ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಿದ ಹಾಗೂ ಹಿಂದೂ ಕಾರ್ಯಕರ್ತರ ಬಂಧನ ವಿರೋಧಿಸಿ ಗುರುವಾರ ಜಿಲ್ಲಾಡಳಿತ ಭವನದ ಎದುರು ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಿದ ಹಾಗೂ ಹಿಂದೂ ಕಾರ್ಯಕರ್ತರ ಬಂಧನ ವಿರೋಧಿಸಿ ಗುರುವಾರ ಜಿಲ್ಲಾಡಳಿತ ಭವನದ ಎದುರು ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಫೆ.28ರವರೆಗೆ ನಿಷೇಧಾಜ್ಞೆ ಮುಂದುವರೆಸಿದ್ದರಿಂದ ಪ್ರತಿಭಟನೆಯನ್ನು ಹಳೇ ಬಾಗಲಕೋಟೆಯಿಂದ ಜಿಲ್ಲಾಡಳಿತ ಭವನ ಎದುರು ನಡೆಸಲಾಯಿತು. ಖಾಕಿ ಸರ್ಪಗಾವಲು ನಡುವೆ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಸಾಕಷ್ಟು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಭಾಗವಹಿಸಿ, ಜಿಲ್ಲಾಡಳಿತ, ಸರ್ಕಾರ, ಪೊಲೀಸ್ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನಾಕಾರರು ಮುಖ್ಯವಾಗಿ ಕೆಲ ಬೇಡಿಕೆಗಳನ್ನು ಪ್ರಸ್ತಾಪಿಸಿದ್ದು, ಅವುಗಳನ್ನು 15 ದಿನಗಳ ಒಳಗಾಗಿ ಈಡೇರಿಸದೇ ಇದ್ದರೆ ಹಿಂದೂಪರ ಸಂಘಟನೆಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.ಹಿಂದೂ ಜಾಗರಣ ವೇದಿಕೆ ರಾಜ್ಯ ಪ್ರಮುಖ ಉಲ್ಲಾಸ, ವೇದಿಕೆಯ ಉತ್ತರ ಪ್ರಾಂತದ ಸಹ ಸಂಚಾಲಕ ಶ್ರೀಕಾಂತ ಹೊಸಕೇರಿ, ಮುಖಂಡರಾದ ರಾಜು ನಾಯ್ಕರ್, ಹೂವಪ್ಪ ರಾಠೋಡ, ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ವಿಎಚ್‌ಪಿ ಪುಂಡಲೀಕ ದಳವಾಯಿ, ಅಶೋಕ ಲಿಂಬಾವಳಿ, ಶಶಿಕಲಾ ಮಜ್ಜಗಿ, ಬಸವರಾಜ ಯಂಕಂಚಿ ಮಾತನಾಡಿ, ಮೆರವಣಿಗೆ ಮೇಲೆ ಕಲ್ಲು ತೂರಿದ ಘಟನೆ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಹಲವು ವರ್ಷಗಳಿಂದ ಪಂಕಾ ಮಸೀದಿಯಿಂದಲೇ ನಗರದಲ್ಲಿ ಅನೇಕ ಅಹಿತಕರ ಘಟನೆಗಳು ನಡೆಯುತ್ತಿವೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆ ಆಗಬೇಕಿದ್ದರೆ ಮೊದಲು ಮಸೀದಿ ಬಂದ್ ಮಾಡಬೇಕು. ಮಸೀದಿ ಮುಖ್ಯಸ್ಥ ಹಾಗೂ ಸಮಿತಿ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಕಲ್ಲು ತೂರಿ ಬಂದಾಗ ಮಸೀದಿಯಲ್ಲಿದ್ದ ನೂರಾರು ಜನರ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಎಲ್ಲ ಬೇಡಿಕೆ ಈಡೇರಿಕೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ ಮುಖಂಡರು, ನಮ್ಮ ಬೇಡಿಕೆಗಳು ಈಡೇರದಿದ್ದರೆ ಹೋರಾಟವನ್ನು ತೀವ್ರರೂಪಕ್ಕೆ ಕೊಂಡೊಯ್ಯಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.ಬಾಗಲಕೋಟೆ ಚಲೋ ಮೊದಲ ಹಂತದ ಧರಣಿ ಇದಾಗಿದೆ. ಇದು ಮುಕ್ತಾಯವಲ್ಲ, ಆರಂಭ. ನಮ್ಮ ಹೋರಾಟ ಹತ್ತಿಕ್ಕಲು ಪೊಲೀಸರು ಎಷ್ಟೇ ಪ್ರಯತ್ನ ನಡೆಸಿದರೂ ಅದನ್ನು ಮೆಟ್ಟಿನಿಂತು, ನೋಟಿಸ್, ಜೈಲು, ಬೇಲು ಎಲ್ಲವನ್ನು ಮೀರಿ ಹಿಂದೂಗಳು ಸೆಟೆದು ನಿಂತು ಹೋರಾಟ ನಡೆಸಲಿದ್ದೇವೆ ಎಂದು ಗುಡುಗಿದರು.
