ಮುಂದಿನ ಬೇಸಿಗೆಗೆ ಭತ್ತದ ನಾಟಿ ಮಾಡಲು ಅನೇಕ ಕಡೆಗಳಲ್ಲಿ ರೈತರು ಭತ್ತದ ಸಸಿ ಬೆಳೆಸಲು ಮುಂದಾಗಿದ್ದಾರೆ.
ಚಂದ್ರು ಕೊಂಚಿಗೇರಿ ಹೂವಿನಹಡಗಲಿ
ತಾಲೂಕಿನ ತುಂಗಭದ್ರಾ ನದಿ ತೀರದ ವ್ಯಾಪ್ತಿಯ ರೈತರು ನದಿ ನೀರನ್ನು ಬಳಕೆ ಮಾಡುವಂತಿಲ್ಲ, ತೀವ್ರವಾದ ಬರಗಾಲದಲ್ಲಿ ಜನ - ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಆಗಬಾರದು ಎಂಬ ಕಾರಣಕ್ಕೆ ಈ ಆದೇಶ ಮಾಡಲಾಗಿದೆ.
ಮುಂಗಾರು ಮಳೆ ಕೊರತೆಯಿಂದ ಜಲಾಶಯಗಳಲ್ಲಿ ಒಳ ಹರಿವು ಶೂನ್ಯವಿದೆ, ನೀರಿನ ಮಟ್ಟ ದಿನೇ ದಿನೇ ಕ್ಷೀಣಿಸುತ್ತಿದೆ. ಈ ಹಿನ್ನೆಲೆ ಜನ - ಜಾನುವಾರು ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗುವ ಹಿನ್ನೆಲೆ ಜಲಾಶಯದ ನೀರನ್ನು ಬಳಸಿ ಬೆಳೆ ಬೆಳೆಯುವಂತಿಲ್ಲ ಎಂದು ಈಗಾಗಲೇ ಜಲ ಸಂಪನ್ಮೂಲ ಇಲಾಖೆ ಹೇಳಿದೆ.
ಇಲ್ಲಿನ ಸಿಂಗಟಾಲೂರು ಬ್ಯಾರೇಜ್‌ನಲ್ಲಿ 507.80 ಮೀಟರ್‌ಗೆ ನೀರು ನಿಲುಗಡೆ ಮಾಡಲಾಗಿದೆ. ಇದರಿಂದ 2.3 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಸದ್ಯ ಸಂಗ್ರಹವಾಗಿರುವ ನೀರು ಕುಡಿಯಲು 4 ತಿಂಗಳಿಗೆ ಮಾತ್ರ ಲಭ್ಯವಾಗಲಿದೆ. ಆದರೆ ಈ ಬಾರಿ ಮಳೆ ಇಲ್ಲದೇ ಮುಂದಿನ 7ರಿಂದ 8 ತಿಂಗಳಿಗೆ ಸಾಕಾಗುಷ್ಟು ನೀರನ್ನು ಉಳಿಸಿಕೊಳ್ಳಬೇಕಿದೆ.
ಈಗಾಗಲೇ ತುಂಗಭದ್ರಾ ನದಿ ತೀರದ ಪ್ರದೇಶದಲ್ಲಿ ಭತ್ತ ಕಟಾವು ಆಗುತ್ತಿದೆ, ಜತೆಗೆ ಮುಂದಿನ ಬೇಸಿಗೆಗೆ ಭತ್ತದ ನಾಟಿ ಮಾಡಲು ಅನೇಕ ಕಡೆಗಳಲ್ಲಿ ರೈತರು ಭತ್ತದ ಸಸಿ ಬೆಳೆಸಲು ಮುಂದಾಗಿದ್ದಾರೆ.
ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಜಿ. ಪರಮೇಶ್ವರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಕೆ. ಪ್ರದೀಪ್ ಕುಮಾರ, ಜೆಸ್ಕಾಂ ಎಇಇ ನಾಗರಾಜ, ಕೃಷಿ ಇಲಾಖೆ ಕಿರಣಕುಮಾರ ಜಂಟಿಯಾಗಿ ಸಿಂಗಟಾಲೂರು ಬ್ಯಾರೇಜ್, ವಿವಿಧ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜತೆಗೆ ಅಕ್ಕಪಕ್ಕದ ರೈತರಿಗೆ ಈ ಬಾರಿ ತಾವು ನದಿ ನೀರು ಬಳಕೆ ಮಾಡಿಕೊಂಡು ಭತ್ತದ ನಾಟಿ ಮಾಡುವಂತಿಲ್ಲ, ಒಂದು ನಾಟಿ ಮಾಡಲು ನದಿ ನೀರು ಪಂಪ್‌ಸೆಟ್ ಮೂಲಕ ಎತ್ತಿದರೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನಚ್ಚರಿಕೆ ಕ್ರಮವಾಗಿ ನದಿ ತೀರದ ರೈತರು, ಈ ಬಾರಿ ನದಿ ನೀರು ಬಳಕೆ ಮಾಡಿಕೊಂಡು ಭತ್ತದ ನಾಟಿ ಮಾಡುವಂತಿಲ್ಲ, ಈ ಕುರಿತು ಹಳ್ಳಿಗಳಲ್ಲಿ ಡಂಗುರ ಸಾರುತ್ತೇವೆ ಎಂದು ಹೂವಿನಹಡಗಲಿ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ತಿಳಿಸಿದ್ದಾರೆ.
ಸಿಂಗಟಾಲೂರು ಬ್ಯಾರೇಜ್‌ಗೆ ಒಳಹರಿವು ಇಲ್ಲ, ಸದ್ಯಕ್ಕೆ 507.80 ಮೀಟರ್‌ಗೆ ನೀರು ನಿಲುಗಡೆ ಮಾಡಿದ್ದು, 2.3 ಟಿಎಂಸಿ ನೀರು ಮಾತ್ರವಿದೆ. ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ, ಈ ನೀರು ಕುಡಿಯಲು 4 ತಿಂಗಳಿಗೆ ಮಾತ್ರ ಸಾಕಾಗಲಿದೆ ಎಂದು ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ಯು.ಎಚ್. ರಾಘವೇಂದ್ರ ತಿಳಿಸಿದ್ದಾರೆ.
ತಾಲೂಕಿನಲ್ಲಿ ಬಹುತೇಕ ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಬವಣೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಆದರಿಂದ ನದಿ ತೀರದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೂವಿನಹಡಗಲಿ ತಾಪಂ ಇಒ ಜಿ.ಪರಮೇಶ್ವರ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.