ಮುಳಗುಂದ: ಶಿಕ್ಷಣ ಪ್ರೇಮಿ ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಮೋಘವಾದದ್ದು, ಗುರುಕುಲ ಮಾದರಿಯ ಆಶ್ರಮದಲ್ಲಿ ಇಂದಿಗೂ ನಿತ್ಯ ಅನುಭವಿಕ ಶಿಕ್ಷಕ ತಂಡದಿಂದ ಅಕ್ಷರ ದಾಸೋಹ ನಡೆದಿರುವುದು ಅಭಿನಂದನೀಯ ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ಅವರು ಸಮೀಪದ ಕಣವಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶುಕ್ರವಾರ ಶಿಕ್ಷಣ ಪ್ರೇಮಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಿಗೇರಿ ಗುರುಗಳು ಗದುಗಿನಲ್ಲಿ ತಾವಿದ್ದ ಕೊಠಡಿಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಟ್ಯೂಶನ್ ಹೇಳುವ ಪರಿಪಾಠವಿಟ್ಟುಕೊಂಡವರು, ಈ ಟ್ಯೂಶನ್ ಹೇಳುವ ಸುದ್ದಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಕಾಲ ಕ್ರಮೇಣ ಅದು ಗುರುಕುಲ ಮಾದರಿಯಲ್ಲಿ ಬೆಳೆದು ಬಂದು ಅವರ ತರುವಾಯ ಅವರ ಶಿಷ್ಯರು ಈ ಗುರುಕುಲವನ್ನು ಪ್ರಗತಿಪಥದಲ್ಲಿ ಮುನ್ನಡೆಸಿಕೊಂಡು ಬಂದಿರುವದು ಶ್ಲ್ಯಾಘನೀಯ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಲ್ಲಿಯೇ ಬಂದು ಪ್ರತಿಭಾನ್ವಿತರಿಗೆ ಪ್ರತಿಷ್ಠಾನವು ಪುರಸ್ಕರಿಸುತ್ತಿರುವದು ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ, ಪ್ರೇರಣೆ ನೀಡಿದಂತಾಗಿದೆ ಅಣ್ಣಿಗೇರಿ ಗುರುಗಳ ಗುರುಕುಲ ಆಶ್ರಮದಲ್ಲಿ ನಡೆಯುತ್ತಿರುವ ಅಕ್ಷರ ದಾಸೋಹ- ಜ್ಞಾನ ದಾಸೋಹ ನಿತ್ಯ ನಿರಂತರವಾಗಿರಲಿ ಎಂದರು.ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಲು ಆಯಾ ಶಾಲೆಗೆ ತೆರಳಿ ಪ್ರತಿಭೆ ಗೌರವಿಸಲು ಪ್ರತಿಷ್ಠಾನ ಮುಂದಾಗಿದೆ ಎಂದರು.
ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿ ಪ್ರತಿಭಾ ಪುರಸ್ಕಾರ ನೀಡಲಾಯಿತು.ಜಿಮ್ಸ್ ವೈದ್ಯಾಧಿಕಾರಿ ಡಾ. ಜಿ.ಎಸ್. ಪಲ್ಲೇದ, ಡೈಟ್ ಉಪನ್ಯಾಸಕ ಶಂಕರ ಹಡಗಲಿ, ಯಲ್ಲಪ್ಪ ಕಲ್ಯಾಣಿ, ಬಸಪ್ಪ ಸೋಗಿ, ಶಂಕ್ರಪ್ಪ ಅಣ್ಣಿಗೇರಿ, ಕಾರ್ಯದರ್ಶಿ ಶಿವಪ್ಪ ಕತ್ತಿ, ಖಜಾಂಚಿ ಸಿದ್ಧಲಿಂಗನಗೌಡ ಪಾಟೀಲ, ನಿರ್ದೇಶಕ ಶಿವಾನಂದ ದಂಡಿನ, ವಿರುಪಾಕ್ಷಪ್ಪ ಮ್ಯಾಗೇರಿ, ಚನ್ನಪ್ಪ ಮಲ್ಲಾಡದ, ಎಂ.ಎಸ್. ಗಾರವಾಡ, ತೋಂಟೇಶ ವೀರಲಿಂಗಯ್ಯನಮಠ, ವಿರುಪಾಕ್ಷಪ್ಪ ಶಾಂತಗೇರಿ, ಕಳಕಪ್ಪ ಕುರ್ತಕೋಟಿ ಇದ್ದರು.
ಎಸ್.ಜಿ. ಮೂಲಿಮನಿ ಸ್ವಾಗತಿಸಿದರು. ಜಿ.ಎನ್. ಮುದ್ದಿಕೋಲ ವಂದಿಸಿದರು.