ಪುಸ್ತಕ ಪ್ರಕಟಣೆಗೆ ಸರ್ಕಾರದ ನೆರವಿಲ್ಲ

KannadaprabhaNewsNetwork |  
Published : Jul 20, 2026, 12:15 AM IST
 | Kannada Prabha

ಸಾರಾಂಶ

ಸರ್ಕಾರ ಪುಸ್ತಕಗಳ ಪ್ರಕಟಣೆಗೆ ಹಣಕಾಸಿನ ನೆರವು ಒದಗಿಸುತ್ತಿಲ್ಲ. ಆದ್ದರಿಂದ ಕನ್ನಡದಲ್ಲೇ ಒಂದು ಪುಸ್ತಕ ಪ್ರಿಂಟ್ ಹಾಕಿ ಒಂದು ಸಾವಿರ ಪ್ರತಿ ಹಾಕಿಸಿದರೆ ಅದನ್ನು ಕಾಂಪ್ಲಿಮೆಂಟ್ ಕಾಫಿಯಾಗಿಯೇ ಕೊಡುವಂತಹ ಪರಿಸ್ಥಿತಿ ಇದೆ ಎಂದು ಸಂಸ್ಕೃತಿ ಚಿಂತಕ ಪ್ರೊ.ರಾಜಪ್ಪ ದಳವಾಯಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಸರ್ಕಾರ ಪುಸ್ತಕಗಳ ಪ್ರಕಟಣೆಗೆ ಹಣಕಾಸಿನ ನೆರವು ಒದಗಿಸುತ್ತಿಲ್ಲ. ಆದ್ದರಿಂದ ಕನ್ನಡದಲ್ಲೇ ಒಂದು ಪುಸ್ತಕ ಪ್ರಿಂಟ್ ಹಾಕಿ ಒಂದು ಸಾವಿರ ಪ್ರತಿ ಹಾಕಿಸಿದರೆ ಅದನ್ನು ಕಾಂಪ್ಲಿಮೆಂಟ್ ಕಾಫಿಯಾಗಿಯೇ ಕೊಡುವಂತಹ ಪರಿಸ್ಥಿತಿ ಇದೆ ಎಂದು ಸಂಸ್ಕೃತಿ ಚಿಂತಕ ಪ್ರೊ.ರಾಜಪ್ಪ ದಳವಾಯಿ ಕಳವಳ ವ್ಯಕ್ತಪಡಿಸಿದರು.

ಅರುಣೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ, ಆಕೃತಿ ಪ್ರಕಾಶ ಹಾಗೂ ಜಲಜಂಬೂ ಲಿಂಕ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ರವಿಕುಮಾರ್ ನೀಹ ಅವರ ಕಾದಂಬರಿ ನೀಗೊನಿ ಮತ್ತು ಮೂರ್ತಿ ತಿಮ್ಮನಹಳ್ಳಿಯವರ ಕಥಾ ಸಂಕಲನ ಕರುಪ್ಡಿ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಪುಸ್ತಕವನ್ನು ಕೊಂಡುಕೊಳ್ಳುವವರು ಯಾರೂ ಇಲ್ಲ. ಪುಸ್ತಕ ನೋಡೋರು ಜಾಸ್ತಿ ಇದ್ದಾರೆ. ಆದರೆ ಕೊಂಡು ಕೊಳ್ಳುವವರು ಕಡಿಮೆ. ಯಾಕೆಂದರೆ ಕೊಂಡುಕೊಳ್ಳುವುದು ಒಂದು ಬಾಬ್ತಲ್ಲ. ಪುಸ್ತಕ ಕೊಂಡುಕೊಂಡರೆ ಮನೆಯಲ್ಲೂ ಬಯ್ಯುವ ಪರಿಸ್ಥಿತಿ ಇದೆ. ಪುಸ್ತಕ ಕೊಂಡುಕೊಳ್ಳುವುದು ವೇಸ್ಟ್ ಎನ್ನುವ ಸ್ಥಿತಿ ಇದೆ. ಪುಸ್ತಕವನ್ನು ಕದ್ದೊಯ್ಯುವುದಿಲ್ಲ. ಹಾಗಾಗಿ ನೆಮ್ಮದಿಯಿಂದ ಮನೆಯಿಂದ ಹೊರಗೆ ಹೋಗಬಹುದು. ಪುಸ್ತಕಗಳ ಬಂಡಲ್‌ಗಳನ್ನು ಬಸ್ ನಿಲ್ದಾಣಗಳಲ್ಲಿ ಬಿಟ್ಟು ತಿಂಡಿ ತಿಂದು ಬರುವವರೆಗೆ ಆ ಪುಸ್ತಕದ ಬಂಡಲ್‌ಗಳನ್ನು ಯಾರೂ ಕದ್ದುಕೊಂಡು ಹೋಗುವವರಿಲ್ಲ. ಕದಿಯದೇ ಇರುವ ಒಂದು ವಸ್ತು ಅಂದರೆ ಪುಸ್ತಕ ಮಾತ್ರ ಎಂದರು.

