ಭ್ರಷ್ಟಾಚಾರ ನಡೆಸಿಲ್ಲ: ಮಾರಿಗುಡಿ ಎದುರು ಪೂಂಜ ಪ್ರಮಾಣ!

KannadaprabhaNewsNetwork |  
Published : Aug 15, 2024, 01:50 AM IST
ಪ್ರಮಾಣ | Kannada Prabha

ಸಾರಾಂಶ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ ಆರೋಪಗಳಿಗೆ ಬೆಳ್ತಂಗಡಿ ಶಾಸಕ ಪ್ರತ್ಯುತ್ತರ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬೆಳ್ತಂಗಡಿ ನೂತನ ಪ್ರವಾಸಿ ಬಂಗಲೆಯ ಕಾಮಗಾರಿಯಲ್ಲಿ ಒಂದು ರು. ಹಣವನ್ನೂ ತೆಗೆದುಕೊಂಡಿಲ್ಲ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರಿಂದ ಹಣ ಪಡೆದಿಲ್ಲ, ಭ್ರಷ್ಟಾಚಾರ ನಡೆಸಿಲ್ಲ, ರೆಖ್ಯದ ಕಾಮಗಾರಿಯಲ್ಲಿ ಹಣ ಪಡೆದುಕೊಂಡಿಲ್ಲ, ಬಿಮಲ್ ಕಂಪೆನಿಯಲ್ಲಿ ನನ್ನ ಪಾಲುದಾರಿಕೆ, ಹೂಡಿಕೆ ಇಲ್ಲ, ಅವರಿಂದ ಒಂದು ರುಪಾಯಿಯನ್ನು ತೆಗೆದುಕೊಂಡಿಲ್ಲ, ಮರುಳು ಗಣಿಗಾರಿಕೆದಾರರಿಂದ, ಮರದ ದಂಧೆ ನಡೆಸುವವರಿಂದ ಹಣ ಪಡೆದು ಭ್ರಷ್ಟಾಚಾರ ನಡೆಸಿಲ್ಲ...

ಇವು ಬುಧವಾರ ಬೆಳಗ್ಗೆ ತಾಲೂಕಿನ ಕಾರಣಿಕ ಕ್ಷೇತ್ರ ಬೆಳ್ತಂಗಡಿ ಮಾರಿಗುಡಿಯಲ್ಲಿ ದೇವಿಯ ಎದುರು ನಿಂತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾಡಿದ ಪ್ರಮಾಣ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾಡಿದ ಆರೋಪಗಳಿಗೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸ್ವಷ್ಟನೆ ನೀಡಿದ್ದ ಪೂಂಜ, ರಕ್ಷಿತ್ ಶಿವರಾಂ ಆರೋಪಗಳಿಗೆ ಮಾರಿಗುಡಿಯಲ್ಲಿ ಪ್ರಮಾಣ ಮಾಡುತ್ತೇನೆ. ನಾನು ಹೇಳಿದ್ದು, ತಪ್ಪಿದ್ದರೆ ಆ ತಾಯಿ, ನನಗೆ, ನನ್ನ ಹೆಂಡತಿ, ಮಕ್ಕಳಿಗೆ ಶಿಕ್ಷೆ ಕೊಡಲಿ. ರಕ್ಷಿತ್ ಶಿವರಾಂ ಮಾಡಿರುವ ಆಪಾದನೆಗೆ ಬದ್ಧನಾಗಿದ್ದರೆ, ನಾನು ಮಾಡುವ ಪ್ರಮಾಣದ ಸಮಯ ಬಂದು ಪ್ರಮಾಣ ಮಾಡಲಿ ಎಂದ ಸವಾಲು ಹಾಕಿದ್ದರು. ಅದರಂತೆ ಬುಧವಾರ ಬೆಳಗ್ಗೆ ಬೆಳ್ತಂಗಡಿಯ ಮಾರಿಗುಡಿಯ ದೇವಿಯ ಎದುರು ದೀಪ ಬೆಳಗಿಸಿ, ರಕ್ಷಿತ್ ಶಿವರಾಂ ಮಾಡಿರುವ ಎಲ್ಲಾ ಆರೋಪಗಳನ್ನು ಪ್ರಸ್ತಾಪಿಸಿ, ನಾನು ಯಾರಿಂದಲೂ ಹಣ ಪಡೆದಿಲ್ಲ, ಯಾವುದೇ ಕಾಮಗಾರಿಯಲ್ಲಿ ಯಾರಿಂದಲೂ ಒಂದು ರುಪಾಯಿಯನ್ನೂ ಪಡೆದುಕೊಂಡಿಲ್ಲ ಎಂದು ಪ್ರಮಾಣ ಮಾಡಿದರು. ಬಳಿಕ ಮಾರಿಗುಡಿಯ ಎದುರು ಹತ್ತು ತೆಂಗಿನ ಕಾಯಿ ಒಡೆದು ಸುಳ್ಳು ಆರೋಪ ಮಾಡಿದವರಿಗೆ ಸರಿಯಾದ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸಿದರು.

ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್‌ ರಾವ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್‌, ಪಟ್ಟಣ ಪಂಚಾಯಿತಿ ಸದಸ್ಯ ಶರತ್ ಶೆಟ್ಟಿ, ಲಾಯಿಲ ಗ್ರಾ.ಪಂ ಸದಸ್ಯ ಗಣೇಶ್‌, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್‌ ಗೌಡ ನಾವೂರು, ಜಿಲ್ಲಾ ಸಾಮಾಜಿಕ ಜಾಲತಾಣ ಸದಸ್ಯ ಸುಪ್ರಿತ್ ಜೈನ್, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಬಿಜೆಪಿ ಪ್ರಮುಖರಾದ ಪ್ರಭಾಕರ ಸವಣಾಲ್, ರಂಜಿತ್‌ ಶೆಟ್ಟಿ ಮದ್ದಡ್ಕ ಪ್ರಕಾಶ್‌ ಆಚಾರ್ಯ, ಚಂದ್ರರಾಜ್ ಮೇಲಂತಬೆಟ್ಟು, ಪ್ರಶಾಂತ್ ಅಂತರ ಜೊತೆಗಿದ್ದರು.

ಸುಳ್ಳು ಆರೋಪಗಳಿಗೆ ಉತ್ತರ:

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಲ್ಲೇಶ್ವರನಿಂದ ಬಂದ ವ್ಯಕ್ತಿ ಅನೇಕ ಸುಳ್ಳು ಆರೋಪಗಳನ್ನು ಸಮಾಜದ ಎದುರು ಕಳೆದ ಒಂದು ತಿಂಗಳಿಂದ ಮಾಡುತ್ತಿದ್ದಾರೆ. ನಿನ್ನೆ ಪತ್ರಿಕಾಗೋಷ್ಠಿ ಮಾಡಿ ಅವರ ಆರೋಪಗಳ ಬಗ್ಗೆ ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದೆ. ಇವತ್ತು ಪ್ರಮಾಣ ಮಾಡಿದ್ದೇನೆ. ಇವತ್ತು ರಕ್ಷಿತ್ ಶಿವರಾಂರನ್ನು ಕರೆದಿದ್ದೆ. ನೀವು ಮಾಡಿರುವ ಆರೋಪಗಳು, ಆಪಾದನೆಗಳು ನಿಜವಾಗಿದ್ದರೆ ಪ್ರಮಾಣಕ್ಕೆ ಬನ್ನಿ ಎಂದು ಕರೆದಿದ್ದೆ ಅವರು ಬರಲಿಲ್ಲ. ಈ ರೀತಿಯ ಅಪಪ್ರಚಾರ, ಸುಳ್ಳು ಇವತ್ತಿಗೆ ತಾಯಿ ನಿಲ್ಲಿಸಬೇಕು ಎಂದು ನನ್ನ ತಾಯಿಯಲ್ಲಿ ಪ್ರಾರ್ಥನೆ ಎಂದರು.

ರಕ್ಷಿತ್ ಶಿವರಾಂ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಕಾದರೆ ಅವರ ಕುಟುಂಬ ಭ್ರಷ್ಟಾಚಾರ ಮಾಡಿಲ್ಲ ಎಂದು ಮೊದಲು ತಾಯಿಯ ಎದುರು ನಿಂತು ಪ್ರಮಾಣ ಮಾಡಲಿ. ಆ ಮೇಲೆ ಭ್ರಷ್ಟಾಚಾರದ ಬಗೆ ಮಾತನಾಡಲಿ ಎಂದು ಸವಾಲೆಸೆದರು.

ಡಿ.ಪಿ ಜೈನ್ ಕಾಮಗಾರಿ ಸಮಯದಲ್ಲಿ ಆನೇಕ ಮಂದಿ ಅವರ ಜೊತೆ ಸಬ್ ಕಾಂಟ್ರಾಕ್ಟ್ ಮಾಡಿರುವುದನ್ನು ಅವರ ಬಿಲ್ಲು ಪೆಂಡಿಂಗ್ ಇರುವುದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಇದರ ಬಗ್ಗೆ ನಾನು ಮತ್ತು ಸಂಸದರು ಡಿ.ಪಿ ಜೈನ್ ಕಂಪೆನಿಯ ಜೊತೆ ಮಾತನಾಡಿದ್ದೇವೆ. ಅವರಿಗೆ ಹಣ ಕೊಡಿಸುವ ಬಗ್ಗೆ ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