ಕನ್ನಡಪ್ರಭ ವಾರ್ತೆ ಉಡುಪಿ ಯುದ್ಧಪೀಡಿತ ಇಸ್ರೇಲ್‌ನಲ್ಲಿರುವ ಉಡುಪಿ ಜಿಲ್ಲೆಯ ಯಾವುದೇ ಉದ್ಯೋಗಿಗಳು ಅಥವಾ ಪ್ರವಾಸಿಗರು ಸಮಸ್ಯೆಗೀಡಾಗಿರುವ ಬಗ್ಗೆ ಇದುವರೆಗೆ ಜಿಲ್ಲಾಡಳಿತಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಿಂದ ಸಾಕಷ್ಟು ಹೋಂ ನರ್ಸ್, ನರ್ಸ್‌ಗಳು ಮತ್ತು ಇತರ ಉದ್ಯೋಗಿಗಳು ಇಸ್ರೇಲ್‌ನಲ್ಲಿದ್ದಾರೆ. ಆದರೆ ಖಚಿತ ಅಂಕಿಸಂಖ್ಯೆಗಳು ಲಭ್ಯ ಇಲ್ಲ. ಇದುವರೆಗೆ ಅವರ್ಯಾರು ತೊಂದರೆಗೊಳಗಾಗಿರುವ ಬಗ್ಗೆ ಸರ್ಕಾರ ಅಥವಾ ರಾಯಭಾರಿ ಕಚೇರಿಯಿಂದ ಮಾಹಿತಿ ಬಂದಿಲ್ಲ. ಸ್ಥಳೀಯವಾಗಿ ಕೂಡ ಯಾರೂ ಮಾಹಿತಿ ನೀಡಿಲ್ಲ ಎಂದವರು ಹೇಳಿದ್ದಾರೆ. ಇಸ್ರೇಲ್‌ನಲ್ಲಿ ಜಿಲ್ಲೆಯವರು ಸಂಕಷ್ಟದಲ್ಲಿ ಇದ್ದರೆ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಬಹುದು. ಕುಟುಂಬದವರು ಜಿಲ್ಲಾಡಳಿತಕ್ಕೆ ಅಲ್ಲಿನ ಪರಿಸ್ಥಿತಿಯನ್ನು ತಿಳಿಸಬಹುದು. ಉಡುಪಿ ಜಿಲ್ಲಾಡಳಿತ ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತದೆ ಎಂದರು. * ಕಂಟ್ರೋಲ್ ರೂಂ ತೆರೆದ ಜಿಲ್ಲಾಡಳಿತ ಇಸ್ರೇಲ್‌ನಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ಹೋಗಿರುವ ಮತ್ತು ವಾಸವಾಗಿರುವ ಉಡುಪಿ ಜಿಲ್ಲೆಗೆ ಸಂಬಂಧಪಟ್ಟವರಿದ್ದಲ್ಲಿ ಅವರ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ ಸಂಖ್ಯೆ: 1077/ 0820-2574802ಗೆ ಕರೆ ಮಾಡಿ ಕೂಡಲೇ ಮಾಹಿತಿ ನೀಡುವಂತೆ ಕೋರಲಾಗಿದೆ. ಅಥವಾ ರಾಜ್ಯ ಸರ್ಕಾರದ ತುರ್ತು ಸಂಖ್ಯೆ: 080-22340676, 080-22253707 ಮಾಹಿತಿ ನೀಡುವಂತೆ ತಿಳಿಸಿದೆ.