ರಾಜ್ಯದ ಬರಗಾಲಕ್ಕೆ ಕೇಂದ್ರ ಸರ್ಕಾರದ ನೆರವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Apr 20, 2024, 01:03 AM ISTUpdated : Apr 20, 2024, 01:04 AM IST
ಪಟ್ಟಣದ ಹೇಮಾವತಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಹಿಂದೆಂದೂ ಕಾಣದ ಬರಗಾಲಕ್ಕೆ ತುತ್ತಾಗಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಹೊಳೆನರಸೀಪುರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪರ ಪ್ರಚಾರ ಸಭೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಕರ್ನಾಟಕ ರಾಜ್ಯ ಹಿಂದೆಂದೂ ಕಾಣದ ಬರಗಾಲಕ್ಕೆ ತುತ್ತಾಗಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಪಟ್ಟಣದ ಹೇಮಾವತಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ‘ಮಳೆ ಬಂದು ರೈತ ಬಿತ್ತನೆ ಮಾಡಿ ಬೆಳೆ ತೆಗೆದರೆ ಅದಕ್ಕಿಂತ ದೊಡ್ಡ ಸಾಧನೆ ನಮ್ಮ ಸರ್ಕಾರಕ್ಕೆ ಬೇರೊಂದಿಲ್ಲ, ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ನೂರಕ್ಕೆ ನೂರು ಗೆಲುವು ಸಾಧಿಸುವುದು ಸತ್ಯ, ಹಳ್ಳಿಮೈಸೂರು ಹೋಬಳಿಯವರು ಬಹಳ ಅಭಿಮಾನ ಪ್ರೀತಿಯಿಂದ ಕಂಡಿದ್ದೀರಿ. ಮೋದಿಯವರ ಹತ್ತು ವರ್ಷಗಳ ಸರ್ಕಾರ ಯಾವುದೇ ಭರವಸೆ ಈಡೇರಿಸಿಲ್ಲ. ನಮ್ಮ ಸರ್ಕಾರದ ಐದು ಗ್ಯಾರಂಟಿಗಳು ಜನರನ್ನು ತಲುಪಿವೆ. ನಮ್ಮ ಗ್ಯಾರಂಟಿ ಅಲೆ ಇಡೀ ರಾಜ್ಯದಲ್ಲಿ ಕಾಣಲು ಸಾಧ್ಯ. ಆದರೆ ಮೋದಿ ಅಲೆ ಎಲ್ಲೂ ಇಲ್ಲ’ ಎಂದು ಮೂದಲಿಸಿದರು.

‘ಜಾತಿ ಗಣತಿ ಮಾಡಿ ಬಡತನ ರೇಖೆಗಿಂತ ಕೆಳಗಿನವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಹೊಳೆನರಸೀಪುರ ಕ್ಷೇತ್ರದಲ್ಲಿ ಕನಿಷ್ಠ 25000 ಲೀಡ್ ಬರಬೇಕು. ನೀವು ಅಷ್ಟು ಕೊಟ್ಟರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾನೆ, ಜೆಡಿಎಸ್ ಅಭ್ಯರ್ಥಿ ಸೋಲ್ತಾನೆ, ಜೆಡಿಎಸ್ ಬಿಜೆಪಿ ಜೊತೆ ಸೇರಿ ಕೋಮುವಾದಿ ಆಗಿದ್ದಾರೆ. ಈ ರಾಜ್ಯದ ಜನರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲು ಆಗುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನಿಂದ ತಪ್ಪಾಯ್ತು. ಆದ ಕಾರಣ ಆ ತಪ್ಪನ್ನು ಸರಿ ಮಾಡಲು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಬಂದಿದ್ದೇನೆ.ಈ ಬಾರಿ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕು’ ಎಂದು ಕೋರಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಹೊಳೆನರಸೀಪುರ ಕ್ಷೇತ್ರದ ಮಹಾಜನತೆ ಪುಟ್ಟಸ್ವಾಮಿಗೌಡ, ಶ್ರೀಕಂಠಯ್ಯ ಆದ ಮೇಲೆ ಯಾರನ್ನೂ ಲೋಕಸಭೆಗೆ ಕಳಿಸಿಲ್ಲ, ನೀವೆಲ್ಲ ಸೇರಿ ಒಂದು ಇತಿಹಾಸ ಸೃಷ್ಟಿ ಮಾಡಬೇಕು. ಹಾಸನ ಜಿಲ್ಲೆಯ ಫಲಿತಾಂಶವನ್ನು ಇಡೀ ರಾಷ್ಟ್ರ ಹಾಗೂ ರಾಜ್ಯ ನೋಡುತ್ತಿದೆ’ ಎಂದು ಹೇಳಿದರು.

