ಬಿಜೆಪಿ ಜಿಲ್ಲಾಧ್ಯಕ್ಷರಾಗಿ 2ನೇ ಬಾರಿಗೆ ನಿರಂಜನ್‌ಕುಮಾರ್‌ ಪುನರಾಯ್ಕೆ

KannadaprabhaNewsNetwork | Published : Jan 30, 2025 12:30 AM

ಸಾರಾಂಶ

ಚಾಮರಾಜನಗರದ ಬಿಜೆಪಿ ಕಚೇರಿಯಲ್ಲಿ ಎರಡನೇ ಬಾರಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಿ.ಎಸ್‌.ನಿರಂಜನ್‌ಕುಮಾರ್‌ ಅಧಿಕಾರ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುವ ಜೊತೆಗೆ ಎಲ್ಲರ ಸಹಕಾರವನ್ನು ಪಡೆದು, ತಳ ಮಟ್ಟದಿಂದ ಬಿಜೆಪಿಯನ್ನು ಸಂಘಟಿಸಲು ಬದ್ದನಾಗಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ತಿಳಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಎರಡನೇ ಬಾರಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಕೇಂದ್ರದಲ್ಲಿ ನಮ್ಮದೇ ಪಕ್ಷದ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜನಪರ ಯೋಜನೆಗಳನ್ನು ಜಾರಿ ಮಾಡುವ ಮೂಲಕ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು, ಒಂದೇ ಸಮುದಾಯವನ್ನು ತೃಷ್ಟೀಕರಿಸುವ ನೀತಿಗಳು, ಗ್ಯಾರಂಟಿಗಳ ಜಾರಿಯಲ್ಲಿ ನಿರ್ಲಕ್ಷ್ಯ, ಪದೇ ಪದೇ ಜನರಿಗೆ ಸುಳ್ಳು ಹೇಳಿ ನಂಬಿಸಲು ಮುಂದಾಗಿದೆ. ಈ ಸರ್ಕಾರದ ಜನವಿರೋಧಿ ನೀತಿ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸಿ, ಪಕ್ಷವನ್ನು ಬಲಪಡಿಸೋಣ ಎಂದರು. ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷ ಬಲಿಷ್ಠ ಮಾಡಲು ಬೂತ್ ಮಟ್ಟದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಬೂತ್ ಕಮಿಟಿಗಳನ್ನು ರಚನೆ ಮಾಡಿಕೊಂಡು ಸಕ್ರಿಯವಾಗಿ ಪಕ್ಷದ ಚುಟವಟಿಕೆಗಳಲ್ಲಿ ಎಲ್ಲರು ತೊಡಗಿಸಿಕೊಳ್ಳಬೇಕು. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ದಿಕ್ಕಿನಲ್ಲಿ ನಮ್ಮ ಹೋರಾಟವಾಗಬೇಕು.

ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷ ಸಂಘಟನೆಗೆ ಆದ್ಯತೆ ನೀಡಿದರೆ, ಮುಂದಿನ ದಿನಗಳಲ್ಲಿ ಎಲ್ಲರಿಗೂ ಅಧಿಕಾರ ದೊರೆಯುತ್ತದೆ. ಪಕ್ಷ ಇದ್ದರೆ ನಾವು, ನೀವು ಎಲ್ಲ. ಹೀಗಾಗಿ ಪಕ್ಷದ ಜವಾಬ್ದಾರಿ ತೆಗೆದುಕೊಂಡರವರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ರಾಜ್ಯ ಹಾಗೂ ರಾಷ್ಟ್ರ ವರಿಷ್ಠರು ನೀಡುವ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ನಿರಂಜನ್ ಕುಮಾರ್ ತಿಳಿಸಿದರು.ಕೇಂದ್ರ ಸಚಿವ ಅಮಿತ್ ಶಾ ಸದನದಲ್ಲಿ ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದವರು ತಮಗೆ ಬೇಕಾಗುವ ರೀತಿಯಲ್ಲಿ ತಿರುಚಿ ಅಂಬೇಡ್ಕರ್ ವಿರುದ್ಧ ಅವಹೇಳನ ಮಾಡಿದ್ದಾರೆ ಎಂದು ಬಿಂಬಿಸಿದರು. ಇದನ್ನು ಜಿಲ್ಲೆಯ ದಲಿತ ಮುಖಂಡರು ಸಹ ನಂಬಿದರು. ಆದರೆ ವಾಸ್ತವವನ್ನು ಯಾರು ಸಹ ಮಾತನಾಡಲಿಲ್ಲ. ಈ ವಿಚಾರದ ಬಗ್ಗೆ ನಮ್ಮ ಪಕ್ಷದ ಮುಖಂಡರು ಮನವರಿಕೆ ಮಾಡಿಕೊಡಬೇಕು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡದೇ ಇತರೇ ನಾಯಕರ ಪೋಟೋಗಳಿಗೆ ಹೂ ಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇಂಥ ಪ್ರಮಾದಗಳು ಏಕೆ ನಮ್ಮ ದಲಿತ ಮುಖಂಡರಿಗೆ ಕಾಣುತ್ತಿಲ್ಲ ಎಂದು ನಿರಂಜನ್ ಕುಮಾರ್ ಪ್ರಶ್ನೆ ಮಾಡಿದರು. ಬಿಜೆಪಿ ರಾಜ್ಯ ಸಮಿತಿ ಸಂಚಾಲಕ ವಿ.ಫಣೀಶ್ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷ ಗೆಲ್ಲುವ ಎಲ್ಲ ರೀತಿಯ ವಾತಾವರಣ ಇದೆ. ಹಾಲಿ ಶಾಸಕರು ವೈಫಲ್ಯವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು. ಉಸ್ತುವಾರಿ ಸಚಿವರಿಂದಲು ಅಭಿವೃದ್ದಿ ಶೂನ್ಯವಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಕ್ರಮಗಳು ಆಗಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಅವಧಿಯ ಕೆಲಸ ಕಾರ್ಯಗಳು ನಡೆಯುತ್ತಿವೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಪಕ್ಷವನ್ನು ಬಲಪಡಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಚುನಾವಣಾ ಉಸ್ತುವಾರಿ ಕೊಡಗಿನ ಭಾರತೀಶ್, ಸಹ ಉಸ್ತುವಾರಿ ನೂರೊಂದುಶೆಟ್ಟಿ, ಅರಕಲವಾಡಿ ನಾಗೇಂದ್ರ, ನಗರಸಭಾ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ ಬಾಲಸುಬ್ರಮಣ್ಯ, ಮುಖಂಡರಾದ ಎಂ. ರಾಮಚಂದ್ರ, ಮಾಜಿ ಅಧ್ಯಕ್ಷ ನಾರಾಯಣ ಪ್ರಸಾದ್, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಪಿ. ವೃಷಭೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ವಕ್ತಾರ ಕಾಡಹಳ್ಳಿ ಕುಮಾರ್, ರಾಮಸಮುದ್ರ ಶಿವು, ಬುಲೆಟ್ ಚಂದ್ರು ಮೊದಲಾದವರು ಇದ್ದರು.

Share this article