ನರಗುಂದ: ನರಗುಂದ ಕ್ಷೇತ್ರ ಹಾಗೂ ಬೆಣ್ಣೆ ಹಳ್ಳದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ಆದರೆ ಶಾಸಕರು ನಾನು ಗುತ್ತಿಗೆದಾರರಿಂದ ಹಣ ಪಡೆದಿದ್ದೇನೆ ಎಂದು ಆರೋಪ ಮಾಡಿದ್ದು, ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ಹೇಳಿದರು.
ನಾನು ಈ ಕ್ಷೇತ್ರದಲ್ಲಿ ರಾಜಕೀಯಕ್ಕೆ ಬಂದು 40 ವರ್ಷವಾಯಿತು. ನನ್ನ ಅಧಿಕಾರಾವಧಿಯಲ್ಲಿ ಎಂಜಿನೀಯರಿಂಗ್, ಡಿಪ್ಲೋಮಾ ಕಾಲೇಜು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಮಲಪ್ರಭಾ ಕಾಲುವೆ ಪುನಶ್ಚೇತನ, ಜಲಾಶಯದಿಂದ ಕುಡಿವ ನೀರಿನ ಯೋಜನೆಗೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ ತೃಪ್ತಿ ನನಗಿದೆ. ನನ್ನ ಅಭಿವೃದ್ಧಿ ಸಹಿಸದೆ ಪಾಟೀಲರು ಈ ರೀತಿಯ ಕೀಳು ಮಟ್ಟದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿ ಹೆಸರಲ್ಲಿ ₹ 500 ಕೋಟಿ ಹಣ ಬಿಡುಗಡೆ ಮಾಡಿ ವಿವಿಧ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ ಅದರಲ್ಲಿ ಎಷ್ಟು ಪರ್ಸೆಂಟ್ ಹಣ ಪಡೆದುಕೊಂಡಿದ್ದಾರೆ ಎಂಬುದು ನಮಗೂ ಗೊತ್ತು ಎಂದರು.ಕ್ಷೇತ್ರದಲ್ಲಿ ನನ್ನ ಜತೆಗಿದ್ದ ಎಲ್.ಎಸ್. ಪಾಟೀಲರನ್ನು ಪುರಸಭೆ ಅಧ್ಯಕ್ಷರನ್ನಾಗಿ, ಟಿಎಪಿಸಿಎಂಸಿ ಸದಸ್ಯರನ್ನಾಗಿ ಮಾಡಿ ರಾಜಕೀಯವಾಗಿ ಬೆಳೆಸಿದ್ದೇನೆ.ಇವರು ಮಾಜಿ ಶಾಸಕ ಎಸ್.ಎಫ್. ಪಾಟೀಲರ ಕುಟುಂಬಕ್ಕೆ ಏನು ಮಾಡಿದ್ದಾರೆಂದು ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಗುರುಪಾದಪ್ಪ ಕುರಹಟ್ಟಿ, ರಾಜು ಕಲಾಲ, ಪ್ರವೀಣ ಯಾವಗಲ್, ನೀಲಪ್ಪ ಗುಡದನ್ನವರ, ಎಂ.ಎಸ್. ಪಾಟೀಲ, ಮಾನೆ, ರವಿ ಯರಗಟ್ಟಿ, ಎಂ.ಬಿ. ಅರಹುಣಸಿ, ಜಗದೀಶ ಕಗದಾಳ, ಮಲ್ಲೇಶ ಅಬ್ಬಗೇರಿ, ವಿಷ್ಣು ಸಾಠೆ, ಪ್ರಕಾಶ ಹಡಗಲಿ ಸೇರಿದಂತೆ ಇತರರು ಇದ್ದರು.