ಎಂಸಿಇಯಲ್ಲಿ ಅವಿಶ್ವಾಸ ನಿರ್ಣಯದ ಪ್ರಹಸನ

KannadaprabhaNewsNetwork |  
Published : Sep 09, 2025, 01:00 AM IST
8ಎಚ್‌ಎಸ್ಎನ್12ಎ : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂಟಿಇಎಸ್‌ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು. | Kannada Prabha

ಸಾರಾಂಶ

ಸೋಮವಾರ ಕಾಲೇಜಿನ ಆವರಣದಲ್ಲಿ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಪೂರ್ವ ಸಿದ್ಧತೆಯಂತೆ ಹಾಲಿ ಅಧ್ಯಕ್ಷರಾದ ದ್ಯಾವೇಗೌಡರು ತಮ್ಮ 11 ಜನ ನಿರ್ದೇಶಕರೊಂದಿಗೆ ಸಭೆಗೆ ಬಂದಿದ್ದರು. ಅಶೋಕ್‌ ಹಾರನಹಳ್ಳಿ ಅವರು 10 ನಿರ್ದೇಶಕರೊಂದಿಗೆ ಆಗಮಸಿದ್ದರು. ಹೀಗಾಗಿ ಅಶೋಕ್‌ ಹಾರನಹಳ್ಳಿ ತಂಡ ಅಂದುಕೊಂಡಂತೆ ಅವಿಶ್ವಾಸ ನಿರ್ಣಯ ವ್ಯಕ್ತಪಡಿಸಲೂ ಆಗದೇ ವಾಪಸ್‌ ತೆರಳಿದರು. ಅಶೋಕ್‌ ಹಾರನಹಳ್ಳಿ ತಂಡ ಅಧಿಕಾರದ ಗದ್ದುಗೆಗೆ ಏರುತ್ತದೆ ಎಂದೆಲ್ಲಾ ಗುಸುಗುಸು ಇತ್ತು. ಅದರಂತೆ ಕಾಲೇಜಿನ ಎದುರು ಬಿಗಿ ಪೊಲೀಸ್‌ ಬಂದೋಬಸ್ತ್‌ ಕೂಡ ಮಾಡಲಾಗಿತ್ತು. ಆದರೆ, ಅಶೋಕ್‌ ಹಾರನಹಳ್ಳಿ ಅವರ ತಂಡ ಸರಳ ಬಹುಮತವೂ ಇಲ್ಲದ ಕಾರಣ ವಾಪಸ್‌ ತೆರಳಬೇಕಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯನ್ನು ಮತ್ತೊಮ್ಮೆ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮಾಜಿ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ ತಂಡಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಸೋಮವಾರ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ(ಎಂಟಿಇಎಸ್) ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ಮಂಡನೆ ಆಗಿಯೇ ಬಿಡುತ್ತದೆ, ಅಶೋಕ್‌ ಹಾರನಹಳ್ಳಿ ತಂಡ ಅಧಿಕಾರದ ಗದ್ದುಗೆಗೆ ಏರುತ್ತದೆ ಎಂದೆಲ್ಲಾ ಗುಸುಗುಸು ಇತ್ತು. ಅದರಂತೆ ಕಾಲೇಜಿನ ಎದುರು ಬಿಗಿ ಪೊಲೀಸ್‌ ಬಂದೋಬಸ್ತ್‌ ಕೂಡ ಮಾಡಲಾಗಿತ್ತು. ಆದರೆ, ಅಶೋಕ್‌ ಹಾರನಹಳ್ಳಿ ಅವರ ತಂಡ ಸರಳ ಬಹುಮತವೂ ಇಲ್ಲದ ಕಾರಣ ವಾಪಸ್‌ ತೆರಳಬೇಕಾಯಿತು.

ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜು, ಕೃಷ್ಣ ಕಾನೂನು ಕಾಲೇಜು, ಎವಿಕೆ ಕಾಲೇಜುಗಳನ್ನು ನಡೆಸುತ್ತಿರುವ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯಲ್ಲಿ ಆರಂಭದಿಂದಲೂ ಹಾರನಹಳ್ಳಿ ರಾಮಸ್ವಾಮಿ ಅವರು ಅಧ್ಯಕ್ಷರಾಗಿದ್ದರು. ಅವರ ನಂತರ ಅವರ ಪುತ್ರ ಅಶೋಕ್‌ ಹಾರನಹಳ್ಳಿ ಅಧ್ಯಕ್ಷರಾಗಿದ್ದರು. ಆದರೆ ಹಲವು ದಶಗಳ ನಂತರ ಹಾರನಹಳ್ಳಿ ಹಿಡಿತ ತಪ್ಪಿ ಟ್ರಸ್ಟ್‌ನ ಕಾರ್ಯದರ್ಶಿಗಳಾಗಿದ್ದ ಆರ್‌.ಟಿ.ದ್ಯಾವೇಗೌಡರು ಅಧ್ಯಕ್ಷರಾದರು. ಹಲವು ಬೆಳವಣಿಗೆಗಳ ನಡುವೆ ಇರುವ 24 ನಿರ್ದೇಶಕರ ಪೈಕಿ ಬಹುತೇಕರು ದ್ಯಾವೇಗೌಡರಿಗೇ ಬೆಂಬಲ ವ್ಯಕ್ತಪಡಿಸಿದ್ದರು. ಹೀಗಾಗಿ ಅಶೋಕ್‌ ಹಾರನಹಳ್ಳಿ ಚುನಾವಣೆಯಲ್ಲಿ ಸೋತಿದ್ದರು. ಆದರೆ, ತೆರೆಮರೆಯಲ್ಲಿದ್ದುಕೊಂಡೇ ಎಂಟಿಇಎಸ್‌ ಅಧ್ಯಕ್ಷ ಸ್ಥಾನ ಏರುವ ಪ್ರಯತ್ನದಲ್ಲಿದ್ದ ಅವರು, ಈಗಿರುವ ಪದಾಧಿಕಾರಿಗಳಿಗೆ ಬಹುಮತವಿಲ್ಲ, ಹಾಗಾಗಿ ತಮ್ಮೊಂದಿಗಿರುವ ಬಹುತೇಕ ನಿರ್ದೇಶಕರು ಅವಿಶ್ವಾಸ ಮಂಡಿಸಲು ಸಿದ್ಧರಿದ್ದಾರೆ. ಹಾಗಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡಬೇಕು ಎಂದು ಬೆಂಗಳೂರಿನ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ಸಲ್ಲಿಸಿದ್ದರು.

ಈ ನಡುವೆ ಅಶೋಕ್‌ ಹಾರನಹಳ್ಳಿ ಬಣದಲ್ಲಿ ಗುರ್ತಿಸಿಕೊಂಡಿದ್ದ ನಿರ್ದೇಶಕರಾದ ಶ್ರೀಧರ್‌, ಅರವಿಂದ್‌ ಹಾಗೂ ಜಿ.ಆರ್‌. ಶ್ರೀನಿವಾಸ್‌ ಅವರನ್ನು ಟ್ರಸ್ಟ್‌ನ ಕಾನೂನು ಉಲ್ಲಂಘನೆ ಆರೋಪದಲ್ಲಿ ನಿರ್ದೇಶಕ ಸ್ಥಾನದಿಂದ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ಸೋಮವಾರ ಕಾಲೇಜಿನ ಆವರಣದಲ್ಲಿ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಪೂರ್ವ ಸಿದ್ಧತೆಯಂತೆ ಹಾಲಿ ಅಧ್ಯಕ್ಷರಾದ ದ್ಯಾವೇಗೌಡರು ತಮ್ಮ 11 ಜನ ನಿರ್ದೇಶಕರೊಂದಿಗೆ ಸಭೆಗೆ ಬಂದಿದ್ದರು. ಅಶೋಕ್‌ ಹಾರನಹಳ್ಳಿ ಅವರು 10 ನಿರ್ದೇಶಕರೊಂದಿಗೆ ಆಗಮಸಿದ್ದರು. ಹೀಗಾಗಿ ಅಶೋಕ್‌ ಹಾರನಹಳ್ಳಿ ತಂಡ ಅಂದುಕೊಂಡಂತೆ ಅವಿಶ್ವಾಸ ನಿರ್ಣಯ ವ್ಯಕ್ತಪಡಿಸಲೂ ಆಗದೇ ವಾಪಸ್‌ ತೆರಳಿದರು.

