ಕಿಡ್ನಿ ಸಣ್ಣದಿದ್ದರೆ ಸೇನಾ ಉದ್ಯೋಗವಿಲ್ಲ: ಕೋರ್ಟ್‌

KannadaprabhaNewsNetwork |  
Published : Nov 13, 2026, 03:45 AM IST
000 | Kannada Prabha

ಸಾರಾಂಶ

ಭಾರತೀಯ ಸೇನಾ ನೇಮಕಾತಿಯ ಮೆರಿಟ್‌ ಪಟ್ಟಿಯಲ್ಲಿ 51ನೇ ಸ್ಥಾನ ಪಡೆದಿದ್ದರೂ ಎಡ ಮೂತ್ರಪಿಂಡದ ಗಾತ್ರ ನಿಗದಿತ ವೈದ್ಯಕೀಯ ಮಾನದಂಡಕ್ಕಿಂತ ಚಿಕ್ಕದಿರುವ ಕಾರಣ ನೇಮಕಾತಿಯಿಂದ ಅನರ್ಹಗೊಂಡಿದ್ದ 25 ವರ್ಷದ ಅಭ್ಯರ್ಥಿಗೆ ಮರು ಪರೀಕ್ಷೆಯ ಅವಕಾಶ ಕಲ್ಪಿಸಲು ಹೈಕೋರ್ಟ್‌ ನಿರಾಕರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತೀಯ ಸೇನಾ ನೇಮಕಾತಿಯ ಮೆರಿಟ್‌ ಪಟ್ಟಿಯಲ್ಲಿ 51ನೇ ಸ್ಥಾನ ಪಡೆದಿದ್ದರೂ ಎಡ ಮೂತ್ರಪಿಂಡದ ಗಾತ್ರ ನಿಗದಿತ ವೈದ್ಯಕೀಯ ಮಾನದಂಡಕ್ಕಿಂತ ಚಿಕ್ಕದಿರುವ ಕಾರಣ ನೇಮಕಾತಿಯಿಂದ ಅನರ್ಹಗೊಂಡಿದ್ದ 25 ವರ್ಷದ ಅಭ್ಯರ್ಥಿಗೆ ಮರು ಪರೀಕ್ಷೆಯ ಅವಕಾಶ ಕಲ್ಪಿಸಲು ಹೈಕೋರ್ಟ್‌ ನಿರಾಕರಿಸಿದೆ.

ಮರುಪರಿಶೀಲನಾ ವೈದ್ಯಕೀಯ ಮಂಡಳಿ (ಆರ್‌ಎಂಬಿ) ರಚಿಸಿ ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ದೇಶಿಸುವಂತೆ ಕೋರಿದ್ದ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೈಸೂರಿನ ಮೋನಿಶ್‌ ಎನ್‌. ಆರಾಧ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.

ಸಶಸ್ತ್ರ ಪಡೆಗಳ ಪ್ರವೇಶ ವೈದ್ಯಕೀಯ ಮಾನದಂಡಗಳಲ್ಲಿ, ಒಂದು ಅಥವಾ ಎರಡೂ ಮೂತ್ರಪಿಂಡಗಳು ಅಪೂರ್ಣ ಬೆಳವಣಿಗೆಯಿಂದ ಅಥವಾ ಕುಗ್ಗುವಿಕೆಯಿಂದ 8 ಸೆಂ.ಮೀ.ಗಿಂತ ಚಿಕ್ಕದಿದ್ದರೆ ನೇಮಕಾತಿಯಿಂದ ಅನರ್ಹತೆಗೆ ಕಾರಣವಾಗುತ್ತದೆ. 2008ರ ಜೂ.3ರ ಮಾರ್ಗಸೂಚಿಗಳೂ ಅದನ್ನೇ ಹೇಳುತ್ತವೆ. ಬೇರೆ ವೈದ್ಯಕೀಯ ವರದಿ ಸಲ್ಲಿಸಿದ ಪ್ರತಿಯೊಂದು ಪ್ರಕರಣವನ್ನೂ ಮರುಪರಿಶೀಲನಾ ಮಂಡಳಿಗೆ ಕಳುಹಿಸಬೇಕೆಂಬ ನಿಯಮವಿಲ್ಲ. ಮರುಪರಿಶೀಲನಾ ವೈದ್ಯಕೀಯ ಮಂಡಳಿಯ ಪರೀಕ್ಷೆ ಅಭ್ಯರ್ಥಿಯ ಹಕ್ಕಲ್ಲ. ಪ್ರಕರಣದ ಅರ್ಹತೆ ಆಧರಿಸಿದ ವಿವೇಚನಾತ್ಮಕ ನಿರ್ಧಾರ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣ ಏನು?: ಆರಾಧ್ಯ ಅವರು ಸೇನಾ ನೇಮಕಾತಿಯ ಮೆರಿಟ್‌ ಪಟ್ಟಿಯಲ್ಲಿ 51ನೇ ಸ್ಥಾನ ಪಡೆದಿದ್ದರು. ವಿಶೇಷ ವೈದ್ಯಕೀಯ ಮಂಡಳಿಯು ಎಡ ಮೂತ್ರಪಿಂಡದ ಸಣ್ಣ ಗಾತ್ರ, ಪ್ಲೇಟ್‌ಲೆಟ್‌ಗಳ ಕೊರತೆ ಹಾಗೂ ಎಡಭಾಗದ ಕುತ್ತಿಗೆಯಲ್ಲಿ ಹೆಚ್ಚುವರಿ ಪಕ್ಕೆಲುಬು ಇರುವಿಕೆ ಎಂಬ ಮೂರು ಕಾರಣಗಳಿಂದ ಅವರನ್ನು ನೇಮಕಾತಿಯಿಂದ ಅನರ್ಹರೆಂದು ಘೋಷಿಸಿತ್ತು. ಇದರಿಂದ ಆರಾಧ್ಯ ಮರುಪರಿಶೀಲನಾ ಮಂಡಳಿಗೆ ತಮ್ಮ ಪ್ರಕರಣ ಒಪ್ಪಿಸುವಂತೆ ಕೋರಿದ್ದರು. ಆ ಮನವಿಯನ್ನು ಸಕ್ಷಮ ಪ್ರಾಧಿಕಾರ ತಿರಸ್ಕರಿಸಿದ್ದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಏಕಸದಸ್ಯ ಪೀಠವು ಆ ಅರ್ಜಿಯನ್ನು ವಜಾಗೊಳಿಸಿ ಸೆ.17ರಂದು ಆದೇಶಿಸಿತ್ತು.

ಇದರಿಂದ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದ ಆರಾಧ್ಯ, ಮಣಿಪಾಲ್‌ ಆಸ್ಪತ್ರೆಯ ಅಲ್ಟ್ರಾಸೌಂಡ್‌ ವರದಿಯಲ್ಲಿ ನನ್ನ ಎಡ ಮೂತ್ರಪಿಂಡದ ಗಾತ್ರ 7.7ರಿಂದ 8 ಸೆಂ.ಮೀ. ಎಂದು ಹೇಳಿದೆ. ಈ ವರದಿ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡಲು ಮರುಪರಿಶೀಲನಾ ಮಂಡಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಆದರೆ, ಮೇಲ್ಮನವಿ ವೈದ್ಯಕೀಯ ಮಂಡಳಿ ನಡೆಸಿದ್ದ ಟ್ರಿಪಲ್‌ ಫೇಸ್‌ ಸಿಇಸಿಟಿ ಸ್ಕ್ಯಾನ್‌ನಲ್ಲಿ ಎಡ ಮೂತ್ರಪಿಂಡದ ಗಾತ್ರ 7 ಸೆಂ.ಮೀ. ಎಂದು ಕಂಡು ಬಂದಿತ್ತು. ಅಲ್ಟ್ರಾಸೌಂಡ್‌ಗಿಂತ ಈ ಪರೀಕ್ಷೆ ಹೆಚ್ಚು ನಿಖರವಾಗಿದೆ ಎಂದು ವಿಭಾಗೀಯ ಪೀಠ ತಿಳಿಸಿ, ಆರಾಧ್ಯ ಮೇಲ್ಮನವಿಯನ್ನು ವಜಾಗೊಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