ಕರ್ನಾಟಕ ಹೈವೇ 2028ಕ್ಕೆ ಅಮೆರಿಕಕ್ಕೆ ಸಮ: ಗಡ್ಕರಿ

KannadaprabhaNewsNetwork |  
Published : Feb 23, 2024, 01:49 AM IST
ಹೆದ್ದಾರಿ | Kannada Prabha

ಸಾರಾಂಶ

ಕೊಡಚಾದ್ರಿ, ಅಂಜನಾದ್ರಿ ರೋಪ್‌ವೇಗೆ ಸಮ್ಮತಿ ನೀಡಿದ್ದು ₹13000 ಕೋಟಿ ಯೋಜನೆಗೆ ಕೇಂದ್ರ ಹೆದ್ದಾರಿ ಸಚಿವರ ಅಮೃತಹಸ್ತದಿಂದ ಚಾಲನೆ ದೊರೆತಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ/ಬೆಳಗಾವಿಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳು ಈಗಿರುವ ರೀತಿ ಅಭಿವೃದ್ಧಿ ಹೊಂದುತ್ತಾ ಸಾಗಿದರೆ 2028ಕ್ಕೆ ಈ ರಾಜ್ಯದ ಹೆದ್ದಾರಿಗಳು ಅಮೆರಿಕದ ರಾಷ್ಟ್ರೀಯ ಹೆದ್ದಾರಿಗೆ ಸರಿ ಸಮಾನವಾಗಲಿವೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಹಾಗೂ ಬೆಳಗಾವಿಯಲ್ಲಿ ಸುಮಾರು 13 ಸಾವಿರ ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.ರಸ್ತೆಗಳ ಅಭಿವೃದ್ಧಿಯಿಂದಲೇ ಅಮೆರಿಕದ ಅಭಿವೃದ್ಧಿ ಸಾಧ್ಯವಾಗಿದ್ದು, ಇಲ್ಲೂ ಅದೇ ರೀತಿ ಆಗಲಿದೆ ಎಂದ ಅವರು, ಕರ್ನಾಟಕ ಒಂದು ಪ್ರಗತಿಶೀಲ ಮತ್ತು ಸಂಪನ್ನಶೀಲ ರಾಜ್ಯ. ಕರ್ನಾಟಕದ ಅಭಿವೃದ್ಧಿ ಐಟಿಯೊಂದಿಗೆ ಸೇರಿಕೊಂಡಿದೆ. ಕರ್ನಾಟಕದ ಅಭಿವೃದ್ಧಿ ಭಾರತದ ಅಭಿವೃದ್ಧಿಯೊಂದಿಗೆ ಜೋಡಣೆಯಾಗಿದೆ. ಭಾರತ ವಿಶ್ವದ 3ನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಬೇಕು ಎಂಬುದು ಪ್ರಧಾನಿ ಮೋದಿ ಅವರ ಕನಸು. ಕರ್ನಾಟಕ ಅಭಿವೃದ್ಧಿ ಹೊಂದಿದರೆ ಆ ಕನಸಿಗೆ ಇನ್ನಷ್ಟು ವೇಗ ಸಿಗಲಿದೆ ಎಂದರು.

ಕೊಡಚಾದ್ರಿ, ಅಂಜನಾದ್ರಿಗೆ ಕೇಬಲ್‌ ಕಾರ್‌:

ಉಡುಪಿ ಜಿಲ್ಲೆಯ ಕೊಲ್ಲೂರಿನ ಕೊಡಚಾದ್ರಿ ಮತ್ತು ಕೊಪ್ಪಳದ ಗಂಗಾವತಿಯ ಅಂಜನಾದ್ರಿಗೆ ರೋಪ್‌ವೇ ನಿರ್ಮಿಸುವ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೊಲ್ಲೂರು ಮತ್ತು ಕೊಡಚಾದ್ರಿ ನಡುವೆ ರೋಪ್‌ವೇ ನಿರ್ಮಾಣ ವಿಚಾರ ಸಂಸದ ಬಿ.ವೈ.ರಾಘವೇಂದ್ರ ಗಮನಕ್ಕೆ ತಂದಿದ್ದಾರೆ ಎಂದು ಇದೇ ವೇಳೆ ಗಡ್ಕರಿ ಮಾಹಿತಿ ನೀಡಿದರು.3 ಲಕ್ಷ ಕೋಟಿ ಕಾಮಗಾರಿ:

