ಹಾನಗಲ್ಲ: ತಾಲೂಕಿನ ನರೇಗಲ್ ಗಲಭೆ ಪ್ರಕರಣದ ಆರೋಪಿ ಶೌಕತ್‌ಅಲಿ ನೆಗಳೂರ ನಮ್ಮ ಮನೆಯಲ್ಲಿ ಆಶ್ರಯ ಪಡೆದು ಬಚ್ಚಿಟ್ಟುಕೊಂಡಿದ್ದರು ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದದ್ದು, ಅಲ್ಲದೇ ಪೊಲೀಸರು ನನ್ನನ್ನು ಬೆದರಿಸಿ ಇಂತಹ ಹೇಳಿಕೆ ಪಡೆದಿದ್ದಾರೆ. ನಾನು ಬಿಜೆಪಿ ಸದಸ್ಯನೂ ಅಲ್ಲ, ಕಾರ್ಯಕರ್ತನೂ ಅಲ್ಲ. ನಾನೊಬ್ಬ ರೈತ ಅಷ್ಟೇ ಎಂದು ಯತ್ತಿನಹಳ್ಳಿ ಗ್ರಾಮದ ಮಧುಗೌಡ ಪಾಟೀಲ ಹೇಳಿದರು.
ನಾನು ಬಿಜೆಪಿ ಸದಸ್ಯನೂ ಅಲ್ಲ, ಕಾರ್ಯಕರ್ತನೂ ಅಲ್ಲ, ಯಾವುದೇ ಬಿಜೆಪಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿಯೂ ಇಲ್ಲ. ಆದರೆ ನನ್ನನ್ನು ಬಿಜೆಪಿ ಮುಖಂಡನೆಂದು ಬಿಂಬಿಸುತ್ತಿರುವುದು ವಿಷಾದದ ಸಂಗತಿ. ಅಲ್ಲದೇ ಶೌಕತ್‌ಅಲಿ ನೆಗಳೂರ ನನ್ನ ನಡುವೆ ವ್ಯಾಪಾರ ವಹಿವಾಟಿನ ಸಂಬಂಧವಿದೆಯೇ ಹೊರತೂ ಅವನನ್ನು ರಕ್ಷಣೆ ಮಾಡುವ ಯಾವುದೇ ಉದ್ದೇಶ ನನಗಿಲ್ಲ. ಅವನು ನರೇಗಲ್ ಗಲಭೆ ಪ್ರಕರಣದ ಆರೋಪಿ ಎಂದು ನನಗೆ ಗೊತಿಲ್ಲ. ಅವನು ನನ್ನ ಮನೆಯಲ್ಲಿ ವಾಸವಾಗಿರಲಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟಿನ ಸಂಬಂಧಕ್ಕೆ ನಮ್ಮ ಮನೆಗೆ ಬಂದು ಹೋಗಿದ್ದಾನೆ. ಹೀಗೆ ಶುಕ್ರವಾರ ಸಂಜೆ ನಮ್ಮ ಮನೆಗೆ ಬಂದವನೊಂದಿಗೆ ನಾವು ಮನೆಯ ಕಟ್ಟೆಯ ಮೆಲೆ ಮಾತನಾಡುತ್ತ ಕುಳಿತಿದ್ದಾಗ ದಿಢೀರನೆ ಆಗಮಿಸಿದ ಆಡೂರು ಪೊಲೀಸರು ನಮ್ಮಿಬ್ಬರನ್ನೂ ಏನನ್ನೂ ವಿಚಾರಿಸದೇ ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ಮಧುಗೌಡ ಪಾಟೀಲ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಮಧುಗೌಡ ಪಾಟೀಲ ಬಿಜೆಪಿ ಕಾರ್ಯಕರ್ತನೆಂದು ಬಿಂಬಿಸಿ ನರೇಗಲ್ ಪ್ರಕರಣವನ್ನು ತಿರುಚುವ ಹಾಗೂ ಇದನ್ನು ಬಿಜೆಪಿಗೆ ಅಂಟಿಸುವ ದುರಾಲೋಚನೆ ಇದರಲ್ಲಿದೆ. ಈ ವ್ಯಕ್ತಿ ಬಿಜೆಪಿಯ ಮುಖಂಡ ಎಂದು ಯಾರು ದಾಖಲೆ ನೀಡಿದ್ದಾರೆ ಎಂದು ನಮ್ಮ ಪಕ್ಷಕ್ಕೂ ತಿಳಿಯದು. ಇಂಥ ಸುಳ್ಳು ಸುದ್ದಿಗಳ ಮೂಲಕ ನಮ್ಮ ಪಕ್ಷದ ಹೆಸರಿಗೆ ಕಳಂಕ ತರುತ್ತಿರುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಮಹೇಶ ಕಮಡೊಳ್ಳಿ ಪ್ರತಿಕ್ರಿಯಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕಲ್ಯಾಣಕುಮಾರ ಶೆಟ್ಟರ, ಮಾಲತೇಶ ಸೊಪ್ಪಿನ, ಮನೋಜ್ ದೇಸಾಯಿ, ಸಂತೋಷ ಭಜಂತ್ರಿ, ಶಿವಾನಂದ ಪಾಟೀಲ, ಸಚಿನ್ ರಾಮಣ್ಣನವರ, ನಿಜಲಿಂಗಪ್ಪ ಮುದಿಯಪ್ಪನವರ, ಚನ್ನಬಸನಗೌಡ ಪಾಟೀಲ ಇತರರಿದ್ದರು.