ಮಲೆಯಾಳಂ ಭಾಷೆಯಲ್ಲಿ ಕೇರಳದಲ್ಲಿ ಲೇಖಕನ ಮೊದಲನೆಯ ಕೃತಿ ಬರೆದರೆ ಅಂತಹ ಕೃತಿಯ 10 ಸಾವಿರ ಪ್ರತಿಗಳನ್ನು ಮುದ್ರಣ ಹಾಕಿಸುತ್ತಾರೆ. ಅದು ಹೆಚ್ಚುಕಡಿಮೆ ಆರು ತಿಂಗಳು, ಒಂದು ವರ್ಷದಲ್ಲಿ ಮರು ಮುದ್ರಣ ಕಾಣುತ್ತದೆ. ಅಲ್ಲಿ ಪುಸ್ತಕಗಳ ಪೂರೈಕೆಗೆ ವ್ಯವಸ್ಥೆ ಇದೆ. ಹಳ್ಳಿಹಳ್ಳಿಗೂ ತಲುಪಿಸುವ ವ್ಯವಸ್ಥೆ ಇದೆ. ನಮ್ಮಲ್ಲಿ ಜಿಲ್ಲಾ ಕೇಂದ್ರಗಳಿಗೆ ತಲುಪಿಸುವುದೇ ಕಷ್ಟವಾಗಿದೆ ಎಂದು ಪ್ರೊ.ರಾಜಪ್ಪ ದಳವಾಯಿ ಹೇಳಿದರು.