ರಾಜ್ಯದಲ್ಲಿ ದಾವಣಗೆರೆ, ಮಂಡ್ಯ ಜಿಲ್ಲೆಯ ನಾಗಮಂಗಲ, ಮದ್ದೂರು, ಬೆಂಗಳೂರು ಹೀಗೆ ನಾನಾ ಕಡೆಗಳಲ್ಲಿ ಹಿಂದೂಗಳ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿವೆ. ಈಗಲೂ ಕಾಲ ಮಿಂಚಿಲ್ಲ. ಬಾಗಲಕೋಟೆಯಲ್ಲಿನ ಪಂಕಾ ಮಸೀದಿ ಬಂದ್ ಮಾಡಿದರೆ ನಗರದಲ್ಲಿ ಇಂತಹ ಘಟನೆಗಳು ನಡೆಯಲ್ಲ. ಕೂಡಲೇ ಜಿಲ್ಲಾಡಳಿತ ಮಸೀದಿ ಸೀಜ್ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಹಿಂದೂಗಳು ಶಾಂತವಾಗಿದ್ದಾರೆ ಎಂದರೆ ಪ್ರತೀಕಾರದ ಶಕ್ತಿ ಇಲ್ಲವೆಂದಲ್ಲ. ನಮ್ಮನ್ನು ಕೆಣಕಬೇಡಿ. ಹಿಂದೂಗಳೇ ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ. ಅದಕ್ಕೆ ಹಿಂದೂ ಸಮಾಜ ತಯಾರಾಗಬೇಕು. ಹಿಂದೂಗಳ ಮೆರವಣಿಗೆ ಆದರೆ ಮುಸ್ಲಿಮರಿಗೆ ಕಿರಿಕಿರಿಯಾಗುತ್ತದೆ. ಅದೇ ಅವರು ಸ್ಪೀಕರ್ ಹಜ್ಜಿ ನಮಾಜ ಮಾಡಿದರೆ ನಮಗೆ ಕಿರಿಕಿರಿ ಆಗಲ್ಲವೇ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಪೊಲೀಸರು ಮತ್ತು ಸರ್ಕಾರ ಏಕೆ ತಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.
ಮೆರವಣಿಗೆ ವೇಳೆ ನಡೆದ ಕಲ್ಲು ಮತ್ತು ಚಪ್ಪಲಿ ತೂರಾಟ ಆಕಸ್ಮಿಕವೋ ಅಥವಾ ಮತಾಂಧ ಶಕ್ತಿಗಳ ಸಂಚಿನಿಂದ ಆಗಿದೆಯೇ ಎನ್ನುವ ಬಗ್ಗೆ ಸಮಗ್ರ ತನಿಖೆ ಆಗಬೇಕು. ಘಟನಾ ಸಮಯದಲ್ಲಿ ಮತಾಂಧ ಶಕ್ತಿಗಳು ಮಾರಕಾಸ್ತ್ರ ಇಟ್ಟಿದ್ದರೂ ಎನ್ನುವ ಮಾಹಿತಿ ಬಂದಿದೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.ಹೋಳಿಯನ್ನು ಸಂಭ್ರಮದಿಂದ ಆಚರಿಸಿ:
ಮೊನ್ನೆ ನಡೆದ ಘಟನೆಯಲ್ಲಿ ಎ.1 ಮತ್ತು ಎ.2 ಆರೋಪಿಗಳು ಯಾರು ಆಗಬೇಕಿತ್ತೋ ಅವರು ಆಗಿಲ್ಲ. ಅದನ್ನು ಬಿಟ್ಟು ಹಿಂದೂಗಳ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಕಸರತ್ತು ನಡೆಸಿದ್ದಾರೆ. ಅನೇಕ ಮುಖಂಡರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್‌ಗಳಿಗೆ ನಾವು ಜಗ್ಗಲ್ಲ. ಮುಂದೆ ಹಿಂದೂಗಳ ಹಬ್ಬ ಹೋಳಿ ಇದೆ. ಹಬ್ಬ ಆಚರಣೆಯಿಂದ ಯಾರೂ ದೂರ ಉಳಿದು ನಗರ ತೊರೆದು ಹೋಗಬೇಡಿ. ಎಲ್ಲರೂ ಕೂಡಿ ಸಂಭ್ರಮದಿಂದ ಆಚರಿಸೋಣ. ಎಲ್ಲರೂ ಹೋಳಿಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಖಾಕಿ ಪಡೆಯ ಸರ್ಪಗಾವಲಿನ ನಡುವೆಯೂ ಜಿಲ್ಲಾಡಳಿತ ಭವನದ ಎದುರು ಮೂರು ಗಂಟೆಗೂ ಹೆಚ್ಚುಕಾಲ ಧರಣಿ ನಡೆಯಿತು.ಸ್ಥಳಕ್ಕೆ ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಂಗಪ್ಪ, ಪ್ರಕರಣದಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹಣಮಂತ ನಿರಾಣಿ, ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಮುಖಂಡರಾದ ಕಿರಣ ಪವಾಡಶೆಟ್ಟರ, ಗಿರೀಶ ಭಾಂಡಗೆ, ಕುಮಾರಸ್ವಾಮಿ ಹಿರೇಮಠ ಮತ್ತಿತರರು ಇದ್ದರು.
ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣ:ಪ್ರತಿಭಟನೆಗೆ ವಿವಿಧೆಡೆಯಿಂದ ಜನರು ಭಾಗವಹಿಸಬಾರದೆಂದು ಜಿಲ್ಲಾದ್ಯಂತ ಪೊಲೀಸರು ನಡೆಸಿದ್ದ ಪ್ರಚಾರ ಹಾಗೂ ನಗರದಾದ್ಯಂತ ರಸ್ತೆಗಳಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳು ಲಾಕ್ ಡೌನ್ ದಿನಗಳನ್ನು ನೆನಪಿಸಿದವು.ಲವ್ ಲೆಟರ್: ಪ್ರತಿಭಟನೆ ನಡೆಸದಂತೆ ಜಿಲ್ಲೆಯ ವಿವಿಧೆಡೆ ಕೆಲ ಹಿಂದೂ ಮುಖಂಡರಿಗೆ ಪೊಲೀಸರು ನೀಡಿದ್ದ ನೋಟಿಸ್ ಬಗ್ಗೆ ಪ್ರತಿಭಟನೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಪೊಲೀಸರೇ ನೀವು ಕೊಟ್ಟಿದ್ದು ನೋಟಿಸ್ ಅಲ್ಲ. ಅದು ಲವ್ ಲೆಟರ್ ಎಂದು ನಾವು ಭಾವಿಸಿದ್ದೇವೆ. ಅದಕ್ಕೆ ತಕ್ಕ ಉತ್ತರ ಕೊಡಲು ನಮ್ಮಲ್ಲಿ ಸಾಕಷ್ಟು ಜನ ವಕೀಲರು ಇದ್ದಾರೆ. ಐದು ದಿನಗಳಲ್ಲಿ 30 ಲಕ್ಷದಷ್ಟು ಖರ್ಚಾಗಿದೆ. ಇದಕ್ಕೆ ಕಾರಣ ಆದವರು ಅಂದು ಕಲ್ಲು ತೂರಿದವವರು. ಅವರ ಮನೆ ಹರಾಜು ಹಾಕಿ. ಹಣ ವಸೂಲಿ ಮಾಡಿ ಎಂದು ಮುಖಂಡರು ಆಗ್ರಹಿಸಿದರು.
ನಗರದೆಲ್ಲೆಡೆ ಕಟ್ಟೆಚ್ಚರ: ಹಿಂದೂಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರ, ನವನಗರ, ವಿದ್ಯಾಗಿರಿಯಲ್ಲಿ ಭಾರಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಮದ್ಯ ಮಾರಾಟ ಮತ್ತು ಸಾಗಾಣಿಕೆ ನಿಷೇಧಿಸಲಾಗಿತ್ತು. ಅಂಗಡಿ, ಮುಂಗಟ್ಟುಗಳು ಬಂದ್ ಇರಲಿಲ್ಲವಾದರೂ ಅನೇಕರು ಆತಂಕದಿಂದ ಅಂಗಡಿಗಳನ್ನು ಸ್ವಯಂ ಬಂದ್ ಮಾಡಿದ್ದರು. ಐದು ಜನ ಎಸ್ಪಿಗಳು, 12 ಡಿವೈಎಸ್ಪಿಗಳು ಸೇರಿದಂತೆ 1500ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.