ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರವಧಿ ವಿಸ್ತರಣೆ ಇಲ್ಲ..!

KannadaprabhaNewsNetwork |  
Published : Nov 05, 2025, 01:30 AM IST
ನಗರಸಭೆ ಕಾರ್ಯಾಲಯ | Kannada Prabha

ಸಾರಾಂಶ

ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವಧಿಯನ್ನು ವಿಸ್ತರಿಸಬಹುದೆಂದು ಕನಸು ಕಾಣುತ್ತಿದ್ದ ಪ್ರತಿನಿಧಿಗಳಿಗೆ ಇದೀಗ ನಿರಾಸೆಯಾಗಿದೆ. ಕಾನೂನು ವ್ಯಾಪ್ತಿಯೊಳಗೆ ಅಧಿಕಾರವಧಿ ವಿಸ್ತರಣೆ ಮಾಡುವುದಕ್ಕೆ ಯಾವುದೇ ಅವಕಾಶವೂ ಇಲ್ಲದಿರುವುದರಿಂದ ಅಧಿಕಾರವಧಿ ವಿಸ್ತರಣೆ ‘ಕನಸು ಭಗ್ನ’ಗೊಂಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವಧಿಯನ್ನು ವಿಸ್ತರಿಸಬಹುದೆಂದು ಕನಸು ಕಾಣುತ್ತಿದ್ದ ಪ್ರತಿನಿಧಿಗಳಿಗೆ ಇದೀಗ ನಿರಾಸೆಯಾಗಿದೆ. ೧೩ ತಿಂಗಳ ಹೆಚ್ಚುವರಿ ಅವಧಿ ಆಡಳಿತ ನಡೆಸುವುದಕ್ಕೆ ಅವಕಾಶ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಕಾನೂನು ವ್ಯಾಪ್ತಿಯೊಳಗೆ ಅಧಿಕಾರವಧಿ ವಿಸ್ತರಣೆ ಮಾಡುವುದಕ್ಕೆ ಯಾವುದೇ ಅವಕಾಶವೂ ಇಲ್ಲದಿರುವುದರಿಂದ ಅಧಿಕಾರವಧಿ ವಿಸ್ತರಣೆ ‘ಕನಸು ಭಗ್ನ’ಗೊಂಡಿದೆ.

ಈಗಾಗಲೇ ಅವಧಿ ಮುಗಿದಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಗಳಿಗೆ ಬೀಗ ಹಾಕಲಾಗಿದೆ. ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾಯ್ದೆಗಳನ್ವಯ ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯರು ಯಾವುದೇ ಅಧಿಕಾರ ಚಲಾಯಿಸದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.

ಅವಧಿ ಮುಗಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸದಂತೆ ಕಲಬುರಗಿ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನೇ ಮುಂದಿಟ್ಟುಕೊಂಡು ಮಂಡ್ಯ ನಗರಸಭೆ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಯ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳಿಗೆ ೨೦೧೮ ರಲ್ಲಿ ಚುನಾವಣೆಗಳು ನಡೆದಿದ್ದವು. ನಂತರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಪ್ರಥಮ ಸಭೆಗಳು ಆಕ್ಟೋಬರ್ ಹಾಗೂ ನವೆಂಬರ್ ೨೦೧೮ ರಲ್ಲಿ ನಡೆದಿದ್ದವು. ಮೊದಲ ೩೦ ತಿಂಗಳ ಅಧ್ಯಕ್ಷರ ಅವಧಿ ಮುಗಿದ ನಂತರ ಎರಡನೇ ಅವಧಿಯ ಅಧ್ಯಕ್ಷರ ಆಯ್ಕೆ ಸಮಯದಲ್ಲಿ ಕೆಲವರು ಮೀಸಲು ನಿಗದಿ ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಪರಿಣಾಮವಾಗಿ ಎರಡನೇ ಅವಧಿ ೧೩ ತಿಂಗಳು ವಿಳಂಬವಾಗಿ ಅಧ್ಯಕ್ಷರ ಅಧಿಕಾರ ೧೭ ತಿಂಗಳಿಗೆ ಸೀಮಿತವಾಯಿತು.

ಈಗ ರಾಜ್ಯದ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವಧಿ ಮುಗಿಯುತ್ತಿದ್ದಂತೆ ಕೋರ್ಟ್ ಮೆಟ್ಟಿಲೇರಿದ್ದ ೬೦ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ತಮ್ಮ ಅಧಿಕಾರವಧಿ ೧೩ ತಿಂಗಳು ವಿಸ್ತರಿಸುವಂತೆ ಕೋರಿಕೆ ಇಟ್ಟಿದ್ದರು. ಆದರೆ, ವಾಸ್ತವದಲ್ಲಿ ಈ ೧೩ ತಿಂಗಳ ಅವಧಿಯಲ್ಲಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಕೌನ್ಸಿಲ್ ಸಭೆಗಳು ನಡೆದು ಅನುದಾನ ಹಂಚಿಕೆ ಹಾಗೂ ಸದಸ್ಯರು ಭತ್ಯೆಯನ್ನು ಪಡೆದಿದ್ದರು.

ನಿಯಮಬಾಹಿರವಾಗಿ ಕಚೇರಿ ಪ್ರವೇಶಕ್ಕೆ ಯತ್ನ:

ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವುದನ್ನು ಮುಂದಿಟ್ಟುಕೊಂಡು ಮಂಡ್ಯ ಜಿಲ್ಲೆಯ ಕೆಲ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು- ಸದಸ್ಯರು ನಿಯಮಬಾಹಿರವಾಗಿ ಕಚೇರಿ ಪ್ರವೇಶಿಸಿ ಅಧಿಕಾರ ಚಲಾಯಿಸಲು ಯತ್ನಿಸಿರುವ ಪ್ರಕರಣಗಳು ಅಲ್ಲಲ್ಲಿ ಜರುಗಿವೆ. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಾನೂನುಬದ್ಧ ಆದೇಶ ಹೊರಡಿಸಿ ಇತಿಶ್ರೀ ಹಾಡಿದ್ದಾರೆ.ಕಾನೂನು ಏನು ಹೇಳುತ್ತದೆ?

ಭಾರತ ಸಂವಿಧಾನ ಅನುಚ್ಚೇಧ ೨೪೩(ಯು)(೧) ರಂತೆ ನಗರ ಸ್ಥಳೀಯ ಸಂಸ್ಥೆಯ ಮೊದಲ ಸಭೆಯಿಂದ ಐದು ವರ್ಷಗಳಿಗೆ ಅದರ ಅಧಿಕಾರವಧಿ ಮುಗಿಯಬೇಕು ಎಂದು ಹೇಳಿದರೆ, ಕರ್ನಾಟಕ ಪೌರಸಭೆಗಳ ಅಧಿನಿಯಮ ೧೯೬೪ ಪ್ರಕರಣ ೧೮(೧-ಎ) ಸಹ ಯಾವುದೇ ನಗರ ಸ್ಥಳೀಯ ಸಂಸ್ಥೆ ಮೊದಲ ಸಭೆಯಿಂದ ಐದು ವರ್ಷಗಳ ಅವಧಿಗೆ ಅದರ ಅಧಿಕಾರ ಕೊನೆಗೊಳ್ಳುತ್ತದೆ ಎನ್ನುತ್ತದೆ. ಜಿಲ್ಲಾಧಿಕಾರಿ ಆದೇಶ

ಮಂಡ್ಯ ಜಿಲ್ಲಾಧಿಕಾರಿಗಳು ಮೇಲ್ಕಂಡ ಕಾಯ್ದೆಯನ್ವಯ ಆದೇಶ ಹೊರಡಿಸಿ ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯರು ಯಾವುದೆ ಅಧಿಕಾರ ಚಲಾಯಿಸದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸೂಕ್ತ ಕಾನೂನಿನ ಮನವರಿಕೆ ಮಾಡಿಕೊಡಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅವಧಿ ಮೀರಿದ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ. ಈ ಆದೇಶದೊಂದಿಗೆ ಮುಂದಿನ ೧೩ ತಿಂಗಳು ಅಧಿಕಾರ ವಿಸ್ತರಣೆಯ ಕನಸು ಕಾಣುತ್ತಿದ್ದ ಸದಸ್ಯರ ಕನಸಿಗೆ ಬಲೂನು ಚುಚ್ಚಿದಂತಾಗಿದ್ದು. ಎಲ್ಲ ಸದಸ್ಯರು ಈಗ ಮಾಜಿಗಳಾಗಿದ್ದಾರೆ.ಇಂದು ಚುನಾವಣೆ ದಿನಾಂಕ ಸಂಬಂಧ ಸಭೆ

ನಗರ ಸ್ಥಳೀಯ ಸಂಸ್ಥೆಗಳಿಗೆ ನ್ಯಾಯಾಲಯದ ಸೂಚನೆಯಂತೆ ಚುನಾವಣಾ ದಿನಾಂಕ ಸಂಬಂಧ ಚುನಾವಣಾ ಆಯೋಗ ಹಾಗೂ ಸರ್ಕಾರದ ಸಭೆ ನ.೫ (ಬುಧವಾರ) ನಡೆಯಲಿದೆ. ಸರ್ಕಾರದ ಅವೈಜ್ಞಾನಿಕ ಮೀಸಲು ನಿಗದಿ, ವಿಳಂಬ ಧೋರಣೆಯಿಂದ ಕಳೆದ ಕೌನ್ಸಿಲ್ ಅವಧಿ ಏಳು ವರ್ಷಗಳ ಕಾಲ ನಡೆದಂತಾಗಿದೆ. ಸರ್ಕಾರ ಇನ್ನಾದರೂ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಕಾನೂನು ಬದ್ಧವಾಗಿ ಮೀಸಲು ನಿಗದಿಪಡಿಸಿ ಸಕಾಲಕ್ಕೆ ಚುನಾವಣೆ ನಡೆಸಬೇಕು. ಆಡಳಿತ ವಿಕೇಂದ್ರೀಕರಣ ನೀತಿಯನ್ನು ಎತ್ತಿ ಹಿಡಿಯುವುದು ಅವಶ್ಯವಾಗಿದೆ.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