ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ : ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ

KannadaprabhaNewsNetwork | Updated : Sep 12 2024, 12:14 PM IST

ಸಾರಾಂಶ

ತಾವೂ ಮುಖ್ಯಮಂತ್ರಿ ಆಗಬೇಕು ಎಂದು ಕೆಲ ಹಿರಿಯ ಸಚಿವರು ಸೇರಿದಂತೆ ಏಳೆಂಟು ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಶನಿವಾರಸಂತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

 ಶನಿವಾರಸಂತೆ : ತಾವೂ ಮುಖ್ಯಮಂತ್ರಿ ಆಗಬೇಕು ಎಂದು ಕೆಲ ಹಿರಿಯ ಸಚಿವರು ಸೇರಿದಂತೆ ಏಳೆಂಟು ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಶನಿವಾರಸಂತೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಐದು ವರ್ಷ ಅವಧಿ ಪೂರೈಸುತ್ತಾರೆ ಅಂತಲೂ ಹೇಳುತ್ತಾರೆ. ನಾನು ಮುಖ್ಯಮಂತ್ರಿ ಆಗಬೇಕು ಅಂತಲೂ ಹೇಳಿಕೆ ನೀಡುತ್ತಾರೆ. ಆದರೆ ಆ ರೀತಿ ಮಾತನಾಡುವುದಕ್ಕೆ ಅರ್ಥವೇ ಇಲ್ಲ. ಹಾಗೆ ಮಾತನಾಡುವುದಕ್ಕೆ ಹೋಗಬಾರದು ಅಂತ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.

ಅವರೆಲ್ಲರೂ ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿರುವುದು 2028 ರ ಚುನಾವಣೆಗೆ,

ಆ ಚುನಾವಣೆಗೆ ನಾನೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮುಡಾ ವಿಚಾರದಲ್ಲಿ ಪ್ರಾಸಿಕ್ಯೂಷನ್ ಒಪ್ಪಿಗೆ ಹೈಕೋರ್ಟಿನಲ್ಲಿ ಇರುವ ವಿಚಾರ. ಈ ಬಗ್ಗೆ ಕೋರ್ಟ್ ತೀರ್ಪು ನೀಡುತ್ತದೆ. ಮುಡಾದಲ್ಲಿ ಆಗಿರುವ ಹಗರಣದಲ್ಲಿ ಮುಖ್ಯಮಂತ್ರಿ ಪಾತ್ರ ಇದೆಯೋ ಇಲ್ಲವೋ ಎನ್ನುವುದನ್ನು ಕೋರ್ಟ್ ಹೇಳಬೇಕು ಎಂದರು.

ರಾಮೇಶ್ವರ ಕೆಫೆಯಲ್ಲಿ ಸ್ಫೋಟ ನಡೆದ ದಿನವೇ ಬಿಜೆಪಿ ಕಚೇರಿ ಸ್ಫೋಟಿಸುವ ಸಂಚು ಇತ್ತೆಂದು ಎನ್ಐಎ ಹೇಳಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಇರಬಹುದೇನೋ, ಆ ಮಾಹಿತಿ ಅವರಿಗೆ ಇರುತ್ತದೆ ಅಲ್ಲವೇ ಎಂದರು.

ದೀಪಾವಳಿ ಬಳಿಕ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ ಎಂಬ ವಿಜಯೇಂದ್ರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಯಾಕೆ ಬೀಳುತ್ತೆ. ನಮ್ಮ ಸರ್ಕಾರಕ್ಕೆ ಬಹುಮತ ಇಲ್ವ, 136 ಶಾಸಕರು ನಮ್ಮ ಜೊತೆಗೆ ಇದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರಕ್ಕೆ ಸ್ವಂತ ಬೆಂಬಲ ಇಲ್ಲ. ಯಾವುದೋ ಪಕ್ಷಗಳನ್ನು ನಂಬಿಕೊಂಡು ರಾಜ್ಯಭಾರ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಮ್ಮ ಸರ್ಕಾರ ಸುಭದ್ರವಾಗಿ ಇರುತ್ತದೆ. ಕೇಂದ್ರ ಸರ್ಕಾರದ ಬಗ್ಗೆ ವಿಜಯೇಂದ್ರ ಮತ್ತು ಆರ್. ಅಶೋಕ್ ಯೋಚಿಸಲಿ. ರಾಜ್ಯ ಸರ್ಕಾರ ಬಿದ್ದು ಹೋಗುತ್ತದೆ ಅಂತ

ಬಿಜೆಪಿಯವರು ಕನಸು ಕಾಣುತ್ತಿದ್ದಾರೆ, ಕಾಣಲಿ ಬಿಡಿ. ಕನಸು ಕಾಣುವವರಿಗೆ ಬೇಡ ಎನ್ನಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಖ್ಯಮಂತ್ರಿ ಆದಂತೆ ಕನಸು ಕಾಣುತ್ತಿರಬಹುದು. ಬಿಜೆಪಿಯ ಇನ್ನು ಕೆಲವರು ಉಪಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ನಿಗಮ, ಮಂಡಳಿಗಳ ಸ್ಥಾನಮಾನ ಸಿಗುವ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆಯಾದರೆ ಕಾಂಗ್ರೆಸ್ ನ 40 ಶಾಸಕರು ಹೊರಹೋಗಲಿದ್ದಾರೆ. ಸರ್ಕಾರ ಬೀಳುತ್ತದೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಕಮಲ ಸಾಧ್ಯವೇ ಇಲ್ಲ. ಅವರ ಪಕ್ಷದಲ್ಲಿ ಇರುವ ಜಗಳಗಳನ್ನು ಸರಿಮಾಡಿಕೊಳ್ಳಲಿ. ಅಲ್ಲಿ ಆಂತರಿಕ ಕಿತ್ತಾಟಗಳು ತುಂಬಾ ಇವೆ ಅವುಗಳನ್ನು ಸರಿಮಾಡಿಕೊಳ್ಳಲಿ. 40 ಶಾಸಕರು ಬಿಡಿ, ನಾಲ್ಕು ಶಾಸಕರೂ ಹೊರ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಕ್ತಿ ಯೋಜನೆಯಡಿ ಈಗಾಗಲೇ 4500 ಹೆಚ್ಚುವರಿ ಬಸ್‌ ಖರೀದಿ ಮಾಡಿದ್ದೇವೆ. 9 ಸಾವಿರ ಸಿಬ್ಬಂದಿ ನೇಮಕವೂ ಆಗಲಿದೆ. ನಾಳೆ ಬೆಂಗಳೂರಿನಲ್ಲಿ 100 ಹೊಸ ಬಸ್‌ಗಳಿಗೆ ಚಾಲನೆ ನೀಡಲುಗುವುದು ಎಂದರು.

ಸಂಸ್ಥೆಯಿಂದ 14 ಸಾವಿರ ಮಂದಿ ನಿವೃತ್ತರಾಗುವ ಹಿನ್ನೆಲೆಯಲ್ಲಿ ನೂತನ ಸಿಬ್ಬಂದಿ ನೇಮಕವೂ ಆಗಲಿದೆ ಎಂದು ವಿವರಿಸಿದರು.

Share this article