‘ಹೊಳೆನರಸೀಪುರದಲ್ಲಿ ರೇವಣ್ಣನ ದುರಾಡಳಿತ ಕೊನೆ ಮಾಡಬೇಕು. ಜನತಾ ತೀರ್ಪಿನ ಮುಂದೆ ಯಾವುದೂ ನಡೆಯೋಲ್ಲ, ಹೊಳೆನರಸೀಪುರ ಕ್ಷೇತ್ರದ ಜನತೆ ಜೊತೆ ನಾವಿದ್ದೇವೆ. ದುರಾಢಳಿತಕ್ಕೆ ಮುಕ್ತಿ ಕೊಡಲು ಇಲ್ಲಿ ಬಂದಿದ್ದೇವೆ. ಗೌಡ್ರ ಕುಟುಂಬಕ್ಕೆ ಸಹಾಯ ಮಾಡಿದ್ದೀರಿ. ಇಲ್ಲಿ ಕಾರ್ಯಕರ್ತರು ಯಾರೂ ಇರಲಿಲ್ವ ಕರ್ನಾಟಕ ರಾಜ್ಯದ ಮಹಾಜನತೆ ನಿಮ್ಮ ತೀರ್ಪಿಗೆ ಕಾಯ್ತಾ ಇದ್ದಾರೆ. ಬಿಜೆಪಿ, ಜೆಡಿಎಸ್ ಇಬ್ಬರೂ ಒಂದಾಗಿದ್ದಾರೆ. ಮೋದಿಯವರು ಹತ್ತು ವರ್ಷಗಳ ಹಿಂದೆ ನೀಡಿದ ಮಾತುಗಳನ್ನು ಉಳಿಸಿಕೊಂಡಿಲ್ಲ. ನಿಮ್ಮ ಕೈಗಳಿಗೆ ಚೊಂಬು ನೀಡಿದ್ದಾರೆ. ಕೊಟ್ಟ ಮಾತು ಉಳಿಸಿಕೊಂಡಿಲ್ಲ, ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಗ್ಯಾರಂಟಿ ಆಶ್ವಾಸನೆಯನ್ನು ಕಾರ್ಯರೂಪಕ್ಕೆ ತಂದಿದ್ದೀವಿ, ಅನ್ನಭಾಗ್ಯ ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ 2000 ರೂ ಹಣ ಮುಂತಾದ ಗ್ಯಾರಂಟಿ ನೀಡಿದ್ದೇವೆ. ಒಂದು ಲಕ್ಷ ರು.ವನ್ನು ಒಂದು ವರ್ಷಕ್ಕೆ ಕೊಡ್ತೇವೆ ಎಂದು ಹೇಳಿದ್ದೇವೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಶಾಸಕ ಶಿವಲಿಂಗೇಗೌಡ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಅನುಪಮಾ ಮಹೇಶ್, ಅಕ್ಷತಾ ಶ್ರೇಯಸ್ ಎಂ.ಪಟೇಲ್, ಶ್ರೀಧರಗೌಡ ಇದ್ದರು.

ಹೊಳೆನರಸೀಪುರದ ಹೇಮಾವತಿ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯನ್ನು ಉದ್ಘಾಟಿಸಿದರು. ಡಿ.ಕೆ.ಶಿವಕುಮಾರ್,.ರಾಜಣ್ಣ, ಅನುಪಮಾ ಮಹೇಶ್‌ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