ಕನ್ನಡಪ್ರಭ ವಾರ್ತೆ ಪುತ್ತೂರು
ಮೇ ೯ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ವಹಿಸಲಿದ್ದಾರೆ. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಹಾಗೂ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ನಿರಂಜನ ಸಾಹಿತ್ಯ ಪ್ರಶಸ್ತಿ: ನಿರಂಜನ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಪ್ರೊ. ವಿ. ಬಿ. ಅರ್ತಿಕಜೆ ಅವರು ಪುತ್ತೂರು ಬಳಿಯ ಈಶ್ವರಮಂಗಲದ ಅರ್ತಿಕಜೆ ಶ್ಯಾಮ ಭಟ್ಟ ಹಾಗೂ ಸಾವಿತ್ರಿ ದಂಪತಿಯ ಪುತ್ರರಾಗಿ ೧೯೪೩ ಜೂನ್ ೨೯ರಂದು ಜನಿಸಿದರು. ಇವರ ಆಸಕ್ತಿಯ ಕ್ಷೇತ್ರ ಅಧ್ಯಾಪನ, ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಂಘಟನೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ೩೩ ವರ್ಷಗಳ ಕಾಲ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ಇವರು ಪ್ರೌಢಶಾಲಾ ದಿನಗಳಲ್ಲಿ ನವೋದಯ, ಸುಪ್ರಭಾತ ಮತ್ತು ನವರಸ ಹಸ್ತಪತ್ರಿಕೆಗಳನ್ನು ಆರಂಭಿಸಿದವರು. ತಮ್ಮ ಆಡುಭಾಷೆ ಹವ್ಯಕವನ್ನು ಅಂಕಣದಲ್ಲಿ ಉಪಯೋಗಿಸಿದರು. ನಂತರ ಆ ಭಾಷೆಯಲ್ಲೇ ಸಾಹಿತ್ಯ ಸೃಷ್ಟಿಸಿದ ಹಿರಿಮೆ ಇವರದು. ಪುತ್ತೂರಿನ ಸಾಹಿತ್ಯಕ, ಸಾಂಸ್ಕೃತಿಕ ಸಂಸ್ಥೆಗಳಲ್ಲೂ ಸಕ್ರಿಯರಾಗಿ ಸಂಘಟನ ಕೌಶಲವನ್ನು ಸಾಬೀತುಪಡಿಸಿರುವ ಇವರು ಅನೇಕ ಪ್ರತಿಭಾಶಾಲಿಗಳಿಗೆ ಪ್ರೋತ್ಸಾಹಿಸಿದವರು. ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ ಹೆಗ್ಗಳಿಕೆಯೂ ಇವರದು. ಇವರು ನಾದಪೂಜೆ, ಅಪರೂಪ, ಅನನ್ಯ ಸಾಧಕ. ಜೇನಹನಿ, ಪುಸ್ತಕ ಪ್ರೀತಿಗೆ ರೂಪಕ: ಬೋಳಂತಕೋಡಿ ಈಶ್ವರ ಭಟ್ಟ, ಹಾಸ್ಯೋಲ್ಲಾಸ, ನಗೆಮಿಂಚು, ಪತ್ರಿಕಾ ರಂಗ ಪ್ರವೇಶ ಮೊದಲಾದ ಪ್ರಮುಖ ಕೃತಿಗಳನ್ನು ಪ್ರಕಟಿಸಿದ್ದಾರೆ.