- ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಕ್ಯಾನ್ಸರ್ ತಡೆಯುವ ಅಂಶ ಬಯಲು: ತುಮ್‌ಕೋಸ್ ಅಧ್ಯಕ್ಷ ಮಾಹಿತಿ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಎಲ್ಲಿಯೋ ಬೆಳೆಸುವಂತಹ ವೀಳ್ಯೆದೆಲೆ, ಅಡಕೆ ಈ ಎರಡರ ಮಧ್ಯೆ ಮತ್ತೆಲ್ಲಿಯೋ ಹುಟ್ಟಿದ ಸುಣ್ಣವು ಸೇರಿ ಆರೋಗ್ಯಕರವಾದ ತಾಂಬೂಲ ತಯಾರಾಗುತ್ತದೆ. ತಾಂಬೂಲದಲ್ಲಿ ಕ್ಯಾನ್ಸರ್‌ನಂತಹ ಕಾಯಿಲೆ ವಾಸಿಯಾಗಲು ರಾಮಬಾಣದಂತಹ ಔಷಧಿಯ ಗುಣವಿರುತ್ತದೆ. ಇಂತಹ ಔಷಧಿಯ ಗುಣವಿರುವಂತಹ ಅಡಕೆ ಅಪಾಯಕಾರಿ ಬೆಳೆಯಲ್ಲ ಎಂದು ತುಮ್ ಕೋಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ತಿಳಿಸಿದ್ದಾರೆ.ಅಡಕೆ ಮತ್ತು ವೀಳ್ಯೆದೆಲೆ ಸೇವನೆಯಿಂದ ಕ್ಯಾನ್ಸರ್ ಗುಣಮುಖವಾಗುವ ಔಷಧೀಯ ಗುಣ ಹೊಂದಿದೆ. ಈ ಬಗ್ಗೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯಲ್ಲಿರುವ ಜಡ್ಡು ಆರ್ಯುವೇದ ಸಂಶೋಧನಾ ಕೇಂದ್ರ ಹಾಗೂ ಮಂಗಳೂರಿನಲ್ಲಿರುವ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಗಳನ್ನು ಒಳಗೊಂಡ ವಿಜ್ಞಾನಿಗಳ ತಂಡ ಇಲಿಗಳ ಮೇಲೆ ಮಾಡಿದ ಪ್ರಯೋಗದಿಂದ ಈ ವಿಷಯ ದೃಢಪಟ್ಟಿದೆ ಎಂದು ವಿವರಿಸಿದ್ದಾರೆ.
ಅಡಕೆ ಮತ್ತು ವೀಳ್ಯೆದೆಲೆ ಅನಾದಿ ಕಾಲದಿಂದಲೂ ಶುಭ ಸಮಾರಂಭಗಳಲ್ಲಿ ಇಂದಿಗೂ ಬಳಕೆ ಮಾಡುತ್ತಿದ್ದಾರೆ. ಊಟದ ನಂತರ ಎಲೆ ಮತ್ತು ಅಡಕೆ ಜೊತೆ ಸುಣ್ಣ ಸೇರಿಸಿ, ತಾಂಬೂಲವಾಗಿ ಸೇವಿಸುವ ಪದ್ಧತಿ ಇಂದಿಗೂ, ಎಂದಿಗೂ ಇದೆ. ಅಡಕೆ ಮತ್ತು ವೀಳ್ಯೆದೆಲೆಗಳನ್ನು ಬಳಸಿಕೊಂಡು ಇದಕ್ಕೆ ಬೇರೆ ಬಗೆಯ 7-8 ಗಿಡಲಿಕೆಗಳನ್ನು ಸೇರಿಸಿ, ತಯಾರಿಸಿದ ಪೊಗಸಾರಂ ಎನ್ನುವ ಒಂದು ಪಾಲಿ ಹರ್ಬಲ್ ಕ್ಯಾನ್ಸರ್ ವಿರೋಧಿ ಗುಣವನ್ನು ತಿಳಿಯುವ ಸಲುವಾಗಿ ಇಲಿಗಳ ಮೇಲೆ ಪ್ರಯೋಗಿಸಲಾಗಿತ್ತು ಎಂದು ಹೇಳಿದ್ದಾರೆ.
ಮನುಷ್ಯನ ಹುಟ್ಟಿನಿಂದ ಹಿಡಿದು ಅಂತ್ಯದವರೆಗೂ ಎಲೆ, ಅಡಕೆಯ ಮಹತ್ವ ಪ್ರಮುಖವಾಗಿದೆ. ಇಂತಹ ಔಷಧಿ ಗುಣದ ಎಲೆ-ಅಡಕೆಯು ಧಾರ್ಮಿಕ ಕಾರ್ಯಕ್ರಮಗಳು, ಮಠ, ಮಂದಿರಗಳಲ್ಲಿನ ಪೂಜೆಗಳಿಗೂ ಬಳಕೆಯಾಗುತ್ತದೆ. ಅಡಕೆಯನ್ನು ಇನ್ನು ಹೆಚ್ಚಿನ ಸಂಶೋಧನೆಗಳಿಗೆ ಒಳಪಡಿಸಿ, ಅಡಕೆಯ ಮೌಲ್ಯವರ್ಧನೆಗೆ ಉತ್ತೇಜನ ನೀಡುವುದು ಅವಶ್ಯಕವಾಗಿದೆ. ಈ ಸಂಶೋಧನೆ ವಿವರಗಳನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಗೆ ಒಪ್ಪಿಸಿ, ಅಡಕೆ ಹಾನಿಕಾರಕವಲ್ಲ ಎಂಬುದನ್ನು ದೃಢೀಕರಿಸಲು ಅಡಕೆ ಮಾರಾಟ ಸಹಕಾರ ಸಂಘಗಳು ಶ್ರಮಿಸಲಿವೆ. ಅಡಕೆ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
-3ಕೆಸಿಎನ್ಜಿ1: ವೀಳ್ಯೆದೆಲೆ ಮತ್ತು ಅಡಕೆ.