ಎಂಟಿಇಎಸ್‌ ಸಹಕಾರ ಸಂಘ ಕಾಯ್ದೆಯಡಿ ಸೇರಿಲ್ಲ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಟಿಇಎಸ್‌ ಅಧ್ಯಕ್ಷ ದ್ಯಾವೇಗೌಡರು, ಇದು ಸಹಕಾರ ಕಾಯ್ದೆ ಅಡಿ ನೋಂದಾಯಿತ ಸಂಸ್ಥೆ ಅಲ್ಲ. ಕರ್ನಾಟಕ ಸೊಸೈಟಿ ರಿಜಸ್ಟ್ರೇಷನ್ ಕಾಯ್ದೆ ಅಡಿ ನೋಂದಾಯಿತ ಸಂಸ್ಥೆ. ಕೋರ್ಟ್ ಆದೇಶದ ಪ್ರಕಾರವೇ ಮೂವರು ನಿರ್ದೇಶಕರನ್ನು ಅಮಾನತು ಮಾಡಲಾಗಿದೆ. ಅವರೂ ಕೂಡ ಅಶೋಕ್‌ ಹಾರನಹಳ್ಳಿ ಅವರ ಜತೆ ಬಂದಿದ್ದರು. ಆದರೆ, ನಾವು ಇಂದು ಆಯೋಜಿಸಿದ್ದು ಸಾಮಾನ್ಯ ಸಭೆ ಮಾತ್ರ. ಹಾಗಾಗಿ ಸಭಾ ನಡಾವಣಿ ಪುಸ್ತಕದಲ್ಲಿ ನಾವೆಲ್ಲರೂ ಸಹಿ ಮಾಡಿದ್ದೇವೆ. ಅಮಾನತಾದವರ ಹೆಸರಿನ ಮುಂದೆ ಅಮಾನತು ಮಾಡಲಾಗಿದೆ ಎಂದು ಬರೆದಿದ್ದೇವೆ. ಆದರೆ, ಅಶೋಕ್‌ ಹಾರನಹಳ್ಳಿ ತಂಡದ ಯಾರೊಬ್ಬರೂ ಸಹಿಯನ್ನೇ ಮಾಡಿಲ್ಲ. ಹಾಗಾಗಿ ಅವರನ್ನೆಲ್ಲಾ ಗೈರು ಹಾಜರಿ ಎಂದು ಬರೆದಿರುವುದಾಗಿ ಸಮಿತಿ ಕಾರ್ಯದರ್ಶಿ ಜಗದೀಶ್‌ ಚೌಡುವಳ್ಳಿ ತಿಳಿಸಿದರು.

ಹಾರನಹಳ್ಳಿ ಕ್ರಮ ಕಾನೂನು ಬಾಹಿರ:

ಈ ಹಿಂದಿನ ಅಧ್ಯಕ್ಷ, ಕಾರ್ಯದರ್ಶಿ ಚುನಾವಣೆಯೇ ಸರಿಯಾಗಿ ನಡೆದಿಲ್ಲ ಎಂದು ಅವರೇ ಕೋರ್ಟಿಗೆ ದಾವೆ ಹಾಕಿದ್ದಾರೆ. ಹೀಗಿರುವಾಗ ಕೋರ್ಟ್‌ ತೀರ್ಪು ನೀಡಬೇಕೇ ವಿನಃ ಅವಿಶ್ವಾಸ ನಿರ್ಣಯ ಮಾಡಲು ಹೇಗೆ ಸಾಧ್ಯ? ಹಾಗೆಯೇ ನಮ್ಮ ಸಮಿತಿ ನೋಂದಣಿ ಆಗಿರುವ ಕರ್ನಾಟಕ ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್ ಪ್ರಕಾರವೂ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಅವಕಾಶವೇ ಇಲ್ಲ. ನಮ್ಮ ಸಮಿತಿಯಲ್ಲಿ ಒಬ್ಬ ಸಾಮಾನ್ಯ ಸದಸ್ಯನನ್ನು ತೆಗೆಯಲಿಕ್ಕೆ ಮೂರನೇ ಒಂದು ಭಾಗ ಬಹುಮತ ಬೇಕು. ಅಂಥಾದ್ದರಲ್ಲಿ ಚುನಾಯಿತ ಅಧ್ಯಕ್ಷರನ್ನು ಸಾಮಾನ್ಯ ಬಹುಮತದಿಂದ ತೆಗೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಿರ್ದೇಶಕರಿಗೆ ಹಣದ ಆಮಿಷ:

