ಶಿರಹಟ್ಟಿ: ಯುವ ಜನತೆ ದುಶ್ಚಟಗಳಿಂದ ದೂರ ಉಳಿಯುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಬದುಕಿಗೆ ಹಾಸು ಹೊಕ್ಕಾಗಿರುವ ಗ್ರಾಮೀಣ ಕಲೆ ಅಳಿದು ಹೋಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಭಕ್ತಿಪೂರ್ವಕವಾದ ಡೊಳ್ಳಿನ ಪದಗಳನ್ನು ನಡೆಸುತ್ತಿರುವುದು ಮುಂದಿನ ಯುವ ಪೀಳಿಗೆಗೆ ಸಹಕಾರಿಯಾಗಲಿದೆ ಎಂದು ತಹಸೀಲ್ದಾರ ಅನಿಲ ಬಡಿಗೇರ ಹೇಳಿದರು.
ಸಂಸ್ಕಾರ ಮನುಷ್ಯನ ಜೀವನದ ದಿಕ್ಕನ್ನು ಬದಲಿಸುತ್ತದೆ. ಶಾಂತಿ, ಸಹಬಾಳ್ವೆ,ಸಹಾನುಭೂತಿ, ಸ್ನೇಹ, ಪ್ರೀತಿಯಂಥ ಉದಾತ್ತ ಗುಣ ಬೆಳೆಸಿಕೊಂಡು ಉತ್ತಮ ಸಮಾಜದ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.
ಧಾರ್ಮಿಕ ಸಂಸ್ಕಾರ ಉಳಿಸಿ ಬೆಳೆಸುವ ಮೂಲಕ ದೇಶದ ಪರಂಪರೆ ಕಾಪಾಡಬೇಕು. ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಯ ಕಾಲದಲ್ಲಿ ಸಮಾಜದ ಯುವಕರು ಪ್ರಾಚೀನ ಹಾಗೂ ಪರಂಪರೆಯಾಗಿ ಉಳಿದುಕೊಂಡು ಬಂದಿರುವ ಡೊಳ್ಳಿನ ಪದಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.ವಿಶೇಷವಾಗಿ ಸಮಾಜದಲ್ಲಿ ಹಿಂದುಳಿದ ಜನರು ಶಿಸ್ತುಬದ್ಧ ಜೀವನ ನಡೆಸದೇ ಹೋದರೆ ನಮ್ಮನ್ನು ಯಾರು ಉದ್ಧಾರ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ಜೀವನ ತಿದ್ದುತ್ತಾರೆ, ಸಂಸ್ಕಾರ ಕೊಡುತ್ತಾರೆ ಎಂದು ಭಾವಿಸುವುದು ತಪ್ಪು.ಇಂತಹ ಹಿಂದುಳಿದ ಸಮಾಜದಲ್ಲಿರುವ ಮಕ್ಕಳು ಶಿಕ್ಷಣ ಪಡೆಯಬೇಕು. ಜತೆಗೆ ಕಡ್ಡಾಯವಾಗಿ ಶಾಲೆಗೆ ಹೋಗಬೇಕು. ಶಿಕ್ಷಣ ಪಡೆಯುವುದರ ಮೂಲಕ ಇಡೀ ಪ್ರಪಂಚದ ಆಗುಹೋಗು ತಿಳಿದುಕೊಳ್ಳಲು ಸಾಧ್ಯವಾಗುತ್ತಿದ್ದು, ಆಗ ನಮ್ಮ ಜೀವನ ಎತ್ತರಕ್ಕೆ ಹೋಗಲು ಸಾಧ್ಯ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಿದರಿ, ಮಂಜುನಾಥ ಘಂಟಿ, ಡಾ. ಪ್ರಕಾಶ ಹೊಸಮನಿ, ನಾಗರಾಜ ಲಕ್ಕುಂಡಿ, ಪ್ರಕಾಶ ಕರಿ, ಎಂ.ಕೆ.ಲಮಾಣಿ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಎನ್.ವೈ. ಕರಿಗಾರ, ಬಸವರಾಜ ತುಳಿ, ಈರಯ್ಯ ಮಠಪತಿ, ವೀರೇಂದ್ರ ಪಾಟೀಲ ಮಾತನಾಡಿದರು.