ಬೆಳೆ‌ಹಾನಿ ಪರಿಹಾರ ವಿತರಣೆಯಲ್ಲಿ ವಿಳಂಬ ಬೇಡ: ಸಂಸದ ಶೆಟ್ಟರ

KannadaprabhaNewsNetwork |  
Published : Sep 21, 2024, 01:57 AM IST
ಸಂಸದ ಜಗದೀಶ ಶೆಟ್ಟರ್‌ ಅವರು 2024-25ನೇ ಸಾಲಿನ ತ್ರೈಮಾಸಿಕ ಜಿಲ್ಲಾ‌‌ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರತಿಯೊಬ್ಬ ರೈತರಿಗೂ ಬೆಳೆ‌ ಪರಿಹಾರ ಒದಗಿಸಬೇಕು.‌ ಜಂಟಿ ಸಮೀಕ್ಷೆಯಲ್ಲಿ ದಾಖಲಾಗದೇ ಇರುವ ರೈತರನ್ನು ಗುರುತಿಸಿ ಅವರಿಗೂ ಸಹ ಪರಿಹಾರ ಒದಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರತಿಯೊಬ್ಬ ರೈತರಿಗೂ ಬೆಳೆ‌ ಪರಿಹಾರ ಒದಗಿಸಬೇಕು.‌ ಜಂಟಿ ಸಮೀಕ್ಷೆಯಲ್ಲಿ ದಾಖಲಾಗದೇ ಇರುವ ರೈತರನ್ನು ಗುರುತಿಸಿ ಅವರಿಗೂ ಸಹ ಪರಿಹಾರ ಒದಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ 2024-25ನೇ ಸಾಲಿನ ತ್ರೈಮಾಸಿಕ ಜಿಲ್ಲಾ‌‌ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳೆ ಪರಿಹಾರ ಕಾರ್ಯದಲ್ಲಿ ಜಂಟಿ‌ ಸಮೀಕ್ಷೆ‌ ಕಾರ್ಯ ಪೂರ್ಣಗೊಳಿಸಿ ಆದಷ್ಟು ಬೇಗ ರೈತರಿಗೆ ಬೆಳೆ ಪರಿಹಾರ ಒದಗಿಸಲು ಕ್ರಮ‌ ಜರುಗಿಸಿ, ನೆರೆ‌ ಹಾವಳಿಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆಗಳ ದುರಸ್ತಿ‌ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ‌ ಸೂಚಿಸಿದರು.

ಬೆಂಬಲ‌ ಬೆಲೆ ಯೋಜನೆಯಡಿ ಗುರುತಿಸಲಾದ ಬೆಳೆಗಳ‌‌‌‌ ಖರೀದಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಬೇಕು. ಮಹಾನಗರ ಪಾಲಿಕೆಯ ಅಮೃತ ಯೋಜನೆ 1 ಹಾಗೂ 2ರ ಯೋಜನೆಯಡಿ ನಿವೇಶನ ಹಂಚಿಕೆ ಕುರಿತು ಸಲ್ಲಿಸಲಾಗುವ ಪ್ರಸ್ತಾವನೆಗಳನ್ನು‌ ಮಾರ್ಗಸೂಚಿಗಳನ್ವಯ ಸಿದ್ಧಪಡಿಸಿ ಕಳುಹಿಸಿಕೊಡುವುದರ ಜೊತೆಗೆ ಪ್ರಸ್ತಾವನೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯತೆ ಸಾಧಿಸುವಂತೆ ತಿಳಿಸಿದರು.

ವಸತಿ ಯೋಜನೆಯಡಿ‌ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸೂಕ್ತವಾದ ತಿಳಿವಳಿಕೆ ನೀಡಬೇಕು. ಪ್ರಧಾನ‌ಮಂತ್ರಿ ಆವಾಸ ಯೋಜನೆಯಡಿ ನಿರ್ಮಿಸುತ್ತಿರುವ ಜಿ+3 ಮಾದರಿ ಮನೆಗಳ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭಿಸಬೇಕು. ಸರ್ಕಾರದಿಂದ ಜಾರಿಯಲ್ಲಿರುವ ವಿವಿಧ ವಸತಿ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಿ ಬಡಜನರಿಗೆ ಅನುಕೂಲ ಮಾಡಿಕೊಡಬೇಕು.

ಬೆಳಗಾವಿಯ ತರಕಾರಿ ಹಾಗೂ ಹಣ್ಣುಗಳಿಗೆ ತುಂಬಾ ಬೇಡಿಕೆ ಇರುವ ಹಿನ್ನೆಲೆಯಲ್ಲಿ‌ ಜಿಲ್ಲೆಯ ರೈತರು ಹಾಗೂ ವರ್ತಕರೊಂದಿಗೆ ಸಭೆ ಜರುಗಿಸಿ ಬೆಳಗಾವಿಯ ತರಕಾರಿ ಹಾಗೂ ಹಣ್ಣುಗಳ ಮಾರುಕಟ್ಟೆ ವಿಸ್ತರಿಸಲು ಗಮನ ಹರಿಸಬೇಕು. ಜೊತೆಗೆ ಶೀತಲ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡುವುದರ ಜೊತೆಗೆ ಜಿಲ್ಲೆಯಲ್ಲಿ ಕೃಷಿ‌ ಹಾಗೂ ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಜರುಗಿಸಿ ಜಿಲ್ಲೆಯ ಪ್ರಮುಖ ಕೃಷಿ, ತೋಟಗಾರಿಕೆ ಬೆಳೆ, ಹೂವು ಹಾಗೂ ಹಣ್ಣುಗಳ ಉತ್ಪಾದನೆಯ ಅಂಕಿ-ಅಂಶ ನೀಡಲು ತಿಳಿಸಿದರು.

ಜಿಲ್ಲೆಯನ್ನು ಶೈಕ್ಷಣಿಕ, ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಪ್ರಯತ್ನ ಮಾಡಬೇಕು. ಪ್ರಸಕ್ತ‌ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ‌ ಫಲಿತಾಂಶ ಸುಧಾರಣೆಗೆ ಗಮನ ಹರಿಸಬೇಕು. ಕಿತ್ತೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ ಜಿಲ್ಲೆಯಲ್ಲಿ ಕೈಗಾರಿಕೊದ್ಯಮ ಉತ್ತೇಜಿಸಲು ಕ್ರಮ ಕೈಗೊಳ್ಳುವಂತೆ ಶೆಟ್ಟರ ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಕೆಲ‌ ಪ್ರದೇಶಗಳಲ್ಲಿ ಗೋಶಾಲೆ ತೆರೆಯದೇ, ಜಾನುವಾರುಗಳಿಗೆ ಮೇವು ಪೂರೈಕೆ ಮಾಡದಿರುವ‌ ಕುರಿತು ದೂರು ಬಂದಿರುವ‌ ಕುರಿತು ಸಭೆಯ ಗಮನಕ್ಕೆ ತಂದರು. ಗೋಕಾಕ ಹಾಗೂ ಮೂಡಲಗಿ‌ ಭಾಗದಲ್ಲಿ ಸೋಯಾಬಿನ್ ಖರೀದಿ ಕೇಂದ್ರ ಪ್ರಾರಂಭಿಸಲು ತಿಳಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರನ್ನು ಭರ್ತಿ‌ ಮಾಡಬೇಕು. ಹೊಸದಾಗಿ ನಿರ್ಮಾಣಗೊಂಡ ಸರ್ಕಾರಿ ಆಸ್ಪತ್ರೆ‌ಗಳ ಉದ್ಘಾಟನೆಗೂ ಮುಂಚೆಯೇ ಆಸ್ಪತ್ರೆಗೆ ಬೇಕಾದ ವೈದ್ಯರು, ಸಿಬ್ಬಂದಿ ನೇಮಕ ಹಾಗೂ ಆಸ್ಪತ್ರೆಗೆ ಬೇಕಾದ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಮಾತನಾಡಿ, ಅತಿವೃಷ್ಟಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಪೂರ್ಣಗೊಂಡಿದ್ದು, ಪರಿಹಾರ ಪಡೆಯುವವರ ವಿವರಗಳನ್ನು ಆಯಾ ಗ್ರಾಪಂ ಹಾಗೂ ಕೃಷಿ ಕೇಂದ್ರಗಳಲ್ಲಿ ಪ್ರಚುರಪಡಿಸಿದ್ದು, ಈ ಕುರಿತು ಆಕ್ಷೇಪಣೆಗಳಿದ್ದರೆ ಸರಿಪಡಿಸಿ ಅಂತಿಮ‌ ಯಾದಿ ತಯಾರಿಸಲಾಗುವುದು. ರೈತರಿಗೆ ಶೀಘ್ರವೇ ಪರಿಹಾರ‌ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವಸರ್ಗಾಯಿಸಲಾಗುವುದು ಎಂದು ಭರವಸೆ ನೀಡಿದ ಅವರು, ನೆರೆ‌ ಹಾವಳಿಯಿಂದ‌ ಹಾನಿಗೊಳಗಾದ ರಸ್ತೆ, ಶಾಲಾ, ಅಂಗನವಾಡಿ ಕಟ್ಟಡಗಳ ದುರಸ್ತಿಗೆ ವಿಪತ್ತು ನಿರ್ವಹಣೆ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಅನುದಾನ ಬಿಡುಗಡೆ ಮಾಡಿ ದುರಸ್ತಿಗೆ ಕ್ರಮ‌ ವಹಿಸಲಾಗುವುದು ಎಂದರು.

