4,134 ಸರ್ಕಾರಿ ಶಾಲೆಯಲ್ಲಿ ಆಂಗ್ಲಮಾಧ್ಯಮ ಬೇಡ: ಬಿಳಿಮಲೆ ಪತ್ರ

KannadaprabhaNewsNetwork |  
Published : Jul 04, 2025, 11:53 PM ISTUpdated : Jul 05, 2025, 10:41 AM IST
Chamarajanagar Govt School

ಸಾರಾಂಶ

ರಾಜ್ಯಾದ್ಯಂತ 4134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹೊಸದಾಗಿ ಆಂಗ್ಲ ಮಾಧ್ಯಮ ತರಗತಿಗಳನ್ನು ತೆರೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಮಾತೃಭಾಷೆಯನ್ನು ಮೂಲೆಗುಂಪಾಗಿಸುವ ಕಾರ್ಯಕ್ಕೆ ಸಾಕ್ಷಿಯಾಗ ಬಯಸುವುದಿಲ್ಲ ಎಂದು ಹೇಳಿದೆ.

 ಬೆಂಗಳೂರು :  ರಾಜ್ಯಾದ್ಯಂತ 4134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹೊಸದಾಗಿ ಆಂಗ್ಲ ಮಾಧ್ಯಮ ತರಗತಿಗಳನ್ನು ತೆರೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಮಾತೃಭಾಷೆಯನ್ನು ಮೂಲೆಗುಂಪಾಗಿಸುವ ಕಾರ್ಯಕ್ಕೆ ಸಾಕ್ಷಿಯಾಗ ಬಯಸುವುದಿಲ್ಲ ಎಂದು ಹೇಳಿದೆ.

ಶುಕ್ರವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ। ಶಾಲಿನಿ ರಜನೀಶ್ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಡಾ। ಪುರುಷೋತ್ತಮ ಬಿಳಿಮಲೆ ಅವರು ಪತ್ರ ಬರೆದಿದ್ದಾರೆ.

ಸಂವಹನಕ್ಕಾಗಿ ಬೇರೆ ಭಾಷೆಗಳನ್ನು ಕಲಿಸುವುದು ತಪ್ಪಲ್ಲ ಎನ್ನುತ್ತಲೇ ಮಾತೃಭಾಷೆಯನ್ನೇ ಮೂಲೆಗುಂಪು ಮಾಡುವ ಕಾರ್ಯ ನಡೆಯುತ್ತಿದೆ. ಪ್ರಾಧಿಕಾರ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

2013-18ರಲ್ಲಿ ಸರ್ಕಾರವು ಮಕ್ಕಳ ಹಕ್ಕು ಕಾಯ್ದೆಯ ಪ್ರಕರಣ 29 (ಎಫ್)ಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಉಭಯ ಸದನಗಳಲ್ಲಿ ಮಂಡಿಸಿ ರಾಷ್ಟ್ರಪತಿಯವರ ಅಂಗೀಕಾರಕ್ಕೆ ಕಳುಹಿಸಲಾಗಿದೆ. ಅದರಂತೆ ಕನಿಷ್ಠ 8ನೇ ತರಗತಿವರೆಗೆ ಶಿಕ್ಷಣ ಮಾಧ್ಯಮ ಮಾತೃಭಾಷೆಯಲ್ಲಿ ಇರಬೇಕು. ಈ ಆಶಯಕ್ಕೆ ವಿರುದ್ಧವಾಗಿ ಸರ್ಕಾರವು ಆಂಗ್ಲ ಭಾಷಾ ಶಾಲೆಗಳನ್ನು ತೆರೆಯುವ ತೀರ್ಮಾನ ತೆಗೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ಪ್ರಾಧಿಕಾರ ರಚಿಸಿ:

ಕನ್ನಡ ಅಭಿವೃದ್ಧಿ ಪ್ರಾಧಿಕಾರ 2017ರಲ್ಲಿ ಸಲ್ಲಿಸಿರುವ ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲು ರೂಪಿಸಿರುವ ಕನ್ನಡ ಕಲಿಕಾ ಅಧಿನಿಯಮ 2015 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಅಲ್ಲದೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ಒಂದು ಪ್ರತ್ಯೇಕ ಪ್ರಾಧಿಕಾರ ರಚಿಸಿ ಸರ್ಕಾರ ಈ ಶಾಲೆಗಳ ಬೆಂಬಲಕ್ಕೆ ನಿಲ್ಲಬೇಕೆಂದು ಆಗ್ರಹಿಸಿದ್ದಾರೆ.

‘ಕನ್ನಡ’ ಅವಹೇಳನಕಾರಿ ಹೇಳಿಕೆ ನೀಡದಂತೆ ಕಮಲ್‌ಗೆ ನಿರ್ಬಂಧ:ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡದಂತೆ ನಟ ಕಮಲಹಾಸನ್‌ಗೆ ನಿರ್ದೇಶಿಸಿ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ನಿರ್ಬಂಧಾಜ್ಞೆ ಹೊರಡಿಸಿದೆ.

ಕನ್ನಡದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದರಿಂದ ಕಮಲ್‌ ಹಾಸನ್‌ಗೆ ನಿರ್ಬಂಧ ಹೇರಬೇಕು ಎಂದು ಕೋರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಸಲ್ಲಿಸಿರುವ ಅಸಲು ದಾವೆಯ ವಿಚಾರಣೆ ನಡೆಸಿದ ನಗರದ 31ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಏಕಪಕ್ಷೀಯ ಆದೇಶ ಹೊರಡಿಸಿದೆ.

ಕನ್ನಡ ಭಾಷೆಯ ಮೇಲೆ ಭಾಷಾಶಾಸ್ತ್ರಜ್ಞರ ಶ್ರೇಷ್ಠತೆ ಪ್ರತಿಪಾದಿಸುವ ಯಾವುದೇ ಹೇಳಿಕೆ ಅಥವಾ ಟೀಕೆಗಳನ್ನು ಪೋಸ್ಟ್ ಮಾಡುವುದು, ನೀಡುವುದು, ಬರೆಯುವುದು, ಪ್ರಕಟಿಸುವುದು ಅಥವಾ ವಿತರಿಸುವುದನ್ನು ನಿರ್ಬಂಧಿಸಲಾಗಿದೆ, ಪ್ರತಿವಾದಿ ಕಮಲ್‌ಹಾಸನ್‌, ಪ್ರತಿವಾದಿ ಅಥವಾ ಅವರ ಏಜೆಂಟರು, ನಿಯೋಜಕರು, ಪ್ರತಿನಿಧಿಗಳು ಅಥವಾ ಅವರ ಅಡಿ ಅಥವಾ ಅವರ ಮೂಲಕ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಗಳಿಗೆ ಈ ತಾತ್ಕಾಲಿಕ ನಿರ್ಬಂಧಕಾಜ್ಞೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.ಅಲ್ಲದೆ, ದಾವೆ ಸಂಬಂಧ ಕಮಲ್‌ ಹಾಸನ್‌ಗೆ ಸಮನ್ಸ್‌ ಜಾರಿಗೊಳಿಸಿರುವ ನ್ಯಾಯಾಲಯ ವಿಚಾರಣೆಯನ್ನು ಆ.30ಕ್ಕೆ ಮುಂದೂಡಿದೆ.

PREV
Read more Articles on

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