ಕಾರ್ಕಳ: ಕರಾವಳಿ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದ್ದು, ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ನಿಟ್ಟೆ ಜವಳಿ ಪಾರ್ಕ್ ಹೋರಾಟ ಸಮಿತಿ ಅಧ್ಯಕ್ಷ ನೇಮಿರಾಜ ರೈ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಸಂತಸದ ವಿಚಾರ. ಸಭೆಯಲ್ಲಿ ಕರಾವಳಿಯ ನಿರುದ್ಯೋಗ ಸಮಸ್ಯೆ ಹಾಗೂ ಉದ್ಯೋಗ ಸೃಷ್ಟಿಯ ಕುರಿತು ಸರ್ಕಾರ ಗಂಭೀರವಾಗಿ ಚರ್ಚಿಸಬೇಕು ಎಂದರು.
ಜವಳಿ ಪಾರ್ಕ್ ಯೋಜನೆ ಪ್ರಸ್ತುತ ‘ಐಸಿಯು’ ಸ್ಥಿತಿಯಲ್ಲಿದೆ ಎಂದು ವ್ಯಂಗ್ಯವಾಡಿದ ನೇಮಿರಾಜ ರೈ, ಶಾಸಕ ವಿ. ಸುನಿಲ್ ಕುಮಾರ್ ಉದ್ದೇಶಪೂರ್ವಕವಾಗಿ ಯೋಜನೆಯನ್ನು ತಡೆಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು. ‘ಹಾರಿಕೆಯ ಉತ್ತರ ನೀಡುವುದಕ್ಕಿಂತ ನಾನು ಅಸಮರ್ಥ ಶಾಸಕ ಎಂದು ಹೇಳಲಿ’ ಎಂದು ಅವರು ಟೀಕಿಸಿದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕರ ಪ್ರತಿಕ್ರಿಯೆ ಲಭ್ಯವಾಗಿಲ್ಲ.ನಿಟ್ಟೆ ಜವಳಿ ಪಾರ್ಕ್ ಕೇವಲ ಒಂದು ಪ್ರದೇಶಕ್ಕೆ ಸೀಮಿತವಾದ ಯೋಜನೆಯಲ್ಲ. ಇದು ಕರಾವಳಿಯ ಯುವಜನರ ಉದ್ಯೋಗ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಯಾಗಿದೆ. ಮುಂಬರುವ ಮುಖ್ಯಮಂತ್ರಿ ಭೇಟಿಯ ಸಂದರ್ಭದಲ್ಲೂ ಯೋಜನೆಗೆ ಆದ್ಯತೆ ನೀಡಿ, ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆನಂದ ಜೋಸೆಫ್, ಪೀಟರ್ ಸಾಲ್ಡಾನ, ಶೋಭಾ ಮೂಲ್ಯ, ಒಪೀಲಿಯಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.