ಅವರನ್ನು ಬೆಂಬಲಿಸಿ ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಹಿ ಹಾಕಿರುವ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ‌ ಕೊಡದೆ ಸಹಿ ಹಾಕಿರುವುದು ಕೂಡ ಕಾನೂನು ಬಾಹಿರ. ಅವರಲ್ಲಿ ಹಲವರಿಗೆ ಹಣದ ಆಮಿಷ ಒಡ್ಡಿ ತಮ್ಮೆಡೆಗೆ ಸೆಳೆದುಕೊಂಡಿದ್ದಾರೆ. ಜಿ ಟಿ ಕುಮಾರ್‌ ಅಂಥವರು ೮ ಕೋಟಿ ಆಮಿಷಕ್ಕೆ ಒಳಗಾಗುತ್ತಾರೆ. ಇನ್ನು ಶ್ರೀನಿವಾಸ್ ಅವರು ಕೂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಅವರಿಗೆ ಸಂಸ್ಥೆ ಆರ್ಥಿಕ ನೆರವು‌ ನೀಡಿದೆ. ಆದರೂ ಅವರು ಈಗ ಹಣಕ್ಕಾಗಿ‌ ಅವರೊಂದಿಗೆ ಸೇರಿಕೊಂಡಿದ್ದಾರೆ. ಇನ್ನು ಬಿ ಆರ್ ಗುರುದೇವ್ ನಾಲ್ಕು ಗೋಡೆ ಸಾರಣೆ ಮಾಡಿಸಿ ನಾಲ್ಕು ಕೋಟಿ ಹಣ ಹೊಡೆದ ಪ್ರಕರಣ ಕೋರ್ಟಿನಲ್ಲಿದ್ದು, ತಮ್ಮನ್ನು ಬೆಂಬಲಿಸಿ ತಾವು ಅಧ್ಯಕ್ಷರಾದರೆ ಆ ದಾವೆಯನ್ನು ವಾಪಸ್‌ ತೆಗೆದುಕೊಳ್ಳುವ ಆಮಿಷ ಒಡ್ಡಿ ಅವರನ್ನು ತಮ್ಮ ಗುಂಪಿಗೆ ಸೇರಸಿಕೊಂಡಿದ್ದಾರೆ ಎಂದು ವಿರೋಧಿ ಬಣದ ಮುಖಂಡರ ಮೇಲೆ ಆರೋಪಿಸಿದರು.

ಪರಿಶಿಷ್ಟರನ್ನು ಪ್ರಾಂಶುಪಾಲರನ್ನಾಗಿ ಮಾಡಿದ್ದೇ ತಪ್ಪಾಯ್ತಾ?

68 ವರ್ಷದ ನಂತರ ಅನ್ಯ ಜಾತಿಯವರು ಈ ಸಮಿತಿಯಲ್ಲಿ ಅಧಿಕಾರಕ್ಕೆ ಬಂದಿದ್ದು ಹಾಗೂ ತಾನು ಬಂದ ನಂತರ ಪರಿಶಿಷ್ಟರನ್ನು ಪ್ರಾಂಶುಪಾಲರಾಗಿ ಮಾಡಿದ್ದನ್ನು ಆಶೋಕ್ ಹಾರನಹಳ್ಳಿ ಸಹಿಸುತ್ತಿಲ್ಲ. ಅದಕ್ಕೆ ಹೀಗೆಲ್ಲಾ ಮಾಡ್ತಿದಾರೆ ಎಂದು ಅಧ್ಯಕ್ಷರಾದ ದ್ಯಾವೇಗೌಡರು ಆರೋಪಿಸಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು