ಕಾರ್ಕಳ: ಘಟಿಕೋತ್ಸವವು ಕೇವಲ ಪದವಿ ಪ್ರದಾನ ಸಮಾರಂಭವಲ್ಲ. ಹಲವು ವರ್ಷಗಳ ಪರಿಶ್ರಮ, ಕಲಿಕೆ, ಪ್ರಯೋಗಾಲಯದ ಅನುಭವ ಹಾಗೂ ಸವಾಲುಗಳನ್ನು ಎದುರಿಸಿ ಸಾಧಿಸಿದ ಮಹತ್ವದ ಮೈಲಿಗಲ್ಲು. ಇದು ಬದುಕಿನ ಹೊಸ ಅವಕಾಶಗಳಿಗೆ ನಾಂದಿ ಎಂದು ಪದ್ಮಶ್ರೀ ಪುರಸ್ಕೃತ, ಡಿಆರ್‌ಡಿಎಲ್-ಡಿಆರ್‌ಡಿಒ ಮಾಜಿ ನಿರ್ದೇಶಕ ಹಾಗೂ ಎಸ್-ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಹ್ಲಾದ ರಾಮ ರಾವ್ ಹೇಳಿದರು.
ಪದವೀಧರರು ತಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ವ್ಯಕ್ತಿತ್ವ ನಿರ್ಮಾಣದ ಜತೆಗೆ ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿಯೂ ತಮ್ಮ ಕೊಡುಗೆ ನೀಡಬೇಕು ಎಂದರು ಮತ್ತು ನಿಟ್ಟೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆ ಮತ್ತು ಸಾಮಾಜಿಕ ಕೊಡುಗೆಯನ್ನು ಶ್ಲಾಘಿಸಿದರು.
ಸಹ ಕುಲಾಧಿಪತಿ ಪ್ರೊ. ಎಂ. ಶಾಂತರಾಮ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಪದವಿಯೊಂದಿಗೆ ಗಳಿಸಿರುವ ಜ್ಞಾನ ಮತ್ತು ಕೌಶಲವನ್ನು ಜೀವನದಲ್ಲಿ ಸಮರ್ಥವಾಗಿ ಬಳಸಿಕೊಳ್ಳಬೇಕು, ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಕುಲಾಧಿಪತಿ ವಿಶಾಲ್ ಹೆಗ್ಡೆ ಮಾತನಾಡಿ, ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿ ಜ್ಞಾನ, ಮೌಲ್ಯ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಬೇಕು. ಸಂಸ್ಥೆಯಲ್ಲಿ ಪಡೆದ ಶಿಕ್ಷಣವನ್ನು ವೃತ್ತಿಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉಪಯುಕ್ತರಾಗಬೇಕು ಎಂದರು.
ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್‌ನ ಪರೀಕ್ಷಾ ನಿಯಂತ್ರಕ ಡಾ. ಸುಬ್ರಹ್ಮಣ್ಯ ಭಟ್ ಕೆ. ಘಟಿಕೋತ್ಸವ ಮೆರವಣಿಗೆಯನ್ನು ಮುನ್ನಡೆಸಿ, ಪದವಿ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಕುಲಪತಿ ಪ್ರೊ. ಎಂ.ಎಸ್. ಮೂಡಿತ್ತಾಯ ಸ್ವಾಗತಿಸಿದರು. ಸಹಪ್ರಾಧ್ಯಾಪಕರಾದ ಡಾ. ಗ್ರೈನಲ್ ಡಿಮೆಲ್ಲೊ ಹಾಗೂ ಡಾ. ಸ್ನೇಹಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.