ರಾಮನಗರ: ಮೊಬೈಲ್ ಗಿಂತ ಜೀವನ ದೊಡ್ಡದು. ಪುಸ್ತಕ ಓದುವ ಅಭಿರುಚಿ ಅಗತ್ಯ. ಮೊಬೈಲ್ ಬಳಕೆಯಲ್ಲಿನ ವೈವಿಧ್ಯ ಆಪ್ ಗಳು ಮನಸ್ಸನ್ನು ದಿಕ್ಕೆಡಿಸುತ್ತವೆ. ಸಾಮಾಜಿಕ ಜಾಲತಾಣಗಳು ನಮ್ಮನ್ನು ಯಾಮಾರಿಸಿ, ಸಂಕಟಗಳ ಸುಳಿಗೆ ದೂಡುತ್ತವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಮರಿಸ್ವಾಮಿ ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ಬಾಲ್ಯದಲ್ಲಿ ಚುರುಕಿಲ್ಲದ ಎ.ಕೆ.ರಾಮಾನುಜನ್ ಗಣಿತ ಸೂತ್ರವನ್ನು ಕಂಡುಹಿಡಿದು ಪದ್ಮಶ್ರೀ ಪಾರಿತೋಷಕ ಪಡೆದರು. ಅವರು 10ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು. ಫೇಲಾದರೂ ಧೈರ್ಯ ಮತ್ತು ದೃಢತೆಯಿಂದ ಗೆಲ್ಲಬೇಕು. ನಕಾರಾತ್ಮಕವಾಗಿ ಯೋಚಿಸಬಾರದು. ಆತ್ಮವಿಶ್ವಾಸದಿಂದ ಕಠಿಣ ಸಂದರ್ಭವನ್ನು ಎದುರಿಸಬೇಕು ಎಂದು ಧೈರ್ಯ ತುಂಬಿದರು.
ಶಿಕ್ಷಣ ಕೇವಲ ಉದ್ಯೋಗ ಗಳಿಸುವುದಕ್ಕಲ್ಲ. ಸಮಸ್ಯೆಗಳು ಬಂದಾಗ ಶಿಕ್ಷಕರಿಗೆ, ಪೋಷಕರಿಗೆ ತಿಳಿಸಿ ಪರಿಹರಿಸಿಕೊಳ್ಳಬೇಕು. ನೀವೇ ಕೊರಗಿ ಅನಾಹುತ ಮಾಡಿಕೊಳ್ಳಬೇಡಿ. ಅನೇಕ ಕ್ಷೇತ್ರಗಳು ಖಾಸಗೀಕರಣಗೊಂಡು ಸ್ಪರ್ಧೆ ವ್ಯಾಪಕವಾಗಿದೆ. ಪುಸ್ತಕ ಓದಿದರೆ ಸಾಲಲ್ಲ. ಹೊಸ ತಂತ್ರಜ್ಞಾನದ ಕೌಶಲ್ಯತೆ ಬಳಸಿ, ವೇಗದ ಕೆಲಸ ಮಾಡುವ ಕಲೆಯೂ ಬೇಕು ಎಂದು ಮರಿಸ್ವಾಮಿ ಹೇಳಿದರು.ಕನ್ನಡ ಉಪನ್ಯಾಸಕ ಡಾ.ಡಿ.ಆರ್ ದೇವರಾಜ್ ಮಾತನಾಡಿ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ವೈದ್ಯರಾಗಲು ಪ್ರಯತ್ನಿಸಿ. ಅಂಕಗಳಿಕೆ ಮುಖ್ಯ. ಜೊತೆಗೆ ಗುಣಾತ್ಮಕ ಜೀವನವನ್ನು ರೂಪಿಸಿಕೊಳ್ಳಬೇಕು. ವೈಜ್ಞಾನಿಕ ಹಾಗೂ ಸ್ವತಂತ್ರ ಆಲೋಚನೆ ಮಾಡುವುದನ್ನು ಬೆಳೆಸಿಕೊಳ್ಳಿರಿ. ಎಲ್ಲವನ್ನು ಓದುತ್ತಿವಿ. ಆದರೆ ಮನೆಯಲ್ಲಿ ಮೌಢ್ಯವನ್ನು ಆಚರಿಸುತ್ತೇವೆ. ವಿದ್ಯಾರ್ಥಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ನಿರ್ಣಯ ಕೈಗೊಳ್ಳುವ ಅದನ್ನು ಆಚರಣೆಗೆ ತರುವ ಪ್ರಯತ್ನ ಮಾಡಿ ಯಶಸ್ಸು ಗಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಂಶುಪಾಲರ ಸಂಘದ ಜಿಲ್ಲಾ ಅಧ್ಯಕ್ಷ ಡಾ.ದೊಡ್ಡ ಬೋರಯ್ಯ ಮಾತನಾಡಿದರು. ನಿವೃತ್ತ ಶಿಕ್ಷಕ ಕೃಷ್ಣಪ್ಪ, ಪ್ರಾಂಶುಪಾಲ ಎಂ.ಎನ್. ಪ್ರದೀಪ್, ಸಿಡಿಸಿ ಉಪಾಧ್ಯಕ್ಷ ರವಿಚಂದ್ರೇಗೌಡ, ಸಿಡಿಸಿ ಸದಸ್ಯ ಪ್ರಕಾಶ್, ಉಪನ್ಯಾಸಕರಾದ ದೇವರಾಜು, ಚಂದ್ರಶೇಖರ್, ಸುರೇಶ್ ಕುಮಾರ್, ಚಂದ್ರು ಮತ್ತಿತರರು ಹಾಜರಿದ್ದರು.
ರಾಮನಗರ ತಾಲೂಕಿನ ಸುಗ್ಗನಹಳ್ಳಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಮರಿಸ್ವಾಮಿ ಉದ್ಘಾಟಿಸಿದರು.