖ್ಯಮಂತ್ರಿಗಳು ಕಾರ್ಖಾನೆಯ ಅಭಿವೃದ್ಧಿ ಮತ್ತು ಯಶಸ್ವಿ ಕಾರ್ಯನಿರ್ವಹಣೆಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಖಾನೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು.

ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರಿಗೆ ಮುರುಗೇಶ್ ನಿರಾಣಿ ಅವರು ನ್ಯಾಯ ಒದಗಿಸದೇ ವಂಚಿಸಿರುವ ಮಾಹಿತಿ ಇದೆ. ಪಾಂಡವಪುರ ಕಾರ್ಖಾನೆಯನ್ನು ನಿರಾಣಿ ಅವರಿಂದ ತೆರವುಗೊಳಿಸಿ ಮೈಷುಗರ್ ವ್ಯಾಪ್ತಿಗೆ ಸೇರಿಸಿದಲ್ಲಿ ಎರಡೂ ಕಾರ್ಖಾನೆಗಳನ್ನು ಉತ್ತಮವಾಗಿ ನಡೆಸಿ ಸರ್ಕಾರಕ್ಕೆ ಹಾಗೂ ರೈತರಿಗೆ ಕೀರ್ತಿ ತರುವ ಕೆಲಸ ಮಾಡುತ್ತೇನೆ ಎಂದರು.

ರೈತ ಸಂಘ ಹಾಗೂ ಸಂಘಟನೆಗಳ ಮೌನ ಏಕೆ?:

ಕೆಲ ಖಾಸಗಿ ಸಕ್ಕರೆ ಕಾರ್ಖಾನೆಗಳೊಂದಿಗೆ ಕೈಜೋಡಿಸಿರುವ ವ್ಯಕ್ತಿಗಳು ಮೈಷುಗರ್ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಅನುಮಾನವಿದೆ. ನಿರಾಣಿ ಅವರು ಖಾಸಗೀಕರಣದ ವಿಚಾರ ಪ್ರಸ್ತಾಪಿಸಿದಾಗ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೊರತುಪಡಿಸಿ ರೈತ ಸಂಘ ಹಾಗೂ ಇತರೆ ಸಂಘಟನೆಗಳು ಮೌನವಹಿಸಿರುವುದು ಏಕೆ? ಇದನ್ನು ನೋಡಿದರೆ ಸಂಘಟನೆಗಳು ಖಾಸಗಿ ಕಾರ್ಖಾನೆಯವರ ಜತೆ ಶಾಮೀಲಾಗಿರುವ ಶಂಕೆ ಸತ್ಯವೆನಿಸುತ್ತದೆ. ಮೈಷುಗರ್ ಬಗ್ಗೆ ಪ್ರತಿಯೊಂದಕ್ಕೂ ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ರೈತ ಸಂಘಟನೆಗಳು, ಕಬ್ಬು ಬೆಳೆಗಾರರ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮುರುಗೇಶ್ ನಿರಾಣಿ ಅವರ ಹೇಳಿಕೆಯನ್ನು ಖಂಡಿಸದಿರುವುದು ಏಕೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡರಾದ ದೇಶಹಳ್ಳಿ ಮೋಹನ್ ಕುಮಾರ್, ಚಿನಕುರಳಿ ರಮೇಶ್ ಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕದಾಸರ ಸಮಾನತೆ, ಮಾನವೀಯ ಸಂದೇಶ ಇಂದಿಗೂ ಪ್ರಸ್ತುತ: ಜಯರಾಮ್
ಕನಕದಾಸರ ಸಮಾಜಮುಖಿ ಸಂದೇಶಗಳು ಸಾರ್ವಕಾಲಿಕ ಸತ್ಯ-ಶಾಸಕ ಮಾನೆ