ಜಂಟಿ ಸರ್ವೆ, ಗಡಿ ಗುರುತು ಮಾಡುವರೆಗೂ ಯಾವುದೇ ಒತ್ತುವರಿ ಭೂಮಿ ತೆರವುಗೊಳಿಸಲ್ಲ: ಶಾಸಕ ಟಿ.ಡಿ.ರಾಜೇಗೌಡ ಸ್ಪಷ್ಟನೆ

KannadaprabhaNewsNetwork |  
Published : Aug 16, 2024, 12:55 AM IST
ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ನರಸಿಂಹರಾಜಪುರ ಅರಣ್ಯ- ಕಂದಾಯ ಭೂಮಿಯ ಗಡಿ ಗುರುತು ಕಾರ್ಯ ಇನ್ನೂ ಮುಗಿದಿಲ್ಲ. ಗಡಿ ಗುರುತು ಆಗುವುವರೆಗೂ ಯಾವುದೇ ಒತ್ತುವರಿ ಜಮೀನು ತೆರವುಗೊಳಿಸುವುದಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಸ್ಪಷ್ಟನೆ ನೀಡಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಅರಣ್ಯ- ಕಂದಾಯ ಭೂಮಿಯ ಗಡಿ ಗುರುತು ಕಾರ್ಯ ಇನ್ನೂ ಮುಗಿದಿಲ್ಲ. ಗಡಿ ಗುರುತು ಆಗುವುವರೆಗೂ ಯಾವುದೇ ಒತ್ತುವರಿ ಜಮೀನು ತೆರವುಗೊಳಿಸುವುದಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಸ್ಪಷ್ಟನೆ ನೀಡಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆಕ್ಷನ್‌ 17 ಕ್ಕೆ ಸಂಬಂಧಪಟ್ಟಂತೆ ಮೀಸಲು ಅರಣ್ಯ ಒತ್ತುವರಿ ಪ್ರಕರಣಗಳು ಎಸಿಎಫ್‌ ನ್ಯಾಯಾಲಯ, ಸಿಸಿಎಫ್‌ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯದಲ್ಲಿದೆ. ಆ ಪ್ರಕರಣದಲ್ಲಿ ನ್ಯಾಯಾಲಯವೇ ತೆರವುಗೊಳಿಸಲು ಆದೇಶ ನೀಡಿದ್ದರೆ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗುವುದು. ಆದರೆ, ಮಾನವೀಯತೆಯಿಂದ ಬೆಳೆ ಕಟಾವು ಆಗುವುವರೆಗೂ ತೆರವು ಗೊಳಿಸಬಾರದು ಎಂದು ಸರ್ಕಾರ ಅರಣ್ಯ ಇಲಾಖೆಗೆ ಸೂಚಿಸಿದೆ. 3 ಎಕರೆ ಒಳಗಿನ ಜಮೀನನ್ನು ತೆರವುಗೊಳಿಸಬಾರದು ಎಂದು ಸರ್ಕಾರ ಸೂಚಿಸಿದೆ. ಅರಣ್ಯ ಒತ್ತುವರಿ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್, ಜಿಲ್ಲೆಯ ಎಲ್ಲಾ ಶಾಸಕರುಗಳ ಸಭೆ ನಡೆಸಿ ಸುಧೀರ್ಘ ಚರ್ಚೆ ನಡೆಸಿದ್ದೇವೆ ಎಂದರು.

ಮೀಸಲು ಅರಣ್ಯ, ಡೀಮ್ಡ್ ಫಾರೆಸ್ಟ್‌, ಸೆಕ್ಷನ್-4 ಅಧಿಸೂಚಿತ ಅರಣ್ಯದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಕೆಲವು ಅರಣ್ಯಾಧಿಕಾರಿಗಳ ತಪ್ಪಿನಿಂದ ಕಂದಾಯ ಭೂಮಿ ಅರಣ್ಯವಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳ ಆದೇಶದಂತೆ ಕಂದಾಯ ಭೂಮಿ ಅರಣ್ಯವಾಗಿದೆ. ಇದನ್ನು ಸರಿಪಡಿಸಲು ಜಂಟಿ ಸರ್ವೆ ಕಾರ್ಯ ಮಾಡಲು ಕಂದಾಯ ಸಚಿವರು ಸೂಚಿಸಿದ್ದರು. ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲೂ 15 ಸರ್ವೆಯರ್ ಕೆಲಸ ಮಾಡುತ್ತಿದ್ದಾರೆ.ಕಂದಾಯ ಹಾಗೂ ಅರಣ್ಯ ಭೂಮಿಯ ಗಡಿ ಗರುತು ಆಗಬೇಕಾಗಿದೆ. ಇದಲ್ಲದೆ ಫಾರಂ ನಂ.50,53,57 ರಲ್ಲಿ ರೈತರು ಅರ್ಜಿ ಹಾಕಿದ್ದಾರೆ. ಇದು ಇನ್ನೂ ತೀರ್ಮಾನವಾಗಿಲ್ಲ. 94 ಸಿ ಹಾಗೂ 94 ಸಿಸಿ ಅಡಿ ಅರ್ಜಿ ಹಾಕಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿದವರೂ ಇದ್ದಾರೆ. ಅದೂ ಬಗೆ ಹರಿಯಬೇಕಾಗಿದೆ. 1978 ರ ಹಿಂದೆ ಒತ್ತುವರಿ ಮಾಡಿದವರ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಇದೆಲ್ಲಾ ತೀರ್ಮಾನವಾಗುವುವರೆಗೂ ರೈತರ ಯಾವುದೇ ಜಮೀನು ತೆರವುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

2015 ರ ನಂತರ ಅನೇಕ ಕಡೆ ಗುಡ್ಡದ ಮೇಲೆ, ಗುಡ್ಡದ ಇಳಿಜಾರಿನಲ್ಲಿ ರೆಸಾರ್ಟ್‌ ಕಟ್ಟಿದ್ದಾರೆ. ಕಟ್ಟಡ ನಿರ್ಮಾಣವಾಗಿದೆ. ಇದರಿಂದ ಅನೇಕ ಕಡೆ ಗುಡ್ಡ ಕುಸಿದು ಜೀವಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಗುಡ್ಡ ಕುಸಿದಿದೆ. ಮಲೆನಾಡು ಭಾಗದಲ್ಲೂ ಗುಡ್ಡ ಕುಸಿದಿದೆ. 2015 ರ ನಂತರದ ಅರಣ್ಯ ಒತ್ತುವರಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

ಅರಣ್ಯ ಒತ್ತುವರಿಗೆ ಸಂಬಂಧಪಟ್ಟಂತೆ ಅರ್ಜಿ ಸ್ವೀಕಾರ ಮಾಡಲು ಅರಣ್ಯ ಅಧಿಕಾರಿಯೊಬ್ಬರನ್ನು ಸರ್ಕಾರ ನೇಮಿಸಿದ್ದು ಕಡೂರಿನಲ್ಲಿ ಅ‍ವರ ಕಚೇರಿ ಇತ್ತು. ಶೃಂಗೇರಿ ಕ್ಷೇತ್ರದ ರೈತರಿಗೆ ಅನುಕೂಲವಾಗಲಿ ಎಂದು ಕೊಪ್ಪ ಡಿಎಫ್‌ ಓ ಕಚೇರಿಯಲ್ಲೇ ಒಬ್ಬ ಅಧಿಕಾರಿಯನ್ನು ನೇಮಿಸಿ ದ್ದೇವೆ. ನಾನು ಶಾಸಕನಾದ ಮೇಲೆ ಯಾವುದೇ ರೈತರ ಒತ್ತುವರಿ ಭೂಮಿ ತೆರವುಗೊಳಿಸಲು ಆದೇಶ ನೀಡಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಸೃಷ್ಠಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಗೇರ್‌ ಬೈಲು ನಟರಾಜ, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಕೆ.ಎಂ.ಸುಂದರೇಶ್‌, ಇ.ಸಿ.ಜೋಯಿ,ದೇವಂತರಾಜ್‌,ಸಾಜು, ಎಂ.ಆರ್‌.ರವಿಶಂಕರ್‌,ಮನು,ಕೆ.ಎ.ಅಬೂಬಕರ್‌, ಜುಬೇದ, ಮುನಾವರ್‌ ಪಾಷಾ, ಶಿವಣ್ಣ,ಸುರೈಯಾ ಭಾನು ಮತ್ತಿತರರು ಇದ್ದರು.--- ಬಾಕ್ಸ್‌ ---ಹಿಂಸಾತ್ಮಕ ಪ್ರತಿಭಟನೆ ಮಾಡಬಹುದು: ರಾಜೇಗೌಡಆಗಸ್ಟ್‌ 17 ರ ಶನಿವಾರ ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಬಂದ್‌ ಕರೆ ಕೊಟ್ಟಿದ್ದಾರೆ. ಈ ಪ್ರತಿಭಟನೆ ಪಕ್ಷಾತೀತ ವಾಗಿ ನಡೆಯಲಿದ್ದು ಸಂವಿಧಾನದಲ್ಲೇ ಪ್ರತಿಭಟನೆಗೆ ಹಕ್ಕಿದೆ. ಈ ಪ್ರತಿಭಟನೆಗೆ ನನ್ನ ಬೆಂಬಲವಿದೆ.ವಆದರೆ, ನಾನು ಈ ಮೊದಲೇ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ಹೋಗಬೇಕಾಗಿರುವುದರಿಂದ ನಾನು ಭಾಗವಹಿಸುವುದಿಲ್ಲ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸುತ್ತಾರೆ. ಬಲವಂತದ ಬಂದ್‌ ಮಾಡಬಾರದು. ಹಿಂಸಾತ್ಮಕ ಪ್ರತಿಭಟನೆ ಮಾಡಬಹುದು ಎಂದರು.

--

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