ಶಿಡ್ಲಘಟ್ಟ : ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ತುಂಬಾ ಕಠಿಣವಾದ ಹಾಗೂ ಸೂಕ್ಷ್ಮವಾದ ಕಾಯಿದೆಯಾಗಿದ್ದು, ಈ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವ ಪ್ರಸಂಗವೇ ಬರುವುದಿಲ್ಲ ಎಂದು ಆರಕ್ಷಕ ವೃತ್ತ ನಿರೀಕ್ಷಕ ಎಂ. ಶ್ರೀನಿವಾಸ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಗರ ಪೋಲಿಸ್ ಠಾಣೆ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ಕಾನೂನುಗಳ ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ವಿಶೇಷ ಕಾನೂನುಗಳು ರಚನೆಯಾಗಿವೆ. ಮಕ್ಕಳ ಮೇಲೆ ನಡೆಯುವ ಎಲ್ಲಾ ರೀತಿಯ ದೌರ್ಜನ್ಯಗಳನ್ನು ತಡೆಯುವುದು ಇಡೀ ಸಮಾಜದ ಕರ್ತವ್ಯವಾಗಬೇಕು ಎಂದರು.
ದೌರ್ಜನ್ಯ ನಡೆದರೆ ಕೇಸ್ ಹಾಕಿ
ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ತಿಳಿದ ಕೂಡಲೇ ಪೊಲೀಸರು ಪ್ರಕರಣ ದಾಖಲಿಸಬೇಕಾಗುತ್ತದೆ ಎಂದ ಅವರು, ವಿದ್ಯಾರ್ಥಿಗಳು ಬದಲಾದ ಕಾನೂನಿಗೆ ಅನುಗುಣವಾಗಿ ಹೆಚ್ಚು ಕಾನೂನು ಅರಿವು ಪಡೆಯುವತ್ತ ಗಮನ ಹರಿಸಬೇಕೆಂದರು.
ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಮಾತನಾಡಿ, ಪೋಕ್ಸೋ ಕಾಯಿದೆ ಜಾರಿಯಾಗಿ ಇಷ್ಟು ವರ್ಷಗಳು ಕಳೆದಿವೆ. ಸಾಕಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿಯೂ ಶಿಕ್ಷೆಯಾಗಿದೆ. ಇಷ್ಟು ಪ್ರಕರಣಗಳನ್ನು ಗಮನಿಸಿದಾಗ ಹತ್ತಿರದ ಸಂಬಂಧಿಗಳೇ ಕೆಲವು ಪ್ರಕರಣಗಳಲ್ಲಿ ಕೃತ್ಯ ಎಸಗಿರುವುದು ಕಂಡುಬರುತ್ತದೆ. ಹೀಗಾಗಿ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದರು. ಇದೇ ವೇಳೆ ಪೋಕ್ಸೋ ಕಾಯಿದೆ, ದತ್ತು ನಿಯಮಾವಳಿಗಳು ಹಾಗೂ ಬಾಲ್ಯ ವಿವಾಹ ನಿಷೇಧ ಕಾಯಿದೆ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆ ಪಿಎಸ್ಐಗಳಾದ ವೇಣುಗೋಪಾಲ್, ವೆಂಕಟರಮಣ, ಕಾಲೇಜಿನ ಪ್ರೊ. ಉಮೇಶ್ ರೆಡ್ಡಿ, ಎನ್ ವಿಜೇಂದ್ರ ಕುಮಾರ್ ಮತ್ತಿತರರು ಹಾಜರಿದ್ದರು .