ನೀಗೊನಿ ಮತ್ತು ಕರುಪ್ಡಿ ಕೃತಿಗಳಲ್ಲಿ ಒಂದು ಪಾತ್ರವನ್ನು ನೋಡುವ ಆ ಪಾತ್ರದ ಕ್ಯಾರಿಕೇಚರ್ ಚಿತ್ರಿಸುವ ಒಂದು ಕಿಲಾಡಿತನವೂ ರೈಟರ್‌ಗೆ ಇರಬೇಕು. ಆ ಎರಡು ಅಂಶಗಳು ರವಿಕುಮಾರ್ ನೀಹ ಮತ್ತು ಮೂರ್ತಿ ತಿಮ್ಮನಹಳ್ಳಿ ಅವರಲ್ಲಿದೆ. ನಮ್ಮಲ್ಲಿ ಕಥೆಗಾರರಾಗಿರುವುದಕ್ಕಿಂತ ಸೋತ ಕಥೆಗಾರರೇ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಕಥೆಗಾರರಾಗಬೇಕು ಎಂಬ ಹಂಬಲದಿಂದ ಬರೆದವರು ಇದ್ದಾರೆ. ಅವರು ತುಂಬ ಒಳ್ಳೆಯ ಕಥೆಗಳೇ ಬರೆದಿದ್ದಾರೆ. ಕಥೆಗಾರ, ಕಾದಂಬರಿಕಾರ ಪಾತ್ರಗಳನ್ನು ಚನ್ನಾಗಿ ಚಿತ್ರಿಸಲು ಅವಕಾಶವಿದೆ. ಆ ಪಾತ್ರಗಳಿಗೆ ಹೊಸ ಜೀವವನ್ನು ಕೊಡುವ, ಘಟನಾವಳಿಗಳನ್ನು ಚಿತ್ರಿಸಲು ಅವಕಾಶ ಇರುತ್ತದೆ. ನಮ್ಮ ಊರು, ಹಳ್ಳಿಯಲ್ಲಿ ಪ್ರತಿಯೊಬ್ಬರೂ ಕತೆಗಾರರೇ ಇದ್ದಾರೆ.ಯಾವುದೇ ಪ್ರಸಂಗವನ್ನು ಹೇಳುವುದಾದರೂ ಅದನ್ನು ಕತೆಯ ರೂಪದಲ್ಲೇ ಹೇಳುತ್ತಾರೆ ಎಂದು ತಿಳಿಸಿದರು. ಸಮಾಜ ವಿಜ್ಞಾನಿ ಡಾ.ಸಿ.ಜಿ.ಲಕ್ಷ್ಮೀಪತಿ ಮಾತನಾಡಿ, ನೀಗೊನಿ ಒಂದು ಚಾರಿತ್ರಿಕ ಕಾದಂಬರಿ, ಮೌಖಿಕ ಚರಿತ್ರೆಯನ್ನು ಪಠ್ಯವಾಗಿಸುವ ಕೆಲಸ ನಡೆದಿದೆ.ಇಂದಿನ ಮುದ್ರಣ ಭಾಷೆಯ ಕಾಲದಲ್ಲಿಯೂ ಆಡು ಭಾಷೆಯಲ್ಲಿಯೇ ಇಡೀ ಕಾದಂಬರಿ ರಚಿತವಾಗಿದ್ದು, ಓದಿ ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ. ಬ್ರಿಟಿಷರ ಕಾಲದ ಆಡಳಿತವನ್ನು ಗ್ರಹಿಸಲು ,ಅವರ ಅಭಿವೃದ್ದಿಯ ಮಜಲುಗಳನ್ನು ಅರ್ಥ ಮಾಡಿಕೊಳ್ಳಲು ಈ ಕಾದಂಬರಿ ಸಹಾಯ ಮಾಡುತ್ತದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.ಕಾದಂಬರಿಕಾರ ಮೋದೂರು ತೇಜ, ಕಥೆಗಾರ ಡಾ.ಗೋವಿಂದರಾಜು ಎಂ ಕಲ್ಲೂರು ಕೃತಿಯ ಕುರಿತು ಮಾತನಾಡಿದರು.

ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷೆ ಡಾ.ಆಶಾರಾಣಿ ಬಗ್ಗನಡು, ಡಾ.ರವಿಕುಮಾರ್ ನೀಹ, ತಿಮ್ಮನಹಳ್ಳಿ, ಪ್ರಕಾಶಕ ಗುರುಪ್ರಸಾದ್ ಹೆಜ್ಜಾಜಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಜಿಟಲ್ ಯುಗದಲ್ಲಿ ರೋಚಕತೆ ಬೇಕಿದೆಯೇ ಹೊರತು ಸತ್ಯವಲ್ಲ: ವೈ.ಎಸ್.ವಿ.ದತ್ತ
ಶೀಘ್ರ ರೇಲ್ವೆ ಸಚಿವರ ಭೇಟಿ ಮಾಡುವೆ: ಕೋಟಾ ಶ್ರೀನಿವಾಸ ಪೂಜಾರಿ