ದಲಿತರು ಶೈಕ್ಷಣಿಕ, ರಾಜಕೀಯವಾಗಿ ಬಲಗೊಳ್ಳವುದು ಅಗತ್ಯ

KannadaprabhaNewsNetwork |  
Published : Dec 07, 2024, 12:33 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗ: ದಲಿತರು ಶೈಕ್ಷಣಿಕವಾಗಿ, ರಾಜಕೀಯವಾಗಿ ಬಲಗೊಳ್ಳುವುದು ಅಗತ್ಯ ಎಂದು ಕಾಂಗ್ರೆಸ್ ಮುಖಂಡ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ ಹೇಳಿದರು.

ಚಿತ್ರದುರ್ಗ: ದಲಿತರು ಶೈಕ್ಷಣಿಕವಾಗಿ, ರಾಜಕೀಯವಾಗಿ ಬಲಗೊಳ್ಳುವುದು ಅಗತ್ಯ ಎಂದು ಕಾಂಗ್ರೆಸ್ ಮುಖಂಡ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ ಹೇಳಿದರು.ಕರ್ನಾಟಕ ರಾಜ್ಯ ಮಾದಿಗ ಯುವಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕಣಿವೆಮಾರಮ್ಮ ಸಂಘ, ಸ್ಲಂ ಜನಾಂದೋಲನ-ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ರವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯ ಎಂದರು. ಚಿಕ್ಕಂದಿನಲ್ಲಿಯೇ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ಅಂಬೇಡ್ಕರ್ ಎಲ್ಲಾ ಜಾತಿ ಧರ್ಮದವರಿಗೂ ಸಂವಿಧಾನದಲ್ಲಿ ಸಮಾನತೆ ನೀಡಿದ್ದಾರೆ. ಪ್ರಜಾಪ್ರಭುತ್ವದಡಿ ಮತದಾನದ ಹಕ್ಕು ಎಲ್ಲರಿಗೂ ಸಿಕ್ಕಿದೆ ಎಂದರೆ ಅದಕ್ಕೆ ಅಂಬೇಡ್ಕರ್ ಕೊಟ್ಟಿರುವ ಕೊಡುಗೆ ಕಾರಣ. ಚುನಾವಣೆಯಲ್ಲಿ ಕೇವಲ ಹಣ, ಹೆಂಡಕ್ಕೆ ಅಮೂಲ್ಯವಾದ ಮತಗಳನ್ನು ಮಾರಿಕೊಳ್ಳದೆ ಯೋಗ್ಯರಿಗೆ ಮತ ನೀಡುವ ವಾತಾವರಣ ಸೃಷ್ಟಿಯಾಗಬೇಕು ಎಂದರು. ಒಂದು ಕಾಲದಲ್ಲಿ ದಲಿತರಿಗೆ ಶಕ್ತಿಯಿತ್ತು. ಗುಡುಗಿದರೆ ವಿಧಾನಸೌಧ ನಡುಗುತ್ತಿತ್ತು. ಈಗ ದಲಿತರಲ್ಲಿ ಒಗ್ಗಟ್ಟಿಲ್ಲದಂತಾಗಿದೆ. ಒಬ್ಬರು ಬೆಳೆದರೆ ಮತ್ತೊಬ್ಬರು ಸಹಿಸುವುದಿಲ್ಲ. ದಲಿತರ ಮೇಲೆ ಎಲ್ಲಿಯಾದರೂ ದೌರ್ಜನ್ಯ, ದಬ್ಬಾಳಿಕೆಯಾದರೆ ದಲಿತರು ಹೋರಾಟಕ್ಕೆ ಇಳಿಯಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಬಹುಸಂಖ್ಯಾತರಿದ್ದರೂ, ಕಡಿಮೆ ಸಂಖ್ಯೆಯಲ್ಲಿರುವವರಿಗೆ ಅಧಿಕಾರ ಕೊಟ್ಟು ಕೈಕಟ್ಟಿಕೊಂಡು ನಿಲ್ಲುವಂತಾಗಿದೆ. ಮಲಗಿರುವ ದಲಿತರನ್ನು ಎಚ್ಚರಿಸಬೇಕಿದೆ ಎಂದು ಹೇಳಿದರು. ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕಷ್ಟ-ನೋವು, ಹಿಂಸೆ, ಅವಮಾನ ಅನುಭವಿಸಿ ದೇಶಕ್ಕೆ ಬಲಿಷ್ಠವಾದ ಸಂವಿಧಾನವನ್ನು ನೀಡಿದ್ದಾರೆ. ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಪಾಲಿಸಿ ಅವರ ನೆರಳಿನಲ್ಲಿ ಬದುಕಬೇಕು ಎಂದು ಕರೆ ನೀಡಿದರು.

ಅಂಬೇಡ್ಕರ್ ರವರ ಸಂವಿಧಾನವನ್ನು ಎಲ್ಲರೂ ಓದಬೇಕು. ಎಲ್ಲಾ ಜಾತಿ ವರ್ಗದವರು ಇಂದು ಸಮಾನವಾಗಿ ಬದುಕುತ್ತಿದ್ದಾರೆಂದು ಅಂಬೇಡ್ಕರ್ ಕಾರಣ ಎಂದು ಸ್ಮರಿಸಿದರು. ದಲಿತ ಮುಖಂಡ ಬಿ.ರಾಜಣ್ಣ ಮಾತನಾಡಿ, ಅಂಬೇಡ್ಕರ್ ರವರು ದೇಶಕ್ಕೆ ಕೊಡುಗೆಯಾಗಿ ಕೊಟ್ಟಿರುವ ಸಂವಿಧಾನದಿಂದಾಗಿ ದಲಿತರು ತಲೆ ಎತ್ತಿಕೊಂಡು ಓಡಾಡುವಂತಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನಿಯಾಗಿ ಬದುಕುವ ಶಕ್ತಿ ನೀಡಿದ್ದಾರೆ ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಹಾಂತೇಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತು ವರ್ಷಗಳಾಗಿದ್ದರೂ, ಅಸ್ಪೃಶ್ಯತೆ ಇನ್ನು ನಿಂತಿಲ್ಲ. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ, ಬಹಿಷ್ಕಾರಗಳು ನಡೆಯುತ್ತಿದೆ. ಸುಪ್ರೀಂಕೋರ್ಟ್ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ಕನ್ನಡ ವಿಕಾಸ ರತ್ನ ಪ್ರಶಸ್ತಿ ಪುರಸ್ಕೃತ ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಎಚ್.ಪ್ಯಾರೆಜಾನ್‍ಗೆ ಅಂಬೇಡ್ಕರ್ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮಲ್ಲಣ್ಣ, ಸ್ಲಂ ಜನಾಂದೋಲನದ ಮಂಜಣ್ಣ, ಕೆ.ರಾಜಣ್ಣ ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!
ಬಂಗಾಳಕ್ಕೆ ದೀದಿ, ತಮಿಳ್ನಾಡಿಗೆ ಅಣ್ಣಾ, ಅಸ್ಸಾಂಗೆ ಮಾಮಾ, ಕೇರಳಕ್ಕೆ ದಾದಾ!