ಕನ್ನಡಪ್ರಭ ವಾರ್ತೆ ತಿಪಟೂರು
ಅವರು ನಗರದ ನೇತಾಜಿ ಯೋಗ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಯೋಗಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಆರೋಗ್ಯ ಪರಿಹಾರಕ್ಕಾಗಿ ಇಡೀ ವಿಶ್ವ ಭಾರತದೆಡೆಗೆ ನೋಡುತ್ತಿರುವ ಸಂದರ್ಭದಲ್ಲಿ ಯೋಗವೇ ನಮಗೆ ಮಾರ್ಗದರ್ಶಕ ದಾರಿದೀಪವಾಗಿದೆ. ಪ್ರತಿದಿನ ಯೋಗಕ್ಕಾಗಿ ಒಂದು ಗಂಟೆ ಮೀಸಲಿಟ್ಟರೆ ದಿನವಿಡೀ ಲವಲವಿಕೆಯಿಂದ ಇರಬಹುದಾಗಿದೆ. ಖಾಯಿಲೆಗಳು ಬಾರದಂತೆ ನೋಡಿಕೊಳ್ಳಬಹುದು. ಇಂದು ರಾಸಾಯನಿಕ ಯುಕ್ತ ಆಹಾರ, ಪರಿಸರ ಮಾಲಿನ್ಯಗಳಿಂದಾಗಿ ನಗರ, ಗ್ರಾಮೀಣ ಎಂಬ ವರ್ಗೀಕರಣವಿಲ್ಲದೆ ಎಲ್ಲ ಜನರಲ್ಲೂ ಉತ್ತಮ ಬದುಕು ಒಂದಲ್ಲ ಒಂದು ರೀತಿಯ ತೊಂದೆಯಲ್ಲಿದೆ. ಯೋಗ, ಪ್ರಾಣಾಯಾಮ, ಧ್ಯಾನ, ಸತ್ಸಂಗ ಮನುಷ್ಯನ ನೆಮ್ಮದಿಯ ಬದುಕಿಗೆ ದಾರಿದೀಪಗಳಾಗಿವೆ. ಪತಂಜಲಿ ಮಹರ್ಷಿಗಳಿಂದ ಆರಂಭವಾದ ಯೋಗ ಇಂದು ವಿಶ್ವದಾದ್ಯಂತ ಪ್ರಚುರಗೊಂಡು ಸಭ್ಯ ನಾಗರಿಕ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಎಂ. ರಾಜಣ್ಣ ಟ್ರಸ್ಟ್ ಯೋಗ ತರಬೇತಿ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಜನಮನ್ನಣೆ ಪಡೆದಿದೆ. ಪ್ರತಿವರ್ಷ ಯೋಗಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯೋಗದತ್ತ ಒಲವು ತೋರುತ್ತಿದ್ದಾರೆ. ತಿಪಟೂರಿನ ಪತಂಜಲಿ ಯೋಗ ಶಿಕ್ಷಣ ಸಮಿತಿಯು ನಗರದ ಸರ್ಕಾರಿ ಐ.ಟಿ.ಐ. ಕಾಲೇಜಿನ ಹತ್ತಿರ ಸುಸಜ್ಜಿತ ಯೋಗ ಭವನ ನಿರ್ಮಿಸುತ್ತಿದ್ದು ಯೋಗ ಬಂಧುಗಳು, ನಾಗರಿಕರು ಹೆಚ್ಚಿನ ನೆರವು ನೀಡಬೇಕು. ಟ್ರಸ್ಟ್ ಎಲ್ಲ ಚಟುವಟಿಕೆಗಳಿಗೆ ನೇತಾಜಿ ಸಹಕಾರ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.ಯೋಗಗುರು ಕೆ.