ಜೊಲ್ಲೆ ಪ್ರಾಸಿಕ್ಯೂಷನ್‌ ಇಲ್ಲ, ಎಚ್‌ಡಿಕೆ-ರೆಡ್ಡಿ ದಾಖಲೆಗಳ ತರ್ಜುಮೆ ಕೇಳಿದ ಗೌರ್ನರ್‌

KannadaprabhaNewsNetwork |  
Published : Sep 03, 2024, 01:30 AM IST
ಗೆಹ್ಲೋತ್‌ | Kannada Prabha

ಸಾರಾಂಶ

ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಭಿಯೋಜನೆಗೆ (ಪ್ರಾಸಿಕ್ಯೂಷನ್‌) ಅನುಮತಿ ನೀಡಲು ರಾಜ್ಯಪಾಲರು ಭಾಷೆ ಹಾಗೂ ಅಸ್ಪಷ್ಟ ಮಾಹಿತಿ ಎಂಬ ತಾಂತ್ರಿಕ ಕಾರಣಗಳನ್ನು ಲೋಕಾಯುಕ್ತ ಪೊಲೀಸರ ಮುಂದಿಟ್ಟಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಗಿರೀಶ್ ಮಾದೇನಹಳ್ಳಿ ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಭಿಯೋಜನೆಗೆ (ಪ್ರಾಸಿಕ್ಯೂಷನ್‌) ಅನುಮತಿ ನೀಡಲು ರಾಜ್ಯಪಾಲರು ಭಾಷೆ ಹಾಗೂ ಅಸ್ಪಷ್ಟ ಮಾಹಿತಿ ಎಂಬ ತಾಂತ್ರಿಕ ಕಾರಣಗಳನ್ನು ಲೋಕಾಯುಕ್ತ ಪೊಲೀಸರ ಮುಂದಿಟ್ಟಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಮುಡಾ ಅಕ್ರಮ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡಿದ ನಂತರ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ಪ್ರಕರಣದಲ್ಲಿ ತಾಂತ್ರಿಕ ಕಾರಣ ಮುಂದಿಟ್ಟಿರುವುದು ಕುತೂಹಲ ಮೂಡಿಸಿದೆ.

ಗಣಿಗಾರಿಕೆಗೆ ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಅಕ್ರಮ ಆಸ್ತಿ ಸಂಪಾದನೆ ಪ್ರಕರಣಗಳ ಸಂಬಂಧ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ದಾಖಲೆಗಳನ್ನು ಕನ್ನಡದಿಂದ ಭಾಷಾಂತರಿಸಿ ಸಲ್ಲಿಸುವಂತೆ ಪೊಲೀಸರಿಗೆ ರಾಜ್ಯಪಾಲರು ಸೂಚಿಸಿದ್ದಾರೆ.

ಇನ್ನು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ವಿರುದ್ಧದ ಪ್ರಕರಣದಲ್ಲಿ ಮಾಹಿತಿ ಅಸ್ಪಷ್ಟ ಎಂದಿರುವ ರಾಜ್ಯಪಾಲರು, ಈ ಬಗ್ಗೆ ಹೆಚ್ಚುವರಿ ಮಾಹಿತಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿದ್ದ ಮಾಜಿ ಸಚಿವೆ ಹಾಗೂ ಬೆಳಗಾವಿ ಜಿಲ್ಲೆ ನಿಪ್ಪಾಣಿ ಕ್ಷೇತ್ರದ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ನೀಡಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಾವಿರಕ್ಕೂ ಅಧಿಕ ಪುಟಗಳ ದಾಖಲೆಗಳು:

ಆದಾಯಕ್ಕಿಂತಲೂ ಅಧಿಕ ಆಸ್ತಿ ಸಂಪಾದನೆ ಆರೋಪ ಸಂಬಂಧ 9 ವರ್ಷಗಳ ಹಿಂದೆ ಜನಾರ್ದನ ರೆಡ್ಡಿ ವಿರುದ್ಧ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸಿದ್ದರು. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು, ಆರೋಪ ಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಮೇ 31ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಪತ್ರ ಸ್ವೀಕರಿಸಿದ ರಾಜ್ಯಪಾಲರು, ಪ್ರಕರಣ ಸಂಬಂಧ ಕೆಲ ಮಾಹಿತಿಗಳಿಗೆ ಸ್ಪಷ್ಟೀಕರಣ ಕೋರಿ ಜೂ.26 ಲೋಕಾಯುಕ್ತ ಪೊಲೀಸರಿಗೆ ಪತ್ರ ಕಳುಹಿಸಿದರು. ಇದಕ್ಕೆ ಪೊಲೀಸರು ಉತ್ತರಿಸಿದ ಬಳಿಕ ಭಾಷಾ ಸಮಸ್ಯೆ ಉದ್ಭವಿಸಿದೆ.

ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರಿಸಿ ಸಲ್ಲಿಸುವಂತೆ ರಾಜ್ಯಪಾಲರು ಆ.28ರಂದು ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದಾರೆ. ಹೀಗಾಗಿ ರೆಡ್ಡಿ ಅವರ ವಿರುದ್ಧ ಸುಮಾರು ಒಂದು ಸಾವಿರಕ್ಕೂ ಅಧಿಕ ಪುಟಗಳ ದಾಖಲೆಗಳನ್ನು ಈಗ ಅಧಿಕೃತ ಭಾಷಾ ತಜ್ಞರ ಮೂಲಕ ತರ್ಜುಮೆ ಮಾಡುವ ಅನಿವಾರ್ಯತೆ ಪೊಲೀಸರಿಗೆ ಎದುರಾಗಿದೆ ಎಂದು ಲೋಕಾಯುಕ್ತದ ಮೂಲಗಳು ‘ಕನ್ನಡಪ್ರಭ’ ಮಾಹಿತಿ ನೀಡಿವೆ.

