ಧರ್ಮಸ್ಥಳ ಗ್ರಾಮದಲ್ಲಿ 8 ಅಡಿ ಆಳ ತೋಡಿದರೂ ಸಿಗದ ಅವಶೇಷ । ಮೊದಲ ದಿನ ಶವದ ಸುಳಿವೇ ಇಲ್ಲ!

KannadaprabhaNewsNetwork |  
Published : Jul 30, 2025, 12:46 AM IST
ಅಗೆತ | Kannada Prabha

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ದೂರುದಾರ, 13 ಸ್ಥಳಗಳನ್ನು ಗುರುತಿಸಿದ ಬೆನ್ನಲ್ಲೇ ಮಂಗಳವಾರದಿಂದ ಶವಗಳನ್ನು ಹೊರ ತೆಗೆಯುವ ಕಾರ್ಯ ಆರಂಭವಾಗಿದೆ.

- ಕತ್ತಲಾದ್ದರಿಂದ ಕಾರ್ಯಾಚರಣೆ ಸ್ಥಗಿತ । ಇಂದೂ ಮುಂದುವರಿಯಲಿದೆ ಆಪರೇಷನ್‌

==

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ದೂರುದಾರ, 13 ಸ್ಥಳಗಳನ್ನು ಗುರುತಿಸಿದ ಬೆನ್ನಲ್ಲೇ ಮಂಗಳವಾರದಿಂದ ಶವಗಳನ್ನು ಹೊರ ತೆಗೆಯುವ ಕಾರ್ಯ ಆರಂಭವಾಗಿದೆ. ಎಸ್‌ಐಟಿ ಅಧಿಕಾರಿಗಳ ತಂಡದಿಂದ ಆತ ತಿಳಿಸಿದ ಮೊದಲ ಸ್ಥಳದಲ್ಲಿ ಮಂಗಳವಾರ ಸುಮಾರು 6 ತಾಸಿಗೂ ಹೆಚ್ಚು ಕಾಲ ಅಗೆದರೂ ಯಾವುದೇ ರೀತಿಯ ಕುರುಹು ಪತ್ತೆಯಾಗಿಲ್ಲ.ದೂರುದಾರ ತಿಳಿಸಿದಂತೆ ಸೋಮವಾರ ನೇತ್ರಾವತಿ ಸ್ನಾನಘಟ್ಟ ಪರಿಸರದ 13 ಕಡೆ ಸ್ಥಳ ಮಹಜರು ನಡೆಸಲಾಗಿತ್ತು. ಮಂಗಳವಾರ ನೇತ್ರಾವತಿ ಸ್ನಾನ ಘಟ್ಟದಲ್ಲಿ ಗುರುತಿಸಲಾದ ಮೊದಲ ಸ್ಥಳದಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ದೂರುದಾರನ ಉಪಸ್ಥಿತಿಯಲ್ಲಿ ಅಧಿಕಾರಿಗಳ ತಂಡ ಉತ್ಖನನ ಕಾರ್ಯ ನಡೆಸಿತು.

ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ, ಸುರಿಯುತ್ತಿರುವ ಮಳೆಯ ನಡುವೆಯೂ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕಾರ್ಯಾಚರಣೆ ಆರಂಭಿಸಲಾಯಿತು. ಮೊದಲ ಹಂತದಲ್ಲಿ ಸ್ಥಳೀಯ 12 ಪೌರಕಾರ್ಮಿಕರ ಸಹಕಾರದಲ್ಲಿ ಅಗೆಯುವ ಕಾರ್ಯ ಆರಂಭವಾಯಿತು. ಸತತ ಮೂರು ಗಂಟೆ ಕೆಲಸ ನಡೆಸಿ, ಸುಮಾರು 4 ಅಡಿ ಆಳ, 6 ಅಡಿ ಉದ್ದದ ಹೊಂಡ ತೋಡಿದರೂ ಯಾವುದೇ ಕುರುಹು ಪತ್ತೆಯಾಗಲಿಲ್ಲ. ಈ ಸ್ಥಳವು ನದಿ ಸಮೀಪ ಇರುವುದರಿಂದ ನೀರಿನ ಒರತೆ, ಅಗೆದಂತೆ ಹೊಂಡಕ್ಕೆ ಬೀಳುತ್ತಿದ್ದ ಕಲ್ಲು, ಮಣ್ಣು ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿ ಉಂಟು ಮಾಡಿತು.ಮಿನಿ ಹಿಟಾಚಿ ಬಳಕೆ: ಬಳಿಕ, ಡಿಐಜಿ ಅನುಚೇತ್ ಅವರ ನಿರ್ದೇಶನದ ಮೇರೆಗೆ ಸಂಜೆ 3.20ರಿಂದ 6 ಗಂಟೆ ತನಕ ಮಿನಿ ಹಿಟಾಚಿ ಬಳಸಿ ಅದೇ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಲಾಯಿತು. 15 ಅಡಿ ಅಗಲ, 8 ಅಡಿ ಆಳದ ಹೊಂಡ ತೋಡಿದರೂ ಯಾವುದೇ ರೀತಿಯ ಕುರುಹುಗಳು ಕಂಡು ಬಂದಿಲ್ಲ. ಈ ಮಧ್ಯೆ, ಸಂಜೆ 5 ಗಂಟೆ ಹೊತ್ತಿಗೆ ಪೊಲೀಸ್‌ ಶ್ವಾನದಳವನ್ನು ಕರೆಸಲಾಯಿತು. ಕತ್ತಲು ಆವರಿಸಲು ಆರಂಭವಾದ ಕಾರಣ ಸಂಜೆ 6ರ ಹೊತ್ತಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಬುಧವಾರ ಮತ್ತೆ ದೂರುದಾರ ಹೇಳಿರುವ ಎರಡನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಲಾಗಿದೆ.===

ದೂರದಲ್ಲೇ ನಿಂತು

ವೀಕ್ಷಿಸಿದ ನೂರಾರು ಜನ

ಮಂಗಳೂರು ಕೆಎಂಸಿ ಆಸ್ಪತ್ರೆಯ ಇಬ್ಬರು ನುರಿತ ವೈದ್ಯರಾದ ಡಾ.ಜಗದೀಶ್ ರಾವ್ ಮತ್ತು ಡಾ.ರಶ್ಮಿ, ಡಿಐಜಿ ಅನುಚೇತ್, ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸ್ಪಿ ಸೈಮನ್, ಪುತ್ತೂರು ಎ.ಸಿ.ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿ ಕಂ, ಕಂದಾಯ, ಅರಣ್ಯ, ಎಫ್‌ಎಸ್‌ಎಲ್ ಸೋಕೋ ವಿಭಾಗ, ಆಂತರಿಕ ಭದ್ರತಾ ದಳ ಹಾಗೂ ಪೊಲೀಸ್ ತಂಡಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.

ಕಾರ್ಯಾಚರಣೆ ನೋಡಲು ನೂರಾರು ಗ್ರಾಮಸ್ಥರು, ಯಾತ್ರಾರ್ಥಿಗಳು ಆಗಮಿಸಿದ್ದರು. ಆದರೆ, ಅಗೆತದ ಸನಿಹ ಯಾರನ್ನೂ ಬಿಟ್ಟಿಲ್ಲ. ದೂರುದಾರ ಮುಸುಕು ಹಾಕಿಕೊಂಡೇ ಇದ್ದ.

13 ಸ್ಥಳಕ್ಕೂ ಬಿಗಿ ಬಂದೋಬಸ್ತ್‌:

ದೂರುದಾರ ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ 8 ಸ್ಥಳ, ಅಜಿಕುರಿ ರಸ್ತೆಯಲ್ಲಿ, ಕನ್ಯಾಡಿ, ನೇತ್ರಾವತಿ ನದಿ ಕಿನಾರೆ ಸೇರಿ ಒಟ್ಟು 13 ಸ್ಥಳಗಳನ್ನು ಶವ ಹೂತ ಜಾಗವಾಗಿ ಸೋಮವಾರ ಗುರುತಿಸಿದ್ದಾನೆ. ಈ ಸ್ಥಳಗಳಲ್ಲಿ ಕಾರ್ಕಳ ಎಎನ್‌ಎಫ್‌ನ 30 ಸಿಬ್ಬಂದಿ ಸಶಸ್ತ್ರಧಾರಿಗಳಾಗಿ ರಾತ್ರಿ-ಹಗಲು ಪಾಳಿಯಲ್ಲಿ ಬಂದೋಬಸ್ತ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಸ್ಥಳಗಳಲ್ಲಿ ಅಗೆಯುವ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''