ಎನ್. ಕುಮಾರ್ ಯೋಗ ಜೀವನ ಕ್ರಮ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ತಿಪಟೂರು ತಾಲೂಕಿನಲ್ಲಿ ಸುಮಾರು ಇಪ್ಪತ್ತಾರಕ್ಕೂ ಹೆಚ್ಚು ಯೋಗಕೇಂದ್ರಗಳಲ್ಲಿ ಐದು ನೂರಕ್ಕೂ ಹೆಚ್ಚು ಯೋಗಾಭ್ಯಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು. ನಗರದ ಸಿದ್ದೇಶ್ವರ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಸಂತೋಷ್ ಆರೋಗ್ಯ ಮತ್ತು ಆಧುನಿಕ ಜೀವನ ಶೈಲಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಹೆಚ್ಚಿನ ಖಾಯಿಲೆಗಳು ಬಾರದಂತೆ ಅಥವಾ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ. ಮಕ್ಕಳಿಗೆ ಪೋಷಕರೇ ಮಾದರಿಯಾಗಬೇಕಿದೆ. ಯೋಗ ಎಂದರೆ ಕೇವಲ ಆಸನಗಳನ್ನು ಹಾಕುವುದಲ್ಲ, ದೇಹ, ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗ, ಧ್ಯಾನ, ಪ್ರಾಣಾಯಾಮ ಸಹಕಾರಿಯಾಗುತ್ತವೆ ಎಂದರು. ಶಿಬಿರಾರ್ಥಿಗಳಾದ ಮಲ್ಲೇಶಪ್ಪ ಮಾತನಾಡಿ ಸೋಮಾರಿಗಳಾಗಿ ಕಾಲಹರಣ ಮಾಡುತ್ತಿದ್ದ ನಾವು ಯೋಗಾಭ್ಯಾಸದಿಂದಾಗಿ ಆರೋಗ್ಯಯುತ ಜೀವನ ನಡೆಸುವಂತಾಗಿದೆ. ಯೋಗಗುರುಗಳಾದ ನೇತ್ರಾವತಿ, ಸುಜಾತ, ಜಗದೀಶ್ ಅತ್ಯುತ್ತಮವಾಗಿ ಯೋಗ ಕಲಿಸಿದ್ದಾರೆ, ಮುಂದೆ ನಿರಂತರವಾಗಿ ಅಭ್ಯಾಸ ಮುಂದುವರೆಸುತ್ತೇವೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನೇತಾಜಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶಶಿಶೇಖರ್ ಮಾತನಾಡಿ ನಮ್ಮ ಸಂಘ ಮತ್ತು ಯೋಗಟ್ರಸ್ಟ್ ಜೊತೆಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ಯೋಗಾಭ್ಯಾಸಿಗಳು ಪಾಲ್ಗೊಂಡು ಉತ್ತಮ ದೈಹಿಕ, ಮಾನಸಿಕ ಆರೋಗ್ಯ, ಕಾಪಾಡಿಕೊಂಡು ದೈನಂದಿನ ಜೀವನದ ಒತ್ತಡಗಳನ್ನು ಸಮಚಿತ್ತದಿಂದ ಪರಿಹರಿಸಿಕೊಳ್ಳುತ್ತಿರುವುದು ನಮಗೆಲ್ಲಾ ಮಾದರಿಯಾಗಿದೆ. ಟ್ರಸ್ಟ್ನ ಎಲ್ಲ ಚಟುವಟಿಕೆಗಳಿಗೆ ನಮ್ಮ ಪ್ರೋತ್ಸಾಹ, ಬೆಂಬಲ ನಿರಂತರವಾಗಿರುತ್ತದೆ ಎಂದರು. ನಂದೀಶಪ್ಪನವರ, ಜ್ಯೋತಿಗಣೇಶ್, ಇದ್ದರು. ಯೋಗಪಟುಗಳಿಂದ ಆಕರ್ಷಕ ಯೋಗಪ್ರದರ್ಶನ, ಯೋಗ ನೃತ್ಯ , ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನಸೂರೆಗೊಂಡವು.