ಕನ್ನಡಪ್ರಭ ವಾರ್ತೆ ಭದ್ರಾವತಿ
ಈ ಬಾರಿ ನಗರಸಭೆಯ ಸ್ವಂತ ಆದಾಯಗಳಾದ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ಇತರೆ ಆದಾಯ ಹಾಗೂ ಸರ್ಕಾರದ ಅನುದಾನಗಳು ಸೇರಿ ಒಟ್ಟು 7,885.10 ಲಕ್ಷ ಆದಾಯದ ನಿರೀಕ್ಷೆಯೊಂದಿಗೆ ಆಯವ್ಯಯ ಸಿದ್ಧಪಡಿಸಲಾಗುತ್ತಿದೆ ಎಂದು ಸಭೆಯಲ್ಲಿ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ತಿಳಿಸಿದರು.
ಗುಣಮಟ್ಟದ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ನಾಗರೀಕರಿಗೆ ಮೂಲ ಸೌಕರ್ಯಗಳನ್ನು ಓದಗಿಸುವ ನಿಟ್ಟಿನಲ್ಲಿ ಆಯವ್ಯಯ ಸಿದ್ದಪಡಿಸಲಾಗುತ್ತಿದೆ. 2024-25 ನೇ ಸಾಲಿನಲ್ಲಿ ಆರಂಭವಾದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಈ ಬಾರಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನೀರಿನ ಶುಲ್ಕ ಹೆಚ್ಚಿಸುವ ಮೂಲಕ ಆದಾಯದ ಮೂಲ ಸಹ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಎಂದರು.ನಗರದ ಬಿ.ಎಚ್ ರಸ್ತೆ ಹಾಗು ಬಸವೇಶ್ವರ ವೃತ್ತದಲ್ಲಿ ಫುಡ್ ಕೋರ್ಟ್ ನಿರ್ಮಾಣ, ಸೈಕಲ್ ಸ್ಟ್ಯಾಂಡ್ ನಿರ್ಮಾಣ, ನ್ಯೂಟೌನ್ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ, ಹಾಳಾದ ರಸ್ತೆ ಸರಿಪಡಿಸುವುದು, ತೆರಿಗೆ ಪಾವತಿಸಲು ಕೌಂಟರ್ ತೆರೆಯುವುದು, ಬೀದಿ ದೀಪಗಳ ಅಳವಡಿಕೆ, ನೀರಿನ ಸಮರ್ಪಕ ಪೂರೈಕೆ ಸೇರಿದಂತೆ ಹಲವಾರು ಯೋಜನೆಗಳಿಗೆ ಕ್ರಮವಹಿಸಲಾಗಿದೆ ಎಂದರು.
ಜನ್ನಾಪುರ -ಹುತ್ತಾ ತೆರಿಗೆದಾರರ ಸಂಘದ ಕಾರ್ಯದರ್ಶಿ ಚಂದ್ರಪ್ಪ ಮಾತನಾಡಿ, ರಸ್ತೆ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ರಸ್ತೆಯಲ್ಲಿ ಗುಂಡಿ ತೆಗೆದು ಹಲವು ತಿಂಗಳಿನಿಂದ ಕಾಮಗಾರಿ ಮುಂದುವರೆಸಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಗುತ್ತಿಗೆದಾರನಿಗೆ ಕೇಳಿದರೆ ಬಿಲ್ ಆಗಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ರಸ್ತೆ ಕಾಮಗಾರಿ ಆರಂಭಿಸಿದ್ದು ಏಕೆ? ಎಂದು ಪ್ರಶ್ನಿಸಿ ಕಾಮಗಾರಿ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಬೇಡ. ಎಂದರು.
ಈ ವ್ಯಾಪ್ತಿಯಲ್ಲಿ ಕೇವಲ 1 ಸಿಸಿ ಕ್ಯಾಮರ ಹೊರತುಪಡಿಸಿ ಇದುವರೆಗೂ ಯಾವುದೇ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಮಹಿಳಾ ನೌಕರರು ಕರ್ತವ್ಯ ಮುಗಿಸಿ ಈ ರಸ್ತೆಯಲ್ಲಿ ಮನೆಗೆ ತೆರಳುವುದೇ ಕಷ್ಟವಾಗಿದೆ. ವಿಮಾನ ನಿಲ್ದಾಣ ನಿರ್ಮಾಣದ ನಂತರ ವಿದೇಶಿ ವ್ಯಾಪಾರಸ್ಥರು ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ, ವಿ. ವಿನೋದ್, ತೀರ್ಥೇಶ, ಬಸವರಾಜಯ್ಯ, ಎಲ್.ವಿ ರುದ್ರಪ್ಪ, ಚಂದ್ರಪ್ಪ ಅಮೀರ್ ಜಾನ್, ಜಹೀರ್ ಜಾನ್ ಹಾಗೂ ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಬಸವರಾಜ ಬಿ. ಆನೇಕೊಪ್ಪ, ಸವಿತಾ ಉಮೇಶ್, ಲತಾ ಚಂದ್ರಶೇಖರ್ ಹಳೇನಗರ ಮನೆ ಮಾಲೀಕರ ಸಂಘದ ಬಸವರಾಜಯ್ಯ ಸೇರಿ ಸಭೆಯಲ್ಲಿ ಇತರರು ಪಾಲ್ಗೊಂಡಿದ್ದರು.