ಕಾಂಗ್ರೆಸ್‌ನಲ್ಲಿ ಅಸಮಾಧಾನವಿಲ್ಲ: ಡಿಕೆಶಿ

KannadaprabhaNewsNetwork | Published : Nov 4, 2023 12:30 AM

ಸಾರಾಂಶ

ಬಿಜೆಪಿಯಲ್ಲೇ ಅಸಮಾಧಾನವಿದೆ. ದೇಶ ಹಾಗೂ ರಾಜ್ಯದ ಇತಿಹಾಸದಲ್ಲೇ ಸರ್ಕಾರ ರಚನೆಯಾಗಿ ಐದಾರು ತಿಂಗಳಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದಿರುವುದು ಇದೇ ಮೊದಲು. ವಿಪಕ್ಷ ನಾಯಕನನ್ನಾಗಿ ಮಾಡುವ ಸಾಮರ್ಥ್ಯ ಬಿಜೆಪಿಗಿಲ್ಲ. ಈಗ ನೋಡಿದರೆ ನಮ್ಮಲ್ಲಿ ಅಸಮಾಧಾನವಿದೆ ಎಂದು ಹೇಳುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಬಗೆಯ ಅಸಮಾಧಾನವಿಲ್ಲ. ಅದು ಏನಿದ್ದರೂ ಬಿಜೆಪಿಯಲ್ಲೇ ಇದೆ. ಅದಕ್ಕಾಗಿ ಅವರಿಗೆ ಈವರೆಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಎಲ್ಲಿ ಅಸಮಾಧಾನವಿದೆ ತಿಳಿಸಿ ಎಂದು ಮರುಪ್ರಶ್ನಿಸಿದರು. ಹಾಗೆ ನೋಡಿದರೆ ಬಿಜೆಪಿಯಲ್ಲೇ ಅಸಮಾಧಾನವಿದೆ. ದೇಶ ಹಾಗೂ ರಾಜ್ಯದ ಇತಿಹಾಸದಲ್ಲೇ ಸರ್ಕಾರ ರಚನೆಯಾಗಿ ಐದಾರು ತಿಂಗಳಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದಿರುವುದು ಇದೇ ಮೊದಲು. ವಿಪಕ್ಷ ನಾಯಕನನ್ನಾಗಿ ಮಾಡುವ ಸಾಮರ್ಥ್ಯ ಬಿಜೆಪಿಗಿಲ್ಲ. ಈಗ ನೋಡಿದರೆ ನಮ್ಮಲ್ಲಿ ಅಸಮಾಧಾನವಿದೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಸಂಭಾವ್ಯ ಪಟ್ಟಿ; ಲೋಕಸಭೆ ಚುನಾವಣೆಗೆ ಪಕ್ಷ ಸಿದ್ಧತೆ ನಡೆಸಿದೆ. ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಈಗಾಗಲೇ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿತ್ತು ಎಂದು ನುಡಿದ ಅವರು, ಶೇ.75ರಷ್ಟು ಕ್ಷೇತ್ರಗಳಲ್ಲಿ ವೀಕ್ಷಕರು ಕಾರ್ಯಕರ್ತರನ್ನು ಭೇಟಿ ಆಗಿ ಚರ್ಚೆ ನಡೆಸಿದ್ದಾರೆ. ಅಭ್ಯರ್ಥಿಗಳ ವರದಿ ಕೂಡ ಸಿದ್ಧಪಡಿಸಿದ್ದಾರೆ. ವರದಿ ಕೆಪಿಸಿಸಿಗೆ ತಲುಪಿಲ್ಲವಷ್ಟೇ. ವರಿಷ್ಠರು ಕೆಲ ಸಲಹೆ ನೀಡಿದ್ದಾರಷ್ಟೇ ಎಂದರು. ಒಟ್ಟಿನಲ್ಲಿ ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ನುಡಿದರು. ಕರ್ನಾಟಕಕ್ಕೆ 50 ವರ್ಷ. ಇಡೀ ವರ್ಷ ಹಬ್ಬದ ಆಚರಣೆಗೆ ತೀರ್ಮಾನ ಮಾಡಿದ್ದೇವೆ. ವಿಜಯನಗರ ನಾಡು ಹಂಪಿಯಿಂದ ಜ್ಯೋತಿ ರಥಯಾತ್ರೆ ಶುರುವಾಗಿದೆ. ನಿನ್ನೆ ರಾತ್ರಿ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಭುವನೇಶ್ವರಿ ಭವನವನ್ನು ಕಟ್ಟಿಸಲು ತೀರ್ಮಾನ ಮಾಡಿದ್ದಾರೆ ಎಂದರು. ಬಿಜೆಪಿ ಬರ ಅಧ್ಯಯನ ಪ್ರವಾಸದ ಬಗ್ಗೆ ಕೇಳಿದಾಗ, ಅವರು ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿ. ನಮ್ಮ ಸಚಿವರಾದ ಚೆಲುವರಾಯ ಸ್ವಾಮಿ ಹಾಗೂ ಕೃಷ್ಣಭೈರೇಗೌಡ ಅಧ್ಯಯನ ಮಾಡಿ ಸುಮಾರು 200 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ. ಅವರು ಸುಮ್ಮನೆ ಘೋಷಣೆ ಮಾಡಿದ್ದಾರಾ? ಮಂಡ್ಯ, ಹಾವೇರಿ ಹಾಗೂ ಇತರ ಜಿಲ್ಲೆಗಳಲ್ಲಿ ಪರಿಶೀಲನಾ ಸಭೆ ನಡೆಯುತ್ತಿದೆ ಎಂದು ತಿಳಿಸಿದರು. ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಹೋಗಿದೆ ನಂತರ ಏನಾಯ್ತು ಎಂದು ಕೇಳಿದಾಗ, ನಾವು ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ನಾವು ಸಾವಿರ ಕೋಟಿಯಷ್ಟು ಹಣವನ್ನು ಮೀಸಲು ಇಟ್ಟಿದ್ದೇವೆ ಎಂದು ತಿಳಿಸಿದರು.

Share this article