ಹುಬ್ಬಳ್ಳಿ: ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶದಲ್ಲಿ ಮೀಸಲಾತಿ ಕುರಿತು ನೀಡಿರುವ ಹೇಳಿಕೆ ಅಪ್ರಬುದ್ಧತೆಯಿಂದ ಕೂಡಿದ್ದು ಇದನ್ನು ಖಂಡಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅವರು ಬುಧವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ಓಡಾಡುವುದು, ಆದರೆ ಮನಸ್ಸಿನಲ್ಲಿ ವಿರೋಧಿ ಮನಸ್ಥಿತಿ ಹೊಂದಿರುವುದು ಈಗ ಹೊರ ಬಂದಿದೆ. ಕಾಂಗ್ರೆಸ್ ಇತಿಹಾಸ ನೋಡಿದರೆ ಎಂದಿಗೂ ಅವರು ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳು ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ ಎಂದು ಕುಟುಕಿದರು.
ಕಾಂಗ್ರೆಸ್ ದಲಿತ ವಿರೋಧಿ:
ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಭಾಷಣ ಹಾಗೂ ಲೋಕಸಭೆಯಲ್ಲಿ ಅಧಿಕೃತವಾಗಿ ಮಾತನಾಡಿರುವುದನ್ನು ನೋಡಿದರೆ ಇವರು ಮೀಸಲಾತಿ ವಿರೋಧಿಗಳು ಎಂಬುವುದು ಸ್ಪಷ್ಟವಾಗುತ್ತವೆ. ಸಂವಿಧಾನಾತ್ಮಕ ಮೀಸಲಾತಿ ಕಲ್ಪಿಸಿದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಘೋರವಾಗಿ ಅವಮಾನ ಮಾಡಿದ್ದು ಇದೇ ಕಾಂಗ್ರೆಸ್. 1990ರ ವರೆಗೆ ಇವರಿಗೆ ಭಾರತರತ್ನ ಪುರಸ್ಕಾರ ನೀಡಲಿಲ್ಲ. ಹಿಂದೆ ಚುನಾವಣೆಯಲ್ಲಿ ಸೋಲಿಸಿದರು. ದಲಿತರಿಗೆ ಅನ್ಯಾಯ ಮಾಡುವ ಹಾಗೂ ಮೀಸಲಾತಿಗೆ ವಿರೋಧ ಮಾಡುವ ಪಕ್ಷವಿದು ಎಂದರು.
ವೋಟ್ ಬ್ಯಾಂಕ್:
ಕಾಂಗ್ರೆಸ್‌ನವರು ಎಂದಿಗೂ ದಲಿತರು ಹಾಗೂ ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿದ್ದಾರೆ. 1984ರಲ್ಲಿ ಸಿಖ್‌ರ ಕೊರಳಿಗೆ ಟೈಯರ್ ಹಾಕಿ ಸುಟ್ಟವರು ಇದೀಗ ಅವರ ಪೇಟದ ಬಗ್ಗೆ ಮಾತನಾಡುತ್ತಾರೆ. ಅಧಿಕಾರಕ್ಕಾಗಿ ದೇಶದ ಭದ್ರತೆಗೆ ದಕ್ಕೆ ತರುವಂತೆ ಪಕ್ಷ ಹಾಗೂ ಪಕ್ಷದ ನಾಯಕರು ಕಾಂಗ್ರೆಸ್‌ಲ್ಲಿದ್ದಾರೆ ಎಂದು ಜೋಡಿ ಕಿಡಿಕಾರಿದರು.
ಡಿಸಿಎಂ ಡಿ.ಕೆ. ಶಿವಕುಮಾರ ತಾವು ಮುಖ್ಯಮಂತ್ರಿ ಆಗುವ ವಿಚಾರ ಯಾರಿಗೂ ಗೊತ್ತಾಗಬಾರದೆಂದು ವಿದೇಶದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಸಿಎಂ ಆಗುವ ಇಂಗಿತವನ್ನು ರಾಜ್ಯದಲ್ಲಿ ವ್ಯಕ್ತಪಡಿಸಿದರೆ ಅದು ಎಲ್ಲರಿಗೂ ಗೊತ್ತಾಗುತ್ತದೆ. ಆ ಕಾರಣಕ್ಕೆ ಅಮೆರಿಕದಲ್ಲಿರುವ ರಾಹುಲ್ ಗಾಂಧಿ ಅವರನ್ನು ಪ್ರವಾಸದ ನೆಪದಲ್ಲಿ ಡಿಕೆಶಿ ಭೇಟಿ ಮಾಡಿ, ಗುಪ್ತ ಮಾತುಕತೆ ನಡೆಸಿದ್ದಾರೆ ಎಂದರು.
ಭಯೋತ್ಪಾದನೆಗೆ ಕಾಂಗ್ರೆಸ್ ಬೆಂಬಲ:
ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಕುರಿತು ಎನ್‌ಐಎ ಸಲ್ಲಿಸಿದ ಚಾರ್ಜ್‌ಸೀಟ್‌ನಲ್ಲಿ ಆರೋಪಿಗಳು ಬಿಜೆಪಿ ಕಚೇರಿಯನ್ನು ಟಾರ್ಗೆಟ್ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ, ಕೆಲ ಸಚಿವರು ಅದು ಸುಳ್ಳು ಎಂದು ಹೇಳುತ್ತಿದ್ದಾರೆ. ಜತೆಗೆ ಕಾಂಗ್ರೆಸ್ ನಾಯಕರು ಭಯೋತ್ಪಾದಕರನ್ನು ಬೆಂಬಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಕರ್ನಾಟಕದಲ್ಲಿ ಕುಕ್ಕರ್ ಬ್ಲಾಸ್ಟ್ ಮಾಡಿದವರನ್ನು ತಮ್ಮ ಸಹೋದರರು ಎನ್ನುತ್ತಾರೆ. ರಾಮೇಶ್ವರ ಕೆಫೆ ಸ್ಫೋಟಗೊಂಡಾಗ ಅದನ್ನು ಸಿಲಿಂಡರ್ ಬ್ಲಾಸ್ಟ್ ಎಂದರು. ವೋಟ್ ಬ್ಯಾಂಕ್‌ಗಾಗಿ ಭಯೋತ್ಪಾದನೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದೆ ಎಂದು ಆರೋಪಿಸಿದರು.
ವಾಲ್ಮೀಕಿ ಹಗರಣದ ಬಗ್ಗೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಅದರಲ್ಲಿ ಮಾಜಿ ಸಚಿವ ನಾಗೇಂದ್ರರ ಪಾತ್ರ ವಿವರಿಸಲಾಗಿದೆ. ಈ ಕುರಿತು ನ್ಯಾಯಾಲಯ ಸರಿಯಾದ ಕ್ರಮ ಕೈಗೊಳ್ಳುತ್ತದೆ. ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗುತ್ತದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.