ಸರ್ಕಾರಕ್ಕೆ ವಿಶೇಷ ಪ್ಯಾಕೇಜ್ ಬೇಡಿಕೆ ಸಲ್ಲಿಸಿಲ್ಲ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

KannadaprabhaNewsNetwork |  
Published : Jul 29, 2026, 01:30 AM IST
ಪೊಟೋ: 28ಎಸ್‌ಎಂಜಿಕೆಪಿ07ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ  ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿದರು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಈ ವರೆಗೆ ಶೇ.44ರಷ್ಟು ಮಳೆಯ ಕೊರತೆ ಎದುರಾಗಿದೆ. ಆದರೆ, ವಿಶೇಷ ಪ್ಯಾಕೇಜ್ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಈ ವರೆಗೆ ಶೇ.44ರಷ್ಟು ಮಳೆಯ ಕೊರತೆ ಎದುರಾಗಿದೆ. ಆದರೆ, ವಿಶೇಷ ಪ್ಯಾಕೇಜ್ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಮೆಕ್ಕೆಜೋಳ ಮತ್ತು ಭತ್ತ ಪ್ರಮುಖ ಬೆಳೆಯಾಗಿದೆ. ಕೃಷಿ ಚಟುವಟಿಕೆಯಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ.28ರಷ್ಟು ಬಿತ್ತನೆಯಾಗಿದೆ. ಆಗಸ್ಟ್ ಅಂತ್ಯದವರೆಗೆ ಬಿತ್ತನೆಗೆ ಅವಕಾಶ ಇರುವುದರಿಂದ ಹಾಲಿ ಮಳೆಯ ಪ್ರಮಾಣ ಕಡಿಮೆಯಿದ್ದರೂ ರೈತರು ಆತಂಕಗೊಳ್ಳುವುದು ಬೇಡ. ನಿರಂತರವಾಗಿ ಮಳೆಯಾಗದಿದ್ದರೂ ಆಗಾಗ ಮಳೆಯಾಗುತ್ತಿರುವುದರಿಂದ ಇನ್ನು ಮುಂದೆ ಮಳೆ ಬರುವ ಆಶಾವಾದ ಇದೆ. ಜುಲೈ 25ರಂದು ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರು ವಿಭಾಗದ ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಈ ಭಾಗದ ಜನಪ್ರತಿನಿಧಿಗಳ ಸಭೆ ಕರೆದು, ಮಳೆ, ಬರ ಕುರಿತು ಚರ್ಚಿಸಿದ್ದಾರೆ. ಅವರಿಗೆ ಜಿಲ್ಲೆಯ ವಸ್ತು ಸ್ಥಿತಿಯನ್ನು ತಿಳಿಸಲಾಗಿದೆ ಎಂದರು.

ಮಳೆ ಅಭಾವದ ಕಾರಣ ಮೆಕ್ಕೆಜೋಳ ಸರಿಯಾಗಿ ಮೊಳಕೆ ಬಂದಿಲ್ಲ. ಆದರೂ ಆ ಮಟ್ಟಿಗೆ ಬೆಳೆಹಾನಿಯಾಗಿಲ್ಲ. ಶಿಕಾರಿಪುರ, ಸೊರಬ ತಾಲೂಕುಗಳಿಗೆ ಭೇಟಿನೀಡಿ, ಮಳೆ, ಬೆಳೆಯ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದೇನೆ. ಮಳೆಯ ಅಭಾವದಿಂದ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದ ಅವರು, ರಸಗೊಬ್ಬರದ ದಾಸ್ತಾನು ಸಾಕಷ್ಟಿದೆ. ರೈತರಿಗೆ ಮುಂಗಾರಿನ ಕೃಷಿಗೆ ರಸಗೊಬ್ಬರದ ಕೊರತೆ ಆಗುವುದಿಲ್ಲ ಎಂದರು.

ಜಿಲ್ಲೆಯಲ್ಲಿ 280 ಮಳೆಮಾಪನಗಳಿದ್ದು ಅವುಗಳಲ್ಲಿ 208 ಮಳೆಮಾಪನಗಳು ಕಾರ್ಯನಿರ್ವಹಿಸುತ್ತಿಲ್ಲ. ಕೇವಲ 72 ಮಾತ್ರ ಕೆಲಸ ನಿರ್ವಹಿಸುತ್ತಿವೆ. 185 ಮಳೆಮಾಪನಗಳನ್ನು ಸರಿಪಡಿಸಬೇಕಾಗಿದೆ. ಮಳೆಮಾಪನ ತಪ್ಪಾಗಿ ದಾಖಲಾಗಿದ್ದರಿಂದ ರೈತರಿಗೆ ತೊಂದರೆಯಾಗಿದೆ. ವಿಮಾ ಕಂಪನಿಗಳ ಜೊತೆ ಪರಿಹಾರ ಕಾರ್ಯಕ್ಕೆ ಮಾತುಕತೆ ನಡೆಸಲಾಗಿದೆ. ಶೇ.33ಕ್ಕೂ ಹೆಚ್ಚಿನ ಭೂಪ್ರದೇಶದ ಜನರಿಗೆ ಬೆಳೆಹಾನಿ ವಿಮೆ ನೀಡಬೇಕಾಗಿದೆ. ಹೆಕ್ಟೇರ್‌ಗೆ 22500 ರು. ಪರಿಹಾರ ನೀಡಲು ನಿಯಮದಲ್ಲಿ ಅವಕಾಶವಿದೆ. ಬೆಳೆವಿಮೆ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಜಿಲ್ಲೆಯ ಸೊರಬ ತಾಲೂಕಿನ ಒಂದು ಗ್ರಾಮದಲ್ಲಿನ ನಿವಾಸಿಗಳಿಗೆ ಟ್ಯಾಂಕರ್‌ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 37 ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಅಲ್ಲಿ ಕೊಳವೆಬಾವಿಗಳ ಮೂಲಕ ಬಾಡಿಗೆ ಆಧಾರದ ಮೇಲೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಅಭಿಷೇಕ್ ಇದ್ದರು.

ಜಿಲ್ಲೆಯಲ್ಲಿ ಆ.8ರವರೆಗೆ ಎ್‌ಐಆರ್‌ ಪ್ರಕ್ರಿಯೆ ಅವಧಿ ವಿಸ್ತರಣೆ

ಶಿವಮೊಗ್ಗ: ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಅವಧಿಯನ್ನು ಆಗಸ್ಟ್ ೮ರವರೆಗೆ ವಿಸ್ತರಿಸಿದ್ದು, ಅರ್ಹ ಮತದಾರರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಽಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.8ರಂದು ಕೊನೆಯ ದಿನದವರೆಗೂ ಬಿಎಲ್‌ಒಗಳು ಮನೆಮನೆ ಭೇಟಿಗೆ ನೀಡಿ ಮಾಹಿತಿ ಸಂಗ್ರಹಿಸುವರು. ಆ.17ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ನಂತರ ಸೆಪ್ಟೆಂಬರ್‌ 16 ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಧಿ ಇರುತ್ತದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಅಕ್ಟೋಬರ್ 15 ರೊಳಗಾಗಿ ವಿಲೇವಾರಿ ಮಾಡಲಾಗುವುದು. ಅಕ್ಟೋಬರ್ 19 ರಂದು ಮತದಾರರ ಪಟ್ಟಿಯ ಅಂತಿಮ ಪಟ್ಟಿ ಪ್ರಕಟಗೊಳ್ಳಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 15,19,459 ಅರ್ಹ ಮತದಾರರಿದ್ದು, ಈ ಪೈಕಿ 12,63,844 ಮತದಾರರನ್ನು ಡಿಜಿಟಲೀಕರಿಸಿ ಶೇ.85.15 ರಷ್ಟು ಪ್ರಗತಿ ಸಾಧಿಸಲಾಗಿದೆ. ಇವರಲ್ಲಿ 6196 ಮತದಾರರು ಆನ್‌ಲೈನ್‌ಮೂಲಕ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಭಾಗವಹಿಸಿದ್ದಾರೆ. ಇನ್ನೂ 69603 ಮಂದಿ ಮತದಾರರು ನೋಂದಣಿ ಕಾರ್ಯದಲ್ಲಿ ಭಾಗವಹಿಸಿರುವುದರಿಂದ ಹಿಂದುಳಿದಿದ್ದಾರೆ. ಅವರನ್ನು ಸದರಿ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿತರಾದ 1793 ಮತಗಟ್ಟೆ ಅಧಿಕಾರಿಗಳು ಮತದಾರರ ಮನೆಮನೆಗೆ ತೆರಳಿ ಅವರಿಂದ ಮಾಹಿತಿ ಪಡೆದು ಅಪ್‌ಲೋಡ್‌ಮಾಡಲಿದ್ದಾರೆ ಎಂದರು.

ಮತದಾರರ ಪಟ್ಟಿಯಲ್ಲಿ ಗೈರಾಗಿರುವವರು, ಮರಣ ಹೊಂದಿದವರು, ಸ್ಥಳಾಂತರಗೊಂಡಿರುವ ಕುಟುಂಬಗಳು ಹಾಗೂ ಎರೆಡೆರೆಡು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಉಳಿಸಿಕೊಂಡಿರುವವರು ಸೇರಿದಂತೆ ಒಟ್ಟು 156012 ಜನರನ್ನು ಗುರುತಿಸಲಾಗಿದೆ. ಆ ಪೈಕಿ 43845 ಮತದಾರರು ಮರಣ ಹೊಂದಿರುವುದನ್ನು ಗುರುತಿಸಲಾಗಿದೆ. ಗುರುತಿಸಲಾಗದ ಅಥವಾ ಗೈರಾಗಿರುವ 23,738 ಮಂದಿಯನ್ನು ಗುರುತಿಸಲಾಗಿದೆ. ಜಿಲ್ಲೆಯ ಒಟ್ಟು ಮತದಾರರಲ್ಲಿ 72,544 ಮತದಾರರು ಸ್ಥಳಾಂತರಗೊಂಡಿರುವುದನ್ನು ಗುರುತಿಸಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್‌ ಮತ್ತು ಚುನಾವಣಾ ತಹಶೀಲ್ದಾರ್ ಮಂಜುಳಾ ಹೆಗಡಾಳ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ಗ್ರಾ.ಪಂನಲ್ಲಿ ಅರ್ಹ ಮೂವರು ಗೃಹಲಕ್ಷ್ಮಿಯರಿಗೆ ಸನ್ಮಾನ: ಎಲ್.ಪಿ. ಪ್ರಕಾಶ್‌ಗೌಡ
ಸೌಲಭ್ಯ ವಂಚಿತರಿಗೆ ನೆರವಾಗುವ ದೊಡ್ಡ ಸಂಸ್ಥೆ ರೋಟರಿ: ಅಲೆನ್ ವಿನಯ್ ಲಿವಿಸ್