ಕನ್ನಡಪ್ರಭ ವಾರ್ತೆ ಹಾಸನ
ಆರ್‌ಎಸ್‌ಎಸ್‌ನ ಶಕ್ತಿ ಈ ದೇಶದ ಶಕ್ತಿಯಾಗಿದೆ. ಈ ಸಂಘಟನೆ ಏನಾದರೂ ಇಲ್ಲದೇ ಇದ್ದರೆ ಇವತ್ತು ಈ ದೇಶದ ಚರಿತ್ರೆಯೇ ಬೇರೆ ಆಗುತಿತ್ತು. ಕಾಂಗ್ರೆಸ್‌ನ ಯಾವುದೇ ಶಕ್ತಿ ಜನರ ಮಧ್ಯೆ ಕೆಲಸ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣ ಸ್ವಾಮಿ ಟೀಕಿಸಿದರು.ಹಾಸನಾಂಬೆ ದೇವಿ ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ನರಿಯ ಕೂಗು ಗಿರಿಗೆ ಮುಟ್ಟಲಾರದ ವಿಚಾರ. ನರಿ ಕೂಗಾಡಿದರೇ ಗಿರಿ ಕಳಚಿ ಬೀಳುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಹೇಳಿಕೆಗೆ ವ್ಯಂಗ್ಯವಾಡಿ, ಆರ್‌ಎಸ್‌ಎಸ್‌ನ ಶಕ್ತಿ ಭಾರತ ದೇಶದ ಶಕ್ತಿಯಾಗಿದೆ ಎಂದರು. ಈ ಸಂಘಟನೆ ಏನಾದರೂ ಇಲ್ಲದೇ ಇದ್ದರೇ ಇವತ್ತು ಈ ದೇಶದ ಚರಿತ್ರೆಯೇ ಬೇರೆ ಆಗುತಿತ್ತು. ಯಾವ ಕಾರಣಕ್ಕೆ ಈ ದೇಶ ವಿಭಜನೆ ಆಯಿತು ಅದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು. ಮುಂದೆ ಅಂತಹ ಪರಿಸ್ಥಿತಿ ಬಂದರೂ ಬರಬಹುದು. ಅದನ್ನ ತಡೆಯಲು ಈ ಶಕ್ತಿ ಎಂಬುದು ಆರ್‌ಎಸ್‌ಎಸ್ ಮತ್ತು ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್‌ನ ಯಾವುದೇ ಶಕ್ತಿ ಜನರ ಮಧ್ಯ ಕೆಲಸ ಮಾಡುತ್ತಿಲ್ಲ. ಬರೀ ೧೬ರಲ್ಲಿ ೪ ಆಗಿ ಉಳಿದಿದೆ. ದೇಶದ ರಕ್ಷಣೆಗೆ ಒಂದಾಗಿ ಎಂಬುದು ಆರ್‌ಎಸ್‌ಎಸ್ ಮಾತು ಎಂದು ಹೇಳಿದರು.ಈ ರಾಜ್ಯದ ಜನರಿಗೆ ಉತ್ತಮವಾದ ಭಾಗ್ಯವನ್ನು ಕಲ್ಪಿಸಲಿ ತಾಯಿ. ಪದ್ಧತಿಯಂತೆ ವರ್ಷಕ್ಕೊಮ್ಮೆ ನಡೆಯುವ ಈ ಪೂಜೆ ಪುರಸ್ಕಾರಗಳಲ್ಲಿ ಭಾಗಿಯಾಗಲು ನನಗೆ ಅವಕಾಶ ಸಿಕ್ಕಿದೆ. ನಾವು ಕುಟುಂಬ ಸಮೇತರಾಗಿ ಬಂದು ತಾಯಿ ದರ್ಶನವನ್ನು ಮಾಡಲಾಗಿದೆ. ರಾಜ್ಯದಲ್ಲಿ ಸುಭೀಕ್ಷವಾಗಿ ರೈತರ ಬೆಳೆ ಉತ್ತಮವಾಗಿ ಬಂದು ಒಳ್ಳೆಯ ದರಗಳು ಸಿಗಬೇಕು. ಹಿಂದುಳಿದವರು, ದಲಿತರು ಸೇರಿದಂತೆ ಪ್ರತಿಯೊಬ್ಬರೂ ಕೂಡ ಆ ತಾಯಿಯ ಆಶೀರ್ವಾದದಿಂದ ನೆಮ್ಮದಿ ಪಡೆಯಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.
ಇದೇ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿಜೆಪಿ ಮುಖಂಡ ಎಸ್.ಡಿ. ಚಂದ್ರು ಇತರರು ಉಪಸ್ಥಿತರಿದ್ದರು.