ಕನ್ನಡಪ್ರಭ ವಾರ್ತೆ ಕಲಬುರಗಿ /ಅಫಜಲಪುರ ತಾಲೂಕಿನ ಅಭಿವೃದ್ಧಿ ಕಾರ್ಯಗಳು, ಅನುದಾನ ದುರ್ಬಳಕೆ ಹಾಗೂ ಭೀಮಾ ನದಿ ನೀರು ಹಂಚಿಕೆ ವಿಚಾರವಾಗಿ ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ ಅವರು, ಮೊದಲು ತಮ್ಮ ರಾಜಕೀಯ ಹಿನ್ನೆಲೆ ಹಾಗೂ ಹಿಂದಿನ ಕಾರ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ತಿರುಗೇಟು ನೀಡಿದರು.ಗೊಬ್ಬೂರ (ಬಿ) ಗ್ರಾಮದಲ್ಲಿ 500 ಮನೆಗಳ ವರ್ಕ್ ಆರ್ಡರ್ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದ ನಿತೀನ್ ಗುತ್ತೇದಾರ, ಮನೆಗಳ ಹಂಚಿಕೆಯಲ್ಲಿ ಶಾಸಕರು ರಾಜಕೀಯ ಮಾಡುತ್ತಿದ್ದಾರೆ. ಗೊಬ್ಬೂರ ಗ್ರಾಮದ ಮೊಮ್ಮಗನಾಗಿರುವ ಅರುಣಕುಮಾರ ಪಾಟೀಲ್ ಅವರು ಅಜ್ಜಿಯ ಊರಿನ ಜನರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಆರೋಪಿಸಿದ್ದರು. ತಾಲೂಕಿನಲ್ಲಿ ಅನುದಾನ ದುರ್ಬಳಕೆಯಾಗುತ್ತಿದ್ದು, ಭೀಮಾ ನದಿ ನೀರನ್ನು ಅಫಜಲಪುರ ತಾಲೂಕಿನ ಕೆರೆಗಳಿಗೆ ಹರಿಸದೆ ಆಳಂದ ತಾಲೂಕಿಗೆ ಹರಿಸಲಾಗುತ್ತಿದೆ ಎಂದು ದೂರಿದ್ದರು.ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅರುಣಕುಮಾರ ಪಾಟೀಲ್, ಆಳಂದ ತಾಲೂಕಿಗೆ ನೀರು ಹರಿಸುವ ಯೋಜನೆ ನಿತೀನ್ ಗುತ್ತೇದಾರ ಅವರ ಸಹೋದರ ಮಾಲಿಕಯ್ಯ ಗುತ್ತೇದಾರ ಶಾಸಕರಾಗಿದ್ದ ಅವಧಿಯಲ್ಲಿಯೇ ಜಾರಿಗೆ ಬಂದಿದೆ. ಅಂದಿನ ಯೋಜನೆಗಳ ಬಗ್ಗೆ ಈಗ ನಮ್ಮನ್ನು ಪ್ರಶ್ನಿಸುವ ಮೊದಲು ತಮ್ಮ ರಾಜಕೀಯ ಅವಧಿಯಲ್ಲಿನ ನಿರ್ಧಾರಗಳ ಬಗ್ಗೆಯೂ ಮಾತನಾಡಲಿ ಎಂದು ತಿರುಗೇಟು ನೀಡಿದರು.ನಿತೀನ್ ಗುತ್ತೇದಾರ ಅವರು ತಮ್ಮ ರಾಜಕೀಯ ಜೀವನಕ್ಕೆ ಮೊದಲ ಅವಕಾಶ ಕಲ್ಪಿಸಿದ ಸ್ವಂತ ಸಹೋದರ ಮಾಲಿಕಯ್ಯ ಗುತ್ತೇದಾರ ಅವರೊಂದಿಗೇ ನಡೆದುಕೊಂಡ ರೀತಿಯನ್ನು ಕ್ಷೇತ್ರದ ಜನರು ಗಮನಿಸಿದ್ದಾರೆ. ತಮ್ಮ ರಾಜಕೀಯ ಬದುಕಿಗೆ ಅಡಿಪಾಯ ಹಾಕಿದವರನ್ನೇ ಕಡೆಗಣಿಸಿ ಈಗ ವಿವಿಧ ಆರೋಪಗಳನ್ನು ಮಾಡುತ್ತಿರುವ ಅವರ ನಡೆ ಕ್ಷೇತ್ರದ ಮತದಾರರಿಗೆ ತಿಳಿದಿದೆ ಎಂದರು.ತಾಲೂಕಿನ ಜನರ ಸಮಸ್ಯೆಗಳ ಕುರಿತು ನಿತೀನ್ ಗುತ್ತೇದಾರ ಅವರು ಯಾವುದೇ ಪ್ರಶ್ನೆಗಳನ್ನು ಕೇಳಿದರೂ ಉತ್ತರಿಸಲು ಸಿದ್ಧರಿದ್ದೇವೆ. ಆದರೆ, ಆರು ಬಾರಿ ಶಾಸಕರಾಗಿದ್ದ ಮಾಲಿಕಯ್ಯ ಗುತ್ತೇದಾರ ಅವರ ಅವಧಿಯಲ್ಲಿ ನಿತೀನ್ ಗುತ್ತೇದಾರ ಕೂಡ ರಾಜಕೀಯವಾಗಿ ಸಕ್ರಿಯರಾಗಿದ್ದರು. ಅಷ್ಟೊಂದು ಅವಕಾಶಗಳಿದ್ದರೂ ತಮ್ಮ ಸ್ವಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಿಸುವಲ್ಲಿ ಏಕೆ ಸಾಧ್ಯವಾಗಲಿಲ್ಲ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.ರಾಜಕೀಯದಲ್ಲಿ ಇನ್ನಷ್ಟು ಪಕ್ವತೆ ಬೆಳೆಸಿಕೊಂಡು, ಯಾವುದೇ ಆರೋಪ ಮಾಡುವ ಮೊದಲು ಸಂಬಂಧಿತ ವಿಷಯಗಳ ಬಗ್ಗೆ ಸಮರ್ಪಕ ಹೋಂವರ್ಕ್ ಮಾಡಿಕೊಳ್ಳಬೇಕು. ಯಾರದೋ ಮಾತು ಕೇಳಿ ಆರೋಪಿಸುವ ಬದಲು ವಾಸ್ತವಾಂಶಗಳನ್ನು ಅರಿತು ಮಾತನಾಡಲಿ ಎಂದು ಅರುಣ ಪಾಟೀಲ್ ಸಲಹೆ ನೀಡಿದ್ದಾರೆ.