ಜಿಪಂ ಸಿಇಒ ರಾಹುಲ ಶಿಂಧೆ ಸಭೆ ನಿರ್ವಹಿಸಿದರು. ಸಂಸೆದೆ ಪ್ರಿಯಾಂಕಾ‌ ಜಾರಕಿಹೊಳಿ, ಶಾಸಕರಾದ ರಾಜು (ಆಸೀಫ್) ಸೇಠ್, ವಿಠ್ಠಲ ಹಲಗೇಕರ‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಶಿಷ್ಟಾಚಾರ ಉಲ್ಲಂಘಿಸಿದರೆ ಕ್ರಮ:

ಕೇಂದ್ರ ಪುರಸ್ಕೃತ ಯೋಜನೆಗಳ ಯಾವುದೇ ಕಾಮಗಾರಿಗಳ‌ ಪ್ರಾರಂಭಕ್ಕೂ ಮುನ್ನ ಸಂಬಂಧಿಸಿದ ಲೋಕಸಭಾ ಸದಸ್ಯರ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಂಸದ ಜಗದೀಶ ಶೆಟ್ಟರ ಅವರು, ಶಿಷ್ಟಾಚಾರ ಉಲ್ಲಂಘನೆ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೇಂದ್ರ ಸರ್ಕಾರದ ಜೆಜೆಎಂ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ, ಉದ್ಘಾಟನೆಗೆ ಲೋಕಸಭಾ ಸದಸ್ಯರನ್ನು ಏಕೆ

ಆಹ್ವಾನಿಸುತ್ತಿಲ್ಲ. ನಿಯಮಗಳ ಪ್ರಕಾರ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಆದರೆ, ಅಧಿಕಾರಿಗಳು ಅದನ್ನು ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಗುರಿ ಆಗಬೇಕಾಗುತ್ತದೆ. ಅಧಿಕಾರಿಗಳು ಸಭೆಗೆ ಬರುವುದಕ್ಕೂ‌ ಮುಂಚೆ ತಮ್ಮ ಇಲಾಖೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