ಅಕ್ರಮ ನಡೆಸಿದವರ ಮೇಲೆ ಏಕಿಲ್ಲ ಕ್ರಮ: ಮುಂಡಗೋಡ ಪಪಂ ಅಧ್ಯಕ್ಷೆ ಆಕ್ರೋಶ

KannadaprabhaNewsNetwork |  
Published : Jun 01, 2025, 03:23 AM IST
ಮುಂಡಗೋಡ: ಇಲ್ಲಿಯ ಪ.ಪಂ ಅಧ್ಯಕ್ಷೆ ಜಯಸುಧಾ ಬೋವಿ ಶನಿವಾರ ಇಲ್ಲಿಯ ಪ.ಪಂ ಸಭಾಂಗಣದಲ್ಲಿ ಪ.ಪಂ ನ ಹೊರಗುತ್ತಿಗೆ ನೌಕರ ಭಾರಿ ಅವ್ಯವಹಾರ ನಡೆಸಿರುವ ಬಗ್ಗೆ ದಾಖಲೆ ಪ್ರದರ್ಶಿಸುವ ಮೂಲಕ ಪತ್ರಕರ್ತರಿಗೆ ಮಾಹಿತಿ ನೀಡಿದರು. | Kannada Prabha

ಸಾರಾಂಶ

ಈವರೆಗೂ ಪಪಂನಿಂದ ನಡೆದ ಬಹುತೇಕ ಗುತ್ತಿಗೆ ಕಾಮಗಾರಿಗಳನ್ನು ಈ ಹೊರ ಗುತ್ತಿಗೆ ನೌಕರ ತಮ್ಮ ಸಂಬಧಿಕರ ಹೆಸರಿನಲ್ಲಿ ಮಾಡಿಸಿದ್ದಾನೆ.

ಮುಂಡಗೋಡ; ಪಪಂನ ಹೊರಗುತ್ತಿಗೆ ನೌಕರನೋರ್ವ ಭಾರಿ ಅವ್ಯವಹಾರ ನಡೆಸಿದ್ದು, ಆತ ಮತ್ತು ಆತನಿಗೆ ಸಹಕರಿಸಿ ಪಪಂ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕಾನೂನು ಕ್ರಮವಾಗಬೇಕು ಎಂದು ಪಪಂ ಅಧ್ಯಕ್ಷೆ ಜಯಸುಧಾ ಬೋವಿ ಹೇಳಿದರು.

ಶನಿವಾರ ಇಲ್ಲಿಯ ಪಪಂ ಸಭಾಂಗಣದಲ್ಲಿ ಈ ಬಗ್ಗೆ ದಾಖಲೆ ಪ್ರದರ್ಶಿಸುವ ಮೂಲಕ ಪತ್ರಕರ್ತರಿಗೆ ಮಾಹಿತಿ ನೀಡಿದರು. ಈವರೆಗೂ ಪಪಂನಿಂದ ನಡೆದ ಬಹುತೇಕ ಗುತ್ತಿಗೆ ಕಾಮಗಾರಿಗಳನ್ನು ಈ ಹೊರ ಗುತ್ತಿಗೆ ನೌಕರ ತಮ್ಮ ಸಂಬಧಿಕರ ಹೆಸರಿನಲ್ಲಿ ಮಾಡಿಸಿದ್ದಾನೆ. ಎಂಜಿನಿಯರ್ ಹಾಗೂ ಮುಖ್ಯಾಧಿಕಾರಿ ಕೀ ಬಳಸಿ ಕಾಮಗಾರಿಯ ಮೂರನೇ ವ್ಯಕ್ತಿ ತಪಾಸಣೆಯನ್ನು ಕೂಡ ತಾನೇ ಸ್ವತಃ ಮಾಡಿದ ಬಗ್ಗೆ ದಾಖಲೆಗಳಿವೆ. ೨೦೦೪ರಲ್ಲಿ ಕಂಪ್ಯೂಟರ್ ಆಪರೇಟರ್ ಎಂದು ಆತನನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದ್ದು, ೨೦ ವರ್ಷಗಳಿಂದ ಆತನನ್ನು ಮುಂದುವರೆಸಿಕೊಂಡು ಬರಲಾಗಿದ್ದು, ಸರ್ಕಾರದ ಆದೇಶವನ್ನು ಗಾಳಿಗೆ ತೂರಲಾಗಿದೆ. ವರ್ಷದಲ್ಲಿ ಶೇ.೩೦-೪೦ರಷ್ಟು ಕಾಮಗಾರಿಗಳನ್ನು ತನ್ನ ಸಂಬಂಧಿಕರ ಹೆಸರಿನಲ್ಲಿ ಮಾಡಿಸಿದ್ದಾನೆ ಎಂದು ದೂರಿದರು.

ಈ ಬಗ್ಗೆ ಪರಿಶಿಷ್ಟ ಗುತ್ತಿಗೆದಾರರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಆತ ನಡೆಸಿದ ಬಹುತೇಕ ಅಕ್ರಮ ಬಯಲಿಗೆ ಬಂದಿದೆ. ಆತನನ್ನು ಕೆಲಸದಿಂದ ತೆಗೆದು ಹಾಕುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಆದರೆ ಇಲ್ಲಿಯ ಮುಖ್ಯಾಧಿಕಾರಿ ಆತನನ್ನು ತೆಗೆದು ಹಾಕುವ ಬದಲು ಆತನಿಗೆ ನೋಟಿಸ್ ನೀಡಿ ಜಿಲ್ಲಾಧಿಕಾರಿ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು.

ಇವೆಲ್ಲ ಬೆಳವಣಿಗೆ ನೋಡಿದರೆ ಪಪಂ ಅಧಿಕಾರಿಗಳು, ಸಿಬ್ಬಂದಿ ಆತ ನಡೆಸಿದ ಅವ್ಯವಹಾರಗಳಲ್ಲಿ ಪಾಲುದಾರರಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದರಲ್ಲಿ ಯಾರ‍್ಯಾರ ಕೈವಾಡವಿದೆ ಎಂಬುವುದನ್ನು ನಾವು ಬಯಲಿಗೆಳೆಯುತ್ತೇವೆ. ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಅವ್ಯವಹಾರ ನಡೆದಿರುವ ಬಗ್ಗೆ ಸಂಪೂರ್ಣ ದಾಖಲೆ ಕಲೆ ಹಾಕಲಾಗಿದ್ದು, ಪೊಲೀಸ ಪ್ರಕರಣ ದಾಖಲಿಸಲು ಸಿದ್ದತೆ ನಡೆಸಲಾಗಿದೆ. ಅಗತ್ಯ ಬಿದ್ದರೆ ಸೈಬರ್ ಕ್ರೈಂಗೂ ದೂರು ಸಲ್ಲಿಸಲಾಗುವುದು. ಇದರ ನಂತರವು ಕೂಡ ಕ್ರಮವಾಗದಿದ್ದರೆ ಲೋಕಾಯುಕ್ತರಿಗೂ ದೂರು ಸಲ್ಲಿಸುವುದಾಗಿ ಎಚ್ಚರಿಸಿದರು.

ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಸದಸ್ಯರಾದ ವಿಶ್ವನಾಥ ಪವಾಡಶೆಟ್ಟರ, ಶೇಖರ ಲಮಾಣಿ, ಬಿಬಿಜಾನ್ ಮುಲ್ಲಾನವರ, ರಜಾ ಖಾನ ಪಠಾಣ, ಮಹ್ಮದಗೌಸ ಮಖಾಂದಾರ, ಮಂಜುನಾಥ, ನಿರ್ಮಲಾ ಬೆಂಡ್ಲಗಟ್ಟಿ, ಮಹ್ಮದಜಾಪರ್ ಹಂಡಿ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