ಕರ್ನಾಟಕದಲ್ಲಿ 3 ಲಕ್ಷ ಕೋಟಿ ರು. ವೆಚ್ಚದ ಕಾಮಗಾರಿ ನಡೆಸಿದ್ದೇವೆ. ಸುಮಾರು 13 ಕೋಟಿಗೂ ಹೆಚ್ಚಿನ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧದ ಹಿನ್ನೆಲೆಯಲ್ಲಿ ಕೇರಳದ ಮಲ್ಲಪ್ಪುರಂನಿಂದ ಬೆಂಗಳೂರಿಗೆ ಬದಲಿ ರಸ್ತೆ ವ್ಯವಸ್ಥೆ ಮಾಡಲಿದ್ದೇವೆ. ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ಹೈವೆ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ. ಈ ಕಾಮಗಾರಿ ಪೂರ್ಣವಾದರೆ ಬೆಂಗಳೂರಿನಿಂದ ಎರಡು ಗಂಟೆಯಲ್ಲಿ ಚೆನ್ನೈ ತಲುಪಬಹುದಾಗಿದೆ ಎಂದು ತಿಳಿಸಿದರು.ಬೆಳಗಾವಿ ಎಥೆನಾಲ್‌ ಉತ್ಪಾದನೆಯ ಹಬ್‌ ಆಗಲಿ-ಗಡ್ಕರಿಎಥೆನಾಲ್ ಬಯೋ ಡೀಸಲ್ ನಮ್ಮ ಮುಂದಿನ ಭವಿಷ್ಯದ ಇಂಧನ. ಕರ್ನಾಟಕದಲ್ಲಿ ಸಾಕಷ್ಟು ಕಬ್ಬಿನ ಕಾರ್ಖಾನೆಗಳಿವೆ. ಇವುಗಳಿಂದ ಎಥೆನಾಲ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಬಹುದಾಗಿದೆ. ಬೆಳಗಾವಿ ವಿಮಾನ ಇಂಧನ ಉತ್ಪಾದನೆ ಹಬ್‌ ಆಗಬೇಕು. ಬೆಳಗಾವಿಯಲ್ಲಿ ಎಥೆನಾಲ್ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಅವಕಾಶಗಳಿವೆ. ರೈತರ ಅಭಿವೃದ್ಧಿ ಮತ್ತು ಪರಿಸರ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯಾದ್ಯಂತ ಎಥೆನಾಲ್ ಬಳಕೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಬೇಕು. ಮುಂಬರುವ ದಿನಗಳಲ್ಲಿ ನಮ್ಮ ದೇಶದಿಂದ ಜಗತ್ತಿಗೇ ಎಥೆನಾಲ್ ರಫ್ತು ಗುರಿ ಹೊಂದಲಾಗಿದೆ. ಭವಿಷ್ಯದಲ್ಲಿ ಎಥೆನಾಲ್ ಹಾಗೂ‌ ಮಿಥೆನಾಲ್ ಆಧಾರಿತ ವಾಹನಗಳನ್ನು ರಸ್ತೆಗಿಳಿಸುವ ಮೂಲಕ ಪರಿಸರ ರಕ್ಷಣೆ ಜತೆಗೆ ರೈತರ ಆರ್ಥಿಕಾಭಿವೃದ್ಧಿಗೂ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.ರಿಂಗ್ ರಸ್ತೆ ಜನವರಿ 2025ರಂದು ಪೂರ್ಣ: ಗಡ್ಕರಿ

ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಗೊಳಿಸಲು ₹17 ಸಾವಿರ ಕೋಟಿ ವೆಚ್ಚದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಾರಿಗೆ ಸಮಸ್ಯೆ ನಿವಾರಣೆ ಜತೆಗೆ ರಾಜ್ಯದ ಜನರಿಗೆ ಅನುಕೂಲವಾಗಲಿದೆ. ಜನವರಿ 2025ರ ವೇಳೆಗೆ 6 ಪ್ಯಾಕೇಜ್‌ಗಳ ರಿಂಗ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!