ಕನ್ನಡಪ್ರಭವಾರ್ತೆ ಮದ್ದೂರು
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮದ್ದೂರು ಕ್ಷೇತ್ರದಲ್ಲಿ ಜೆಡಿಎಸ್ ನೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ ಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮಂಗಳವಾರ ಹೇಳಿದರು.ಪಟ್ಟಣದ ಮಳವಳ್ಳಿ ರಸ್ತೆಯ ಬಿಜೆಪಿ ಕಚೇರಿಯಲ್ಲಿ ತಾಲೂಕಿನ ನೀಲಕಂಠನಹಳ್ಳಿಯ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಆಯ್ಕೆಯಾದ ಎನ್ ಡಿಎ ಬೆಂಬಲಿತ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ವರಿಷ್ಠರಿಂದ ಯಾವುದೇ ಆದೇಶ ಬಂದಿಲ್ಲ ಎಂದರು.
ಕ್ಷೇತ್ರದಲ್ಲಿ 7 ಜಿಪಂ ಮತ್ತು 23 ತಾಪಂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ನಮ್ಮ ಪಕ್ಷದ ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಲಾಗಿದೆ. ಆದರೆ, ಮೈತ್ರಿ ಬಗ್ಗೆ ಬಿಜೆಪಿ ವರಿಷ್ಠರಿಂದ ಯಾವುದೇ ಆದೇಶ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.ಕಳೆದ ಮನ್ಮುಲ್ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ನಮ್ಮ ಪಕ್ಷದ ವರಿಷ್ಠರ ತೀರ್ಮಾನಕ್ಕೆ ವಿರುದ್ಧವಾಗಿ ಕೆಲಸ ಮಾಡುವ ಮೂಲಕ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಮುಂದಿನ ಬೆಳವಣಿಗೆ ನೋಡಿಕೊಂಡು ಚುನಾವಣೆ ವೇಳೆಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿರುವ ಯಾವುದೇ ವ್ಯಕ್ತಿ ಮೊದಲು ಪಕ್ಷ ನಿಷ್ಠೆ ಹೊಂದಬೇಕು. ಇಲ್ಲದಿದ್ದರೆ ಆತನಿಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದು ಈಗಾಗಲೇ ಸಾಬೀತಾಗಿದೆ ಎಂದು ಜೆಡಿಎಸ್ ನಾಯಕರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.ಈ ವೇಳೆ ನೀಲಕಂಠನ ಹಳ್ಳಿ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಸಿ.ಚೆನ್ನಪ್ಪ, ಎನ್. ಆರ್. ಪ್ರಕಾಶ್, ಡೇರಿ ಎನ್. ಸಿ. ಸೋಮಣ್ಣ, ಹಾಗಲ ಹಳ್ಳಿ ನಿಂಗಮ್ಮ, ಭಾಗ್ಯಲಕ್ಷ್ಮೀ, ವೀರಭದ್ರ, ಮುಖಂಡರಾದ ಎಚ್. ಎಂ. ಪುಟ್ಟಸ್ವಾಮಿ, ಸಿದ್ದರಾಮ, ಸತೀಶ, ಪ್ರಸನ್ನ, ಬೋರೇಗೌಡ, ಉಮೇಶ, ಬಿಜೆಪಿ ನಗರ ಘಟಕದ ಅಧ್ಯಕ್ಷ ಮಧು ಕುಮಾರ್ ಮತ್ತು ಗ್ರಾಮದ ಮುಖಂಡರು ಇದ್ದರು.