ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ವಿರೋಧಿ ಟಿಪ್ಪು ಗೋಷ್ಠಿ ಬೇಡ: ಬಿಜೆಪಿ

KannadaprabhaNewsNetwork |  
Published : Dec 07, 2024, 12:33 AM IST
6ಕೆಎಂಎನ್ ಡಿ16 | Kannada Prabha

ಸಾರಾಂಶ

ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ವಿರೋಧಿ ವ್ಯಕ್ತಿಯ ವಿಚಾರ ಗೋಷ್ಠಿಯನ್ನು ಕೆಲ ಸಾಹಿತಿಗಳು ಆಯೋಜಿಸಲು ಸಿದ್ಧತೆ ಮಾಡಿರುವುದು ಮಾಧ್ಯಮಗಳ ಮೂಲಕ ತಿಳಿದಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ವಿರೋಧಿ ಟಿಪ್ಪು ಸುಲ್ತಾನ್ ವಿಚಾರ ಗೋಷ್ಠಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಯಕರ್ತರು, ಟಿಪ್ಪು ಸುಲ್ತಾನ್ ಕನ್ನಡ ವಿರೋಧಿಯೂ ಆಗಿದ್ದು, ಆತ ತನ್ನ ಆಡಳಿತಾವಧಿಯಲ್ಲಿ ಈ ನಾಡಿನ ಜನರ ಮೇಲೆ ಬಲತ್ಕಾರವಾಗಿ ಪರ್ಷಿಯಾ ಭಾಷೆಯನ್ನು ಹೇರಿ ಜಾರಿಗೆ ತಂದಿರುವುದನ್ನು ಇತಿಹಾಸದ ಪುಟಗಳು ಸಾರಿ ಹೇಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಆತನ ಮತಾಂಧತೆ ಹಾಗೂ ಕನ್ನಡ ವಿರೋಧಿ ನಿಲುವಿನ ಕುರಿತು ವ್ಯಾಪಕ ಚರ್ಚೆಗಳು ನಡೆದಿವೆ. ಕನ್ನಡ ದ್ವೇಷಿ ಹಾಗೂ ಹಿಂದು ವಿರೋಧಿ ಮತಾಂಧನೆಂಬುದು ಮತ್ತಷ್ಟು ಬಹಿರಂಗವಾಗಿದೆ ಎಂದು ದೂರಿದರು.

ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ವಿರೋಧಿ ವ್ಯಕ್ತಿಯ ವಿಚಾರ ಗೋಷ್ಠಿಯನ್ನು ಕೆಲ ಸಾಹಿತಿಗಳು ಆಯೋಜಿಸಲು ಸಿದ್ಧತೆ ಮಾಡಿರುವುದು ಮಾಧ್ಯಮಗಳ ಮೂಲಕ ತಿಳಿದಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ನಾಡಿನ ಹಿರಿಯ ಸಾಹಿತಿಗಳು ಹೊರತಂದಿರುವ ಸುವರ್ಣ ಮಂಡ್ಯ ಪುಸ್ತಕದಲ್ಲೂ ಟಿಪ್ಪು ಸುಲ್ತಾನ್ ಒಕ್ಕಲಿಗರ ವಿರೋಧಿ, ಕನ್ನಡ ವಿರೋಧಿ, ಮತಾಂಧ, ಸ್ತ್ರಿ ಪೀಡಕ ಎಂಬುದರ ಬಗ್ಗೆ ಉಲ್ಲೇಖಿಸಲಾಗಿದೆ. ಮೈಸೂರು ಗೆಜೆಟೀರ್ , ಚಿತ್ರದುರ್ಗ ಗೆಜೆಟೀರ್ , ಕೊಡಗು ಗೆಜೆಟೀರ್ ಹಾಗೂ ಟಿಪ್ಪುವಿನ ಆಸ್ಥಾನದ ಇತಿಹಾಸಕಾರ ಮೀರ್ ಹುಸ್ಸೇನ್ ಅಲಿಖಾನ್ ಕೀರ್ಮಾನಿ ಅವರಿಂದ ವಿರಚಿತವಾದ ದಿ ನಿಶಾನ್ ಏ ಹೈದರಿಯಲ್ಲಿ ಆತನ ಆಡಳಿತದ ಕಾಲದಲ್ಲಿ ಕರ್ನಾಟಕದ ಅನೇಕ ಊರುಗಳ ಹೆಸರನ್ನು ಪರ್ಷಿಯನ್ ಭಾಷೆಗೆ ಬದಲಾಯಿಸಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.

ಸುಮಾರು 30 ಕೋಟಿ ರು. ಹೆಚ್ಚು ಹಣ ವ್ಯಯಮಾಡಿ ನುಡಿ ಜಾತ್ರೆ ಮಂಡ್ಯ ಜಿಲ್ಲೆಯಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಮೊಸರಿನ ಸಿಕ್ಕ ಕಲ್ಲಿನ ಹಾಗೆ ಕನ್ನಡ ವಿರೋಧಿ ಟಿಪ್ಪುವಿನ ವಿಚಾರ ಗೋಷ್ಠಿಯನ್ನು ಸಮ್ಮೇಳನದಲ್ಲಿ ಆಯೋಜಿಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮನವಿ ಮಾಡಿದರು.

ಈ ವೇಳೆ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್‌, ಶಿವಕುಮಾರ್‌ ಆರಾಧ್ಯ, ಹೊಸಹಳ್ಳಿ ಶಿವು, ನಂದೀಶ್‌ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