ಕುಮಾರಸ್ವಾಮಿ ವಿರುದ್ಧ ತರ್ಜುಮೆ ಸಮಸ್ಯೆ:

ಅದೇ ರೀತಿ 2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ 550 ಎಕರೆ ಭೂಮಿಯನ್ನು ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಅಕ್ರಮ ಗಣಿ ಗುತ್ತಿಗೆ ನೀಡಿದ ಪ್ರಕರಣ ಸಂಬಂಧ ಕೇಂದ್ರ ಸಚಿವ ಹಾಗೂ ಜೆಡಿಎಸ್ ಕುಮಾರಸ್ವಾಮಿ ವಿರುದ್ಧ ತನಿಖೆ ಮುಕ್ತಾಯಗೊಳಿಸಿದ್ದ ಲೋಕಾಯುಕ್ತ ಎಸ್‌ಐಟಿ ಪೊಲೀಸರು, 2023ರ ನವೆಂಬರ್‌ನಲ್ಲಿ ಆರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‌ ಅನುಮತಿ ಕೋರಿದ್ದರು. ಆದರೆ ಈ ಪ್ರಕರಣದಲ್ಲಿ ಸಹ ಎರಡು ಬಾರಿ ಸ್ಪಷ್ಟೀಕರಣ ಕೇಳಿದ ರಾಜ್ಯಪಾಲರು, ರೆಡ್ಡಿ ಬಳಿಕ ಕುಮಾರಸ್ವಾಮಿ ಪ್ರಕರಣದಲ್ಲಿ ಭಾಷಾ ತೊಡಕನ್ನು ಕೊಟ್ಟಿದ್ದಾರೆ. ಆ.29ರಂದು ಕುಮಾರಸ್ವಾಮಿ ವಿರುದ್ಧ ಪ್ರಕರಣದ ದಾಖಲೆಗಳನ್ನು ಕನ್ನಡದಿಂದ ಇಂಗ್ಲೀಷ್‌ಗೆ ತರ್ಜುಮೆ ಮಾಡಿ ಸಲ್ಲಿಸುವಂತೆ ಲೋಕಾಯುಕ್ತ ಎಸ್‌ಐಟಿಗೆ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಜೊಲ್ಲೆ-ನಿರಾಣಿ ನಿರಾಳ?

ಇನ್ನು ಶಶಿಕಲಾ ಜೊಲ್ಲೆ ಅವರು ಸಚಿವರಾಗಿದ್ದ ಅವಧಿಯಲ್ಲಿ ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಗುತ್ತಿಗೆ ನೀಡಲು ಕಿಕ್‌ ಬ್ಯಾಕ್ ಪಡೆದಿದ್ದಾರೆಂದು ಆರೋಪಿಸಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಅದರನ್ವಯ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದು, ಲೋಕಾಯುಕ್ತ ತನಿಖೆ ತೂಗುಗತ್ತಿಯಿಂದ ಶಶಿಕಲಾ ಜೊಲ್ಲೆ ನಿರಾಳರಾಗಿದ್ದಾರೆ. ಇನ್ನು ವಿಶ್ವ ಬಂಡಾವಳ ಹೂಡಿಕೆದಾರರ ಸಮಾವೇಶದ ಕಿರುಚಿತ್ರವೊಂದರ ವಿಡಿಯೋ ಚಿತ್ರೀಕರಣಕ್ಕೆ 4.5 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆಗೆ ಪ್ರಾಸಿಕ್ಯೂಷನ್‌ ಒಪ್ಪಿಗೆ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಕೋರಿದ್ದ ರಾಜ್ಯಪಾಲರಿಗೆ ಸ್ಪಷ್ಟೀಕರಣ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

==

ಭಾಷಾ ಸಮಸ್ಯೆ ಇದೇ ಮೊದಲು ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖೆ ಹಾಗೂ ಆರೋಪ ಪಟ್ಟಿ ಸಲ್ಲಿಕೆಗೆ ಪ್ರಾಸಿಕ್ಯೂಷನ್‌ ಅನುಮತಿ ಪಡೆಯಲು ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಪಾಲರಿಗೆ ಭಾಷಾಂತರಿಸಿ ದಾಖಲೆಗಳನ್ನು ಸಲ್ಲಿಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.

ಮುಡಾ ಸೇರಿದಂತೆ ಇತರೆ ಭೂ ಹಗರಣಗಳ ಸಂಬಂಧ ಖಾಸಗಿ ವ್ಯಕ್ತಿಗಳ ದೂರು ಆಧರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಆದರೆ ಲೋಕಾಯುಕ್ತ ಪೊಲೀಸರ ಮನವಿಗೆ ಭಾಷೆ ಸಮಸ್ಯೆ ಎದುರಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ನಗರದಲ್ಲಿ ಜೆಡಿಎಸ್‌ ಬೃಹತ್ ಸಮಾವೇಶ
ಮಳೆರಾಜೇಂದ್ರಸ್ವಾಮಿ ವೈಭವದ ಮಹಾರಥೋತ್ಸವ