ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ (ಎನ್ಎಂಪಿಎ) ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ (ಎನ್ಎಂಪಿಎ) ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಎನ್ಎಂಪಿಎ ಉಪಾಧ್ಯಕ್ಷೆ ಎಸ್.ಶಾಂತಿ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕ ಹಾಗೂ ಮಂಗಳೂರಿನ ಜನತೆ ತೋರಿದ ಆತ್ಮೀಯತೆ, ಸಹಕಾರ ಮತ್ತು ಸೌಹಾರ್ದ ಮನೋಭಾವಕ್ಕೆ ಕೃತಜ್ಞತೆಗಳು. ಎಲ್ಲ ಭಾಗದ ಜನರ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಕರ್ನಾಟಕದ ಗುಣ ಶ್ಲಾಘನೀಯ. ವಿವಿಧ ರಾಜ್ಯಗಳಿಂದ ಬಂದಿರುವ ಉದ್ಯೋಗಿಗಳು ಎನ್ಎಂಪಿಎಯಲ್ಲಿ ಆತ್ಮೀಯ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಪ್ರಗತಿ ಇತರ ರಾಜ್ಯಗಳ ಪ್ರಗತಿಯೊಂದಿಗೆ ಕೈಜೋಡಿಸಿದಾಗ ಮಾತ್ರ ರಾಷ್ಟ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು. ಕರ್ನಾಟಕದ ಹೊರಗಿನಿಂದ ಬಂದಿರುವ ಉದ್ಯೋಗಿಗಳು ಕನ್ನಡ ಭಾಷೆಯನ್ನು ಕಲಿಯುವಂತೆ ಪ್ರೋತ್ಸಾಹಿಸಿದ ಅವರು, ಅವರಲ್ಲಿ ಆಸಕ್ತಿ ಮೂಡಿಸಲು ವಿಶೇಷ ಸ್ಪರ್ಧೆಗಳನ್ನು ಆಯೋಜಿಸುವ ಸಲಹೆಯನ್ನೂ ನೀಡಿದರು.
ಖ್ಯಾತ ಸಾಹಿತಿ ಹಾಗೂ ನಿರೂಪಕ ಪ್ರಕಾಶ್ ಹೊಸಬೆಟ್ಟು ಮುಖ್ಯ ಅತಿಥಿಯಾಗಿದ್ದರು. ಎನ್ಎಂಪಿಎ ಕನ್ನಡ ಸಂಘದ ಅಧ್ಯಕ್ಷ ಯಲ್ಲಪ್ಪ ವಡ್ಡರ್, ಪ್ರಾಧಿಕಾರದ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಖಾ ಹೊಸಕೇರಿ ಮತ್ತಿತರರು ಇದ್ದರು.
ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಡಾ.ಸುರೇಖಾ ಹೊಸಕೇರಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.