ಗದಗ: ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರಾದ ಶ್ರೀನಿಟ್ಟೂರು ಶ್ರೀನಿವಾಸರಾಯರು 101 ವರ್ಷಗಳ ತುಂಬು ಜೀವನ ಸಾಗಿಸಿದ್ದರು, ಅವರ ಬದುಕು ಎಲ್ಲರಿಗೂ ಆದರ್ಶಮಯವಾದುದು ಎಂದು ಕಸಾಪ ತಾಲೂಕಾಧ್ಯಕ್ಷೆ ಡಾ. ರಶ್ಮಿ ಅಂಗಡಿ ಹೇಳಿದರು.
ಅವರು ಇತ್ತೀಚೆಗೆ ನಗರದ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಭೈರನಟ್ಟಿ, ಗದಗ ಜಿಲ್ಲಾ ಕಸಾಪ ಮತ್ತು ಗದಗ ತಾಲೂಕು ಕಸಾಪ ವತಿಯಿಂದ ಜರುಗಿದ ಕರ್ನಾಟಕ ಏಕೀಕರಣ ವೀರರ ಯಶೋಗಾಥೆ ಅಡಿಯಲ್ಲಿ ನಿಟ್ಟೂರು ಶ್ರೀನಿವಾಸರಾಯರ ಕುರಿತು ಉಪನ್ಯಾಸ ನೀಡಿ, ಮಾತನಾಡಿದರು.ವಿಜ್ಞಾನದಲ್ಲಿ ಆಸಕ್ತಿ ಇದ್ದ ಶ್ರೀನಿವಾಸರಾಯರು ತಂದೆಯ ಅನಾರೋಗ್ಯದ ಕಾರಣದಿಂದ ಮದರಾಸಿನ ಕಾನೂನು ಮಹಾವಿದ್ಯಾಲಯಕ್ಕೆ ತೆರಳಿ ಅಲ್ಲಿ ಕಾನೂನು ಓದಿದರು.ಬೆಂಗಳೂರಿನಲ್ಲಿ ತಮ್ಮ ಕಾನೂನು ವೃತ್ತಿ ಆರಂಭಿಸಿದ ಅವರು, ಕೆಲವೇ ವರ್ಷದಲ್ಲಿ ಶ್ರೇಷ್ಠ ವಕೀಲರಾಗಿ ಹೆಸರುವಾಸಿಯಾದರು. ಆ ನಂತರ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಅವರು ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಗಾಂಧೀಜಿ ಗಾಢ ಪ್ರಭಾವದಿಂದ ತಮ್ಮ 18ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದ ಅವರು, ತಮ್ಮ ಪತ್ನಿಯಾದ ಪದ್ಮಾವತಿಯವರೊಡನೆ ಸೇರಿಕೊಂಡು ಗಾಂಧೀಜಿಯವರು ಗುಜರಾತಿಯಲ್ಲಿ ಬರೆದ ಲೇಖನ ಮತ್ತು ಅವರ ಆತ್ಮಚರಿತ್ರೆ ಕನ್ನಡಕ್ಕೆ ಮೊಟ್ಟ ಮೊದಲು ಸತ್ಯ ಸಂಶೋಧನೆ ಎನ್ನುವ ಹೆಸರಲ್ಲಿ ಅನುವಾದ ಮಾಡಿದ್ದಾರೆ. ಡಿ.ವಿ.ಜಿ., ಗೋಖಲೆ ಅವರಿಂದ ಪ್ರಭಾವಿತರಾಗಿ ಅವರ ಹೆಸರಿನ ಸಂಸ್ಥೆ ಹುಟ್ಟು ಹಾಕಿ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದರು. ಕನ್ನಡದ ಅಂದಿನ ಬಹುತೇಕ ಹಿರಿಯ ಸಾಹಿತಿಗಳ ಜತೆ ಸ್ನೇಹ ಸಂಪರ್ಕ ಹೊಂದಿದ್ದ ಶಿವರಾಮ ಕಾರಂತ ಬಾಲ ಪ್ರಪಂಚ ಸೇರಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಕನ್ನಡ ನಾಡು-ನುಡಿ ಮತ್ತು ಭಾರತದ ಸಮಗ್ರತೆ ಎತ್ತಿ ಹಿಡಿಯುವಲ್ಲಿ ಅವರ ಕಾರ್ಯ ಸ್ಮರಣೀಯ ಎಂದರು.
ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಡಿ.ಸಿ. ಪಾವಟೆ ಕಾಲೇಜಿನ ಪ್ರಾ. ಎಸ್.ಪಿ. ಗೌಳಿ ಅಧ್ಯಕ್ಷತೆ ವಹಿಸಿದ್ದರು. ಭೈರನಟ್ಟಿಯ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಆರ್.ಕೆ. ಐನಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಸ್. ಪಲ್ಲೇದ, ಶಿಕ್ಷಕ ಕೆ.ಸಿ. ಪಟ್ಟಣಶೆಟ್ಟಿ, ಕಸಾಪ ಕೋಶಾಧ್ಯಕ್ಷ ಡಿ.ಎಸ್. ಬಾಪೂರಿ ಇದ್ದರು. ಕೆ.ಬಿ. ಸಂಕನಗೌಡರ ನಿರೂಪಿಸಿದರು. ಗಿರಿಜಾ ಹಸಬಿ ವಂದಿಸಿದರು.